ದಾವಣಗೆರೆ ಜಿಲ್ಲೆಯ ಕ್ಷೇತ್ರವಾರು ಮತದಾರರ, ಮತಗಟ್ಟೆಗಳ ಸಂಪೂರ್ಣ ವಿವರ
ದಾವಣಗೆರೆ, ಮಾರ್ಚ್ 29: ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 29ರ ಬುಧವಾರದಿಂದಲೇ ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಜಿಲ್ಲೆಯಾದ್ಯಂತ 24 ಗಂಟೆಯೊಳಗಾಗಿ ಫ್ಲೆಕ್ಸ್, ಬ್ಯಾನರ್, ಹೊರ್ಡೀಂಗ್ಸ್ ತೆರವುಗೊಳಿಸಲಾಗುವುದು. ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚುನಾವಣಾ ವೇಳೆಪಟ್ಟಿ ಬಗ್ಗೆ ಮಾಹಿತಿ ನೀಡಿದ ಅವರು, ದಿನಾಂಕ ಏ. 13 ರಂದು ಅಧಿಸೂಚನೆ ಪ್ರಕಟಣೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಏ. 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 24ರ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 10ಕ್ಕೆ ಮತದಾನದ ಜರುಗಲಿದೆ. 13ರ ಶನಿವಾರ ಮತ ಎಣಿಕೆ ನಡೆಯಲಿದೆ ಹಾಗೂ ಮೇ 15ರೊಳಗೆ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ 1,683 ಮತಗಟ್ಟೆ
ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ 7,15,168 ಪುರುಷರು, 7,12,510 ಮಹಿಳೆಯರು, 118 ಇತರರು, 466 ಸೇವಾ ಮತದಾರರು ಒಳಗೊಂಡಂತೆ 14,28,262 ಮತದಾರರಿದ್ದಾರೆ. ಸಾರ್ವತ್ರಿಕ ಚುನಾವಣೆಗಾಗಿ ಎಂ-3 ಮಾದರಿಯ 3241 ಬ್ಯಾಲೆಟ್, 2274 ಕಂಟ್ರೋಲ್ ಯೂನಿಟ್, 2463 ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಇನ್ನು ಎರಡು ಮೂರು ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಚುನಾವಣಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1,683 ಮತಗಟ್ಟೆಗಳಿವೆ. ದಾವಣಗೆರೆ ದಕ್ಷಿಣದಲ್ಲಿ ಈವರೆಗೆ ಎರಡು ಹೆಚ್ಚುವರಿ ಮತಗಟ್ಟೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಅನುಗುಣವಾಗಿ ಹೆಚ್ಚುವರಿ ಮತಗಟ್ಟೆಗಳ ಪ್ರಸ್ತಾವನೆಯನ್ನು ಆಯೋಗಕ್ಕೆ ಸಲ್ಲಿಸಲಾಗುವುದು. ಅಭ್ಯರ್ಥಿ, ಹಿಂದಿನ ಚುನಾವಣೆಯಲ್ಲಿ ನಡೆದ ಘಟನೆಗಳ ಆಧಾರದಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳ ಗುರುತಿಸಲಾಗುವುದು ಎಂದು ವಿವರಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ವಹಿಸುವ ಎರಡು ಸಖಿ ಮತಗಟ್ಟೆ, ವಿಶೇಷ ಚೇತನರು ನಿರ್ವಹಿಸುವ ವಿಶೇಷ ಚೇತನರ ಮತಗಟ್ಟೆ, ಯುವಕರ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆ ಸೇರಿ ಐದು ಯುನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಮೇಯರ್, ಉಪ ಮೇಯರ್, ದೂಡಾ, ಡಿಸಿಸಿ ಬ್ಯಾಂಕ್ ರಿಗೆ ನೀಡಲಾಗಿದ್ದ ವಾಹನಗಳನ್ನು ವಾಪಾಸ್ ಪಡೆಯಲಾಗಿದೆ. ತಾಲೂಕು ಮಟ್ಟದಲ್ಲೂ ಈ ಪ್ರಕ್ರಿಯೆ ನಡೆದಿದೆ. ಅನೇಕರು ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ನೀಡಿದ್ದಾರೆ.
ಚುನಾವಣಾ ಕಾರ್ಯಕ್ಕಾಗಿ ಫ್ಲೈಯಿಂಗ್, ಮೊಬಲ್ ಸ್ಕ್ವಾಡ್, 164 ಸೆಕ್ಟರ್ ಅಧಿಕಾರಿಗಳು, ಚುನಾವಣಾ ವೆಚ್ಚ, ಮಾಧ್ಯಮ ಉಸ್ತುವಾರಿ ಒಳಗೊಂಡಂತೆ ಅನೇಕ ಅಧಿಕಾರಿಗಳ ತಂಡಗಳ ರಚಿಸಲಾಗಿದೆ. ಈ ಬಾರಿ ಪ್ರತಿ ಅಭ್ಯರ್ಥಿಗೆ 40 ಲಕ್ಷದ ವೆಚ್ಚದ ಮಿತಿ ನಿಗದಿ ಪಡಿಸಲಾಗಿದೆ. ಪ್ರತಿಯೊಂದನ್ನು ನಿಗಾವಹಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿರುವ 1683 ಮತಗಟ್ಟೆಗಳಲ್ಲಿ ಶೇ. 50 ರಷ್ಟು ಅಂದರೆ 853 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಆನ್ಲೈನ್ ಮೂಲಕ ಮತಗಟ್ಟೆಯಲ್ಲಿ ನಡೆಯುವ ಪ್ರತಿ ಚಲನವಲನ ವೀಕ್ಷಣೆ ಮಾಡಬಹುದು. ವೆಬ್ ಕ್ಯಾಸ್ಟಿಂಗ್ ಮೂಲಕ ಚಿತ್ರೀಕರಣದ ವ್ಯವಸ್ಥೆ ಮಾಡಲಾಗುವುದು.
ಇಡೀ 7 ಕ್ಷೇತ್ರದಲ್ಲಿನ ಚುನಾವಣಾ ಕಾರ್ಯಕ್ಕಾಗಿ 9866 ಮತದಾನ ಸಿಬ್ಬಂದಿ ನಿಯೋಜನೆ ಮಾಡಲಾಗುದೆ. ಸಿಸಿ ಟೀವಿ, ವಿಡಿಯೋಗ್ರಫಿ, ಮೈಕ್ರೋ ವೀಕ್ಷಕರು ಇರಲಿದ್ದಾರೆ. ಒಟ್ಟಾರೆಯಾಗಿ ಸುಗಮ, ಸುವ್ಯವಸ್ಥಿತ ಚುನಾವಣೆಗಾಗಿ ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಮನೆಯಿಂದಲೇ ಮತದಾನಕ್ಕೆ ಅವಕಾಶ
ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು, ವಿಕಲ ಚೇತನರು, ಕೊರೊನಾ ಪೀಡಿತರು ಇಚ್ಚೆ ಪಟ್ಟಲ್ಲಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಇದೆ. ಚುನಾವಣೆಗೆ ಮೂರು ದಿನಗಳ ಮುಂಚೆ ಸಂಬಂಧ ಬೂತ್ ಏಜೆಂಟರು, ಅಧಿಕಾರಿಗಳೊಂದಿಗೆ ಮನೆಗೆ ತೆರಳಿ ಗುಪ್ತವಾಗಿ ಮತದಾನ ಪ್ರಕ್ರಿಯೆ ನಡೆಸಲಾಗುವುದು. ಅಂಚೆ ಮತಗಳೊಂದಿಗೆ ಅಂತಹ ಮತಗಳ ಎಣಿಕೆ ಮಾಡಲಾಗುವುದು ಎಂದರು.
ದಾವಣಗೆರೆ ಜಿಲ್ಲೆಯಲ್ಲಿ 19427 ವಿಕಲಚೇತನರು, 80ಕ್ಕಿಂತಲೂ ಹೆಚ್ಚು ವಯೋಮಾನದ 27566 ಸೇರಿ 46,993 ಮತದಾರರನ್ನು ಗುರುತಿಸಲಾಗಿದೆ. ಮನೆಯಲ್ಲೇ ಮತದಾನ ಮಾಡುವುದು ಐಚ್ಛಿಕ ಹೊರತು ಕಡ್ಡಾಯ ಅಲ್ಲ. ಮನೆಯಲ್ಲೇ ಮತದಾನ ಮಾಡುವಂತಹವರು ಮುಂಚಿತವಾಗಿ ಫಾರಂ ನಂ-12 ಭರ್ತಿ ಮಾಡಿ ಕೊಡ ಬೇಕಾ ಗುತ್ತದೆ ಎಂದು ತಿಳಿಸಿದರು.
ಮತದಾರರ ಹೆಸರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಇರಬೇಕು. ಅಂತಹವರು ಚುನಾವಣಾ ಆಯೋಗ ನಿಗದಿಪಡಿಸಿದ ಗುರುತಿನ ಚೀಟಿಗಳ ಹಾಜರುಪಡಿಸಿ ಮತದಾನ ಮಾಡಬಹುದು. ಈ ಬಾರಿ ಆಯೋಗ ಇತರೆ 11 ಪರ್ಯಾಯ ಗುರುತಿನ ಚೀಟಿಗೂ ಅವಕಾಶ ಮಾಡಿಕೊಟ್ಟಿದೆ. ಪರ್ಯಾಯ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಮತದಾನಕ್ಕೆ ಅವಕಾಶ ಇಲ್ಲ. ಪಟ್ಟಿಯಲ್ಲಿ ಹೆಸರು ಇರಬೇಕು. ಮತದಾರರು ವೆಬ್ಸೈಟ್ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನ ಖಾತರಿ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾವುದೇ ಧರ್ಮ, ಭಾಷೆ, ಜಾತಿ ಆಧರಿಸಿ ಮತ ಯಾಚನೆ ಮಾಡುವಂತಿಲ್ಲ. ಯಾರದ್ದೇ ಖಾಸಗಿ ಜೀವನ ಗುರಿಯಾಗಿಟ್ಟುಕೊಂಡು ಪ್ರಚಾರ ಮಾಡುವಂತಿಲ್ಲ. ದೇವಸ್ಥಾನ, ಚರ್ಚ್, ಪ್ರಾರ್ಥನಾ ಮಂದಿರದಲ್ಲೂ ಪ್ರಚಾರ ಕಾರ್ಯಕ್ಕೆ ಅವಕಾಶ ಇಲ್ಲ. ಮತಗಟ್ಟೆಗಳಿಗೆ ಅಭ್ಯರ್ಥಿಗೆ ಮಾತ್ರವೇ ಅವಕಾಶ ಇರುತ್ತದೆ. ಇತರರಿಗೆ ಇರುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಒ ಎ. ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಉಪಸ್ಥಿತರಿದ್ದರು.












Click it and Unblock the Notifications