ನರೇಗಾ ಯೋಜನೆಯಲ್ಲಿ ಅವ್ಯವಹಾರ; ತನಿಖಾ ತಂಡದಿಂದ ಪರಿಶೀಲನೆ
ದಾವಣಗೆರೆ, ಅಕ್ಟೋಬರ್ 19: ನರೇಗಾ ಯೋಜನೆಗಳಲ್ಲಿ ದಾವಣಗೆರೆಯ ಜಗಳೂರು ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖಾ ತಂಡ ಇಂದು ಪರಿಶೀಲನೆ ನಡೆಸಿದೆ.
ತಾಲ್ಲೂಕಿನ ಹಲವು ಗ್ರಾಮ ಪಂಚಾಯತಿಯ ಪಿಡಿಒ, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸೇರಿದಂತೆ ನರೇಗಾ ಯೋಜನೆಯಲ್ಲಿ ಅಕ್ರಮವೆಸಗಿದ್ದು, 2018-19 ಸಾಲಿನಿಂದ ಇಲ್ಲಿಯವರೆಗೂ ಕೈಗೊಂಡ ನರೇಗಾ ಯೋಜನೆಯ ಸಮಗ್ರ ತನಿಖೆಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಆದೇಶಿಸಿದ್ದರು.

ಆಯುಕ್ತಾಲಯವು ಜಗಳೂರು ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ತನಿಖೆ ನಡೆಸಲು 20 ಜಿಲ್ಲೆಯ ಅಧಿಕಾರಿಗಳಿರುವ 7 ತಂಡಗಳನ್ನು ರಚಿಸಿ ನರೇಗಾ, ನಕಲಿ ಜಾಬ್ ಕಾರ್ಡ್ ಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದೆ. ಹೀರೇಮಲ್ಲನಹೊಳೆ, ಹನುಮಂತಾಪುರ, ಗುರುಸಿದ್ದಾಪುರ ಸೇರಿದಂತೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ತನಿಖಾ ತಂಡ ಪರೀಶೀಲನೆ ನಡೆಸುತ್ತಿದ್ದು, ಇದೇ ತಿಂಗಳ 26ರವರೆಗೂ ತನಿಖೆ ನಡೆಸಿ ವರದಿ ನೀಡಲಿದೆ.












Click it and Unblock the Notifications