ದಾವಣಗೆರೆ: ಮಳೆಯಲ್ಲಿ ಮುಳುಗಿದ ಟೆಂಟ್ ನಿವಾಸಿಗಳ ಜೀವನ, ಜಿಲ್ಲಾಧಿಕಾರಿ ನೀಡಿದ ಭರವಸೆಗಳೇನು?
ದಾವಣಗೆರೆ, ಮೇ, 25: ಕಲಬುರಗಿ, ಸೊಲ್ಲಾಪುರ, ಚನ್ನಗಿರಿ ತಾಲೂಕಿನ ಅಲ್ತಾಪನಹಳ್ಳಿಯಿಂದ ವಿವಿಧ ಉದ್ಯೋಗ ಹರಸರಿ ದಾವಣಗೆರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬೇರೆಡೆಯಿಂದ ಬಂದವರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಬನಶಂಕರಿ ಬಡಾವಣೆಯ ಬಳಿ ಇರುವ ಸೇವಾ ರಸ್ತೆ ಪಕ್ಕದಲ್ಲಿ ವಿವಿಧ ಟೆಂಟ್‍ಗಳಲ್ಲಿ ವಾಸಿಸುತ್ತಿದ್ದು, ಇವರನ್ನು ಇದೀಗ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸಿ ಗಮನ ಸೆಳೆದರು.
ಕಳೆದೆರಡು ದಿನಗಳಿಂದ ಜಿಲ್ಲೆಯ ವಿವಿಧೆಡೆ ಗಾಳಿ, ಸಿಡಿಲು ಸಹಿತ ಮಳೆಯಾಗುತ್ತಿದ್ದು, ಇದರಿಂದ ಬಯಲು ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳ ಪಾಡು ಹೇಳತೀರಾಗಿದೆ. ಹೀಗೆ ಸಂಕಷ್ಟಕ್ಕೆ ಸಿಲುಕಿರುವವರ ಕುಂದುಕೊರತೆಗಳ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅನೇಕ ಕಡೆ ಮಳೆ, ಸಿಡಿಲಿಗೆ ಜನ, ಜಾನುವಾರುಗಳು ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ ಅವರ ಕಷ್ಟಗಳನ್ನು ಜಿಲ್ಲಾಧಿಕಾರಿ ಆಲಿಸಿದ್ದಾರೆ.

ಇಲ್ಲಿ ಒಟ್ಟು 21 ಕುಟುಂಬಗಳು ವಾಸಿಸುತ್ತಿದ್ದು, ಇದರಲ್ಲಿ ಕಲಬುರಿಗಿ ಜಿಲ್ಲೆಯ ಚಿಂಚೊಳ್ಳಿಯ ಕೆಲವು ಕುಟುಂಬಗಳು ಗ್ಯಾಸ್ ಸ್ಟವ್ ರಿಪೇರಿ ಕೆಲಸ ಮಾಡಲು ಬಂದು ತಾತ್ಕಾಲಿಕ ಟೆಂಟ್‍ನಲ್ಲಿ ನೆಲೆಸಿವೆ. ಸೊಲ್ಲಾಪುರದಿಂದ ಕೆಲವು ಕುಟುಂಬಗಳು ಬಂದಿದ್ದು, ಇವರು ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ಸೊಲ್ಲಾಪುರಕ್ಕೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಚನ್ನಗಿರಿ ತಾಲೂಕಿನ ಅಲ್ತಾಪನಹಳ್ಳಿಯ ಹಕ್ಕಿಪಿಕ್ಕಿ ಜನರು ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡು ವಿವಿಧ ಉದ್ಯೋಗ ಮಾಡುವ ಮೂಲಕ ಇಲ್ಲಿ ವಾಸಿಸುತ್ತಿದ್ದಾರೆ.
ಪೌಷ್ಠಿಕ ಆಹಾರ, ಸ್ವ ಉದ್ಯೋಗಕ್ಕೆ ಕ್ರಮ
ಈ ಕುಟುಂಬಗಳಲ್ಲಿ ಇರುವ ಚಿಕ್ಕ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪೌಷ್ಟಿಕ ಆಹಾರ ವಿತರಣೆಯನ್ನು ಮಾಡಲು ಸೂಚಿಸಿದ್ದಾರೆ. ಅಲ್ಲದೆ ಹಕ್ಕಿಪಿಕ್ಕಿ ಜನರಿಗೆ ಅಭಿವೃದ್ದಿ ನಿಗಮದ ಮೂಲಕ ಸ್ವ ಉದ್ಯೋಗಕ್ಕೆ ಸಾಲ, ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಸಹಾಯಕ್ಕೆ ಜಿಲ್ಲಾಡಳಿತ ಸಿದ್ಧ
ಇಲ್ಲಿ ವಾಸಿಸುತ್ತಿರುವ ಎಲ್ಲರೂ ಆದಷ್ಟು ಬೇಗ ನಿಮ್ಮ ಗ್ರಾಮಗಳಿಗೆ ತಲುಪಿ ಅಲ್ಲಿಯೇ ವಿವಿಧ ಉದ್ಯೋಗ ಮಾಡಲು ಸೂಚಿಸಿದರು. ಅಲ್ಲದೆ ಸ್ವ ಉದ್ಯೋಗ ಕೈಗೊಳ್ಳಲು ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಳಕೆ ಮಾಡಲು ತಿಳಿಸಿ. ಒಂದು ವೇಳೆ ಏನಾದರೂ ಸಮಸ್ಯೆ ಆದರೆ ಜಿಲ್ಲಾಡಳಿತದ ಗಮನಕ್ಕೆ ತನ್ನಿ. ಜಿಲ್ಲಾಡಳಿತ ಸಹಾಯಕ್ಕೆ ಸದಾ ಸಿದ್ಧವಿದೆ ಎಂದು ಭರವಸೆ ಮೂಡಿಸಿದರು.
ಈ ವೇಳೆ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಳೆಗೆ ತತ್ತರಿಸಿದ ಬಣ್ಣೆನಗರಿ
ಇನ್ನು ದಾವಣಗೆರೆ ಜಿಲ್ಲೆಯ ಹಲವೆಡೆ ಮಳೆರಾಯ ಆರ್ಭಟಿಸಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ. ಮತ್ತೊಂದೆಡೆ ರೈತರು ಬೆಳೆದ ಭತ್ತದ ಬೆಳೆಗಳು ಕೂಡ ಜಲಾವೃತವಾಗಿರುವ ಘಟನೆಗಳು ಸಂಭವಿಸಿವೆ. ಮಳೆ ಸುರಿದ ಕಾರಣ ಬತ್ತದ ಬೆಳೆ ನೀರು ಪಾಲಾಗಿದೆ. 200ರಿಂದ 250 ಕಾಳು ಉದುರಿ ಹೋಗಿವೆ. ಇರುವುದು ಕೇವಲ ಹತ್ತರಿಂದ ಹದಿನೈದು ಕಾಳು ಮಾತ್ರ. ಇದರಿಂದ ಕಟಾವು ಮಾಡಲು ಯಂತ್ರಕ್ಕೆ ನೀಡುವ ಹಣ ಕೂಡ ಸಿಗುವುದಿಲ್ಲ ಎಂದರು ರೈತರು ಗೋಳು ತೋಡಿಕೊಂಡಿದ್ದಾರೆ.
ಕೈಗೆ ಬಂದಿದ್ದ ಫಸಲು ಹೇಗೆ ನೀರು ಪಾಲಾಗಿದೆ ಎಂಬುದನ್ನು ರೈತರೊಬ್ಬರು ಜಿಲ್ಲಾಧಿಕಾರಿ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ ತಂಡಕ್ಕೆ ವಿವರಿಸಿದ್ದು, ಭತ್ತದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಒಂದೆಡೆ ಬಿಸಿಲಿನ ಶಾಖ, ಮತ್ತೊಂದೆಡೆ ಭಾರೀ ಗಾಳಿ, ಮಳೆಯಿಂದ ಆದ ಅನಾಹುತದಿಂದ ನಷ್ಟ ಅನುಭವಿಸಿದ್ದೇವೆ ಎಂದು ಅಳಲು ತೋಡಿಕೊಂಡರು.












Click it and Unblock the Notifications