ಉಕ್ರೇನ್‌ನಲ್ಲಿ ಸಿಲುಕಿದ ದಾವಣಗೆರೆಯ ನಾಲ್ವರು ವಿದ್ಯಾರ್ಥಿಗಳು
ದಾವಣಗೆರೆ, ಫೆಬ್ರವರಿ 24; ದಾವಣಗೆರೆಯಿಂದ ಉಕ್ರೇನ್‌ಗೆ ವಿದ್ಯಾಭ್ಯಾಸಕ್ಕೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿರುವ ಎಲ್ಲ ನಾಲ್ವರು ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ.
ನಗರದ ಕೆಟಿಜೆ ನಗರದ ಅಂಜುಮನ್ ಶಾಲೆ ಬಳಿಯ ವಾಸಿಯಾದ ಉಪನ್ಯಾಸಕ ಶೌಖತ್ ಅಲಿ ಎಂಬುವವರ ಪುತ್ರ ಮಹ್ಮದ್ ಅಬೀದ್ ಅಲಿ, ವಿದ್ಯಾರ್ಥಿನಿಯರಾದ ಹಬೀಬಾ, ಮಿಸ್ಬಾ ಹಾಗೂ ಹರಿಹರದ ಸುತನ್ ಎಂಬುವವರು ಉಕ್ರೇನ್‌ಗೆ ವಿದ್ಯಾಭ್ಯಾಸಕ್ಕೆಂದು ತೆರಳಿದ್ದರು.
ಮಹ್ಮದ್ ಅಬೀಬ್ ಅಲಿ ತಂದೆ ಶೌಖತ್ ಅಲಿ ಮಾತನಾಡಿ, "ಮಹ್ಮದ್ ಅಬೀಬ್ ಅಲಿ ಹೋಗಿ ಆರು ತಿಂಗಳಾಗಿದೆ. ಒಂದು ಸೆಮಿಸ್ಟರ್ ಮುಕ್ತಾಯವಾಗಿದೆ. ಉಕ್ರೇನ್ ಪರಿಸ್ಥಿತಿ ನೋಡಿ ಕಳೆದ ತಿಂಗಳೇ ಮಗನನ್ನು ಕರೆತರುವ ಯೋಜನೆ ಇತ್ತು. ಆದರೆ ವಿಶ್ವವಿದ್ಯಾಲಯದವರು ನಮಗೆ ಏನು ಆಗಲ್ಲ ಎಂಬ ಭರವಸೆ ನೀಡಿದ್ದರು" ಎಂದರು.

"ಹಾಗಾಗಿ ಸುಮ್ಮನಾಗಿದ್ದೆವು. ನಿನ್ನೆ ಯಾರು ಹೋಗುವರು ಹೋಗಬಹುದು ಅಂತಾ ವಿಶ್ವವಿದ್ಯಾಲಯದವರು ಹೇಳಿದ್ದಾರೆ. ಫೆಬ್ರವರಿ 25ಕ್ಕೆ ವಾಪಸ್ ಬರಲು ಟಿಕೆಟ್ ಬುಕ್ ಆಗಿತ್ತು. ಆದರೆ ಪರಿಸ್ಥಿತಿ ಹೀಗಾಗಿದೆ" ಎಂದು ತಿಳಿಸಿದ್ದಾರೆ.
"ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಮಗ ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂಬ ವಿಶ್ವಾಸವಿದೆ. ವಿದೇಶಾಂಗ ಇಲಾಖೆ ಈ ವಿಚಾರದಲ್ಲಿ ಗಮನ ಹರಿಸಬೇಕಿದೆ" ಎಂದರು.
"ಉಕ್ರೇನ್‌ನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಲು ತೆರಳಿದ್ದ. ಈತನ ಜೊತೆಗೆ ದಾವಣಗೆರೆಯ ಮೂವರು ಇದ್ದಾರೆ. ಅಲ್ಲಿನ ಪರಿಸ್ಥಿತಿ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಆದಷ್ಟು ಬೇಗ ಭಾರತಕ್ಕೆ ಸುರಕ್ಷಿತವಾಗಿ ಕರೆತರಬೇಕೆಂದು" ಮನವಿ ಮಾಡಿದರು.












Click it and Unblock the Notifications