ಹರಿಹರದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿದ ರಾಜ್ಯಪಾಲರು: ಮಠದ ವಾತಾವರಣಕ್ಕೆ ಫಿದಾ!
ದಾವಣಗೆರೆ, ಮಾರ್ಚ್ 24: ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಹರ ಕ್ಷೇತ್ರ ಹರಿಹರದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿದರು. ಈ ವೇಳೆ ರಾಜ್ಯಪಾಲರೊಂದಿಗೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಕ್ಷೇತ್ರದ ಪೀಠಾಧಿಪತಿ ವಚನಾನಂದ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು.
ಕೆಲವು ದಿನಗಳ ಹಿಂದೆ ರಾಜಭವನಕ್ಕೆ ತೆರಳಿದ್ದ ಸಂದರ್ಭದಲ್ಲಿ ನಮ್ಮ ಯೋಗ ಸಾಧನೆ ಹಾಗೂ ಸಾಮಾಜಿಕ ಸುಧಾರಣೆಯ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ವಿಸ್ತೃತವಾಗಿ ವಚನಾನಂದ ಸ್ವಾಮೀಜಿ ಅವರು ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಹರ ಕ್ಷೇತ್ರ ಹರಿಹರಕ್ಕೆ ಭೇಟಿ ನೀಡುವಂತೆ ಅವರಲ್ಲಿ ಮನವಿಯನ್ನು ಮಾಡಿದ್ದರು.
ಈ ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲರು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಹರ ಕ್ಷೇತ್ರಕ್ಕೂ ಭೇಟಿ ನೀಡುವ ಮೂಲಕ ನಮ್ಮ ಮನವಿಗೆ ಸ್ಪಂದಿಸಿ ಪ್ರೀತಿ ಆದರಗಳಿಂದ ಗೌರವಿಸಿದ್ದು, ಬಹಳ ಸಂತಸ ತಂದಿತು ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.

ಹರ ಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಆಗಮಿಸಿದಂತಹ ರಾಜ್ಯಪಾಲರು ಇಲ್ಲಿಯ ವಾತಾವರಣವನ್ನು ಕಂಡು ಬಹಳಷ್ಟು ಸಂತಸಪಟ್ಟರು. ಹರ ಕ್ಷೇತ್ರದಲ್ಲಿ ಸಕಾರಾತ್ಮಕ ವಾದಂತಹ ಶಕ್ತಿ ಕಂಡು ಬಂದಿದ್ದನ್ನು ಖುಷಿಯಿಂದ ಹಂಚಿಕೊಂಡರು.

ಈ ಕ್ಷೇತ್ರದಲ್ಲಿ ಇರುವಂತಹ ವಾತಾವರಣ ಸಿಖ್ ಸಂಪ್ರದಾಯದ ಗುರುದ್ವಾರದಲ್ಲಿ ಕಂಡುಬರುವಂತಹ ವಾತಾವರಣ ಆಗಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಅನುಭವವನ್ನು ಹೊಂದಿರುವಂತಹ ಶ್ರೀ ವಚನಾನಂದ ಸ್ವಾಮೀಜಿ ಗಳು ತಮ್ಮ ಮುತುವರ್ಜಿಯಿಂದ ಕೈಗೊಂಡಿರುವಂತಹ ಕಾರ್ಯಕ್ರಮಗಳು ಶ್ರೀಪೀಠದ ಅಭಿವೃದ್ಧಿಗೆ ಕೈಗೊಂಡಿರುವಂತಹ ಕೆಲಸ-ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಲ್ಲದೆ ಮಠದ ಪರಂಪರೆಯ ಬಗ್ಗೆ, ಇತಿಹಾಸದ ಬಗ್ಗೆ ಪಂಚಮಸಾಲಿ ಸಮಾಜದ ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆಯನ್ನು ನಡೆಸಲಾಯಿತು.
ಮಹಾಯೋಗಿನಿ ಅಕ್ಕಮಹಾದೇವಿ, ಕಿತ್ತೂರಿನ ರಾಣಿ ಚೆನ್ನಮ್ಮ, ಕೆಳದಿ ರಾಣಿ ಚೆನ್ನಮ್ಮ, ಬೆಳವಾಡಿ ರಾಣಿ ಮಲ್ಲಮ್ಮ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮೈಲಾರ ಮಹಾದೇವಪ್ಪ, ಅಕ್ಷರಯೋಗಿ ಅರಟಾಳ ರುದ್ರಗೌಡ, ಸರ್ ಕಂಬಳಿ ಸಿದ್ದಪ್ಪ, ಅದರಗುಂಚಿ ಶಂಕರಗೌಡ ಮುಂತಾದ ಮಹನೀಯರ ಬಗ್ಗೆ ಹಾಗೂ ಅವರ ಇತಿಹಾಸದ ಬಗ್ಗೆ ನಮ್ಮಿಂದ ಮಾಹಿತಿಯನ್ನು ಪಡೆದುಕೊಂಡ ರಾಜ್ಯಪಾಲರು, ಪಂಚಮಸಾಲಿ ಸಮುದಾಯದ ವೀರ ಮಹಿಳೆಯರು ರಾಜ್ಯಕ್ಕೆ ನೀಡಿದಂತಹ ಕೊಡುಗೆಯನ್ನು ಶ್ಲಾಘಿಸಿದರು.

ನಮ್ಮ ಮನವಿಗೆ ಬೆಲೆಯನ್ನು ಕೊಟ್ಟು ತಮ್ಮ ಅಧಿಕೃತ ಕಾರ್ಯಕ್ರಮಗಳ ಮಧ್ಯೆ ಪೀಠಕ್ಕೆ ಭೇಟಿ ನೀಡಿದಂತಹ ರಾಜ್ಯಪಾಲರಿಗೆ ಮಹಾದೇವ ಉತ್ತಮ ಆಯುರಾರೋಗ್ಯವನ್ನು ನೀಡುವ ಮೂಲಕ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಂತಹ ಶಕ್ತಿಯನ್ನು ದಯಪಾಲಿಸಲಿ ಎನ್ನುವ ಹಾರೈಕೆ ನಮ್ಮದಾಗಿದೆ ಎಂದು ವಚನಾನಂದ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.












Click it and Unblock the Notifications