ಹರಿಹರ: ಜನವರಿ 27ಕ್ಕೆ ಶ್ರೀ ಹಿಮಗಿರಿ ಭವನದ ನೂತನ ಕಟ್ಟಡ ಉದ್ಘಾಟನೆ
ದಾವಣಗೆರೆ, ಜನವರಿ, 23: ಉತ್ತರ ಭಾರತದಲ್ಲಿ ಇರುವ ಕೇದಾರನಾಥ ದೇವಸ್ಥಾನದಂತೆ ಕರ್ನಾಟಕದಲ್ಲಿಯೂ ದಕ್ಷಿಣ ಕೇದಾರನಾಥ ಎನ್ನುವ ಹೆಸರಿನಲ್ಲಿ ಶ್ರೀಹಿಮಗಿರಿ ಭವನವನ್ನು ನಿರ್ಮಿಸಲಾಗಿದೆ. ಜನವರಿ 27ರಂದು ದಾವಣಗೆರೆ ಜಿಲ್ಲೆಯಲ್ಲಿ ದಕ್ಷಿಣ ಕೇದಾರ ವೈರಾಗ್ಯಧಾಮದಲ್ಲಿ ಶ್ರೀಹಿಮಗಿರಿ ಭವನದ ನೂತನ ಕಟ್ಟಡದ ಉದ್ಘಾಟನೆ ಮಾಡಲಾಗುತ್ತದೆ ಎಂದು ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ಮಠಾಧ್ಯಕ್ಷ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ - ಹರಿಹರ ಮಧ್ಯೆ ಬರುವ ಹಳೆಬಾತಿ ಗ್ರಾಮದ ಸಮೀಪವಿರುವ ಸರ್ವಿಸ್ ರಸ್ತೆಯಲ್ಲಿ ತೆರೆದರೆ ಶಂಷೀಪುರ ಗ್ರಾಮದಲ್ಲಿ ಈ ಧಾರ್ಮಿಕ ಕ್ಷೇತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜನವರಿ 27ರಂದು ಬೆಳಗ್ಗೆ 3ಗಂಟೆಯಿಂದ ವಿವಿಧ ಪೂಜಾ ವಿಧಿ ವಿಧಾನ ಕಾರ್ಯಗಳು ನಡೆಯಲಿದ್ದು, ಬೆಳಗ್ಗೆ 8 ಗಂಟೆಯಿಂದ ಧರ್ಮ ಕಂಕಣ ಧಾರಣೆ ಕಾರ್ಯಕ್ರಮ ನಡೆಯಲಿದೆ.

ಪೂಜಾ ಕಾರ್ಯಕ್ರಮದ ವಿವರ
ಬೆಳಗ್ಗೆ 8:45 ರಿಂದ ಶ್ರೀಮದ್ ರಂಭಾಪುರಿ ಹಾಗೂ ಶ್ರೀಮದ್ ಕೇದಾರನಾಥ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಸನಾತನ ಧರ್ಮ ಜಾಗೃತಿ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11ಕ್ಕೆ ಧರ್ಮಸಭೆ ನಡೆಯಲಿದ್ದು, ಈ ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರು, ಪಂಡಿತರು, ಸಾಮಾಜಿಕ ಗಣ್ಯರು, ರಾಜಕೀಯ ಧುರೀಣರು, ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಿಮಗಿರಿ ಭವನದಲ್ಲಿ ಭಕ್ತರಿಗೆ ದರ್ಶನ
ಜಾಗತಿಕ ಮಟ್ಟದಲ್ಲಿ ಇರುವ ಅನೇಕ ಸಂಸ್ಕೃತಿಗಳಲ್ಲಿ ಭಾರತೀಯ ಸನಾತನ ಸಂಸ್ಕೃತಿ, ಸಂಸ್ಕಾರಗಳು ಇಂದಿಗೂ ತನ್ನ ತನವನ್ನು ಉಳಿಸಿಕೊಂಡು ಬಂದಿವೆ. ಭಾರತೀಯ ಸನಾತನ ಸಂಸ್ಕೃತಿಯು ಜಗತ್ತಿನಾದ್ಯಂತ ಏನೆಲ್ಲಾ ವೈರುಧ್ಯಗಳು ನಡೆದರೂ ಸಹ ತನ್ನ ತನವನ್ನು ಕಾಯ್ದುಕೊಂಡಿದೆ. ಇಂತಹ ಸಂಸ್ಕೃತಿಯ ಸಂಸ್ಕಾರವನ್ನು ಹೊಂದಿರುವ ಉತ್ತರ ಭಾರತದ ಪೀಠದ ಕೇದಾರನಾಥ ದೇವಸ್ಥಾನದಲ್ಲಿ ಕೇವಲ ಆರು ತಿಂಗಳು ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ನಂತರ ಆರು ತಿಂಗಳು ಶೀತ ಮತ್ತು ಮಳೆಯ ಕಾರಣ ಅಲ್ಲಿ ಯಾವುದೇ ವಿಧಾನಗಳು ನಡೆಯುವುದಿಲ್ಲ. ಕಾರಣ ದಾವಣಗೆರೆಯ ಜಿಲ್ಲೆಯ ಶಂಶಿಪುರದಲ್ಲಿರುವ ಹಿಮಗಿರಿ ಭವನದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಶಿವಯೋಗಿ ಕಂಬಾಳಿ ಮಠ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ್, ಮಹಾನಗರ ಪಾಲಿಕೆ ಸದಸ್ಯ ಕೆ. ಎಂ. ವೀರೇಶ್, ಎನ್. ರಾಜಶೇಖರ, ಎ.ಎಸ್. ಮೃತ್ಯುಂಜಯ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications