ಜಿಎಂಎಸ್-ಎಂಪಿಆರ್ ಮಾತಿನ ಸಮರ: ಸಿದ್ದೇಶ್ವರರ ಆ ಮಾತಿನಿಂದ ಮನಸ್ಸಿಗೆ ನೋವಾಗಿದೆ ಎಂದ ರೇಣುಕಾಚಾರ್ಯ
ದಾವಣಗೆರೆ, ಜುಲೈ 19: ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕಿನಲ್ಲಿ ನಮ್ಮ ಸಮಾಜದವರು ಬಹಳ ಜನ ಇದ್ದಾರೆ ಎಂಬ ಮಾತು ಹೇಳಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.
ಹೊನ್ನಾಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾಧು ಲಿಂಗಾಯತ ಸಮಾಜದವರು ಹೆಚ್ಚು ಹೊನ್ನಾಳಿ - ನ್ಯಾಮತಿ ತಾಲೂಕಿನಲ್ಲಿ ಇದ್ದು, ನಮ್ಮ ಸಮಾಜದವರು ಹೆಚ್ಚಿದ್ದಾರೆ ಎಂಬುದಾಗಿ ಹೇಳಿದ್ದು ನನಗೆ ನೋವು ತಂದಿದೆ. ಅವಳಿ ತಾಲೂಕಿನಲ್ಲಿ ಎಲ್ಲಾ ಸಮಾಜದವರು ಬಿಜೆಪಿ ಬೆಂಬಲಿಸಿದ್ದಾರೆ. ಮಾತ್ರವಲ್ಲ, ಸಿದ್ದೇಶ್ವರ ಅವರು ಬಿಜೆಪಿಯವರು ಇದ್ದಾರೆ ಎಂದಿದ್ದಾರೆ ಸಂತೋಷಪಡುತ್ತಿದ್ದೆ ಎಂದು ಹೇಳಿದರು.

ಸಿದ್ದೇಶ್ವರ ಅವರು ಜಾತಿ ಆಧಾರದ ಮೇಲೆ ಸ್ಪರ್ಧೆ ಮಾಡುತ್ತೇನೆಂದು ಹೇಳಿದ್ದು ನೋವುಂಟು ಮಾಡಿದೆ. ಸಿದ್ದೇಶಣ್ಣ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು ಬಹಳ ಜನ ಇದ್ದಾರೆ ಎಂದು ಹೇಳಿದ್ದರೆ ಸ್ವಾಗತಿಸುತ್ತಿದ್ದೆ. ಆದರೆ ಸಮಾಜ ಎಂದು ಬಳಸಿದ್ದು ಮನಸಿಗೆ ನೋವುಂಟು ಮಾಡಿದೆ. ನಾನು ಲೋಕಸಭೆ ಚುನಾವಣೆ ಸಂಬಂಧ ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ತಲೆ ಬಾಗುತ್ತೇನೆ ಎಂದು ತಿಳಿಸಿದರು.
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಆರಂಭದಲ್ಲಿ ಹೇಳಿದ್ದೆ. ಆದ್ರೆ, ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡಿದ್ದರಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆಂದು ಹೇಳಿದ್ದೇನೆ. ಸಿದ್ದೇಶಣ್ಣ ಹಾಗೂ ನನ್ನ ನಡುವೆ ಯಾವುದೇ ಸಂಘರ್ಷ ಇಲ್ಲ. ಸಿದ್ದೇಶಣ್ಣ ಹಿರಿಯರು, ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದಾದರೆ ಸ್ವಾಗತಿಸುತ್ತೇನೆ. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಸರ್ವ ಧರ್ಮದವರು ನಮಗೆ ಮತ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮಹಾಘಟ ಬಂಧನನ್‌ನಲ್ಲಿ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ. ನಿನ್ನೆ ಸೇರಿದವರಿಗೆ ಯಾವುದೇ ಸಿದ್ಧಾಂತ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಒಂದಾಗಿದ್ದಾರೆ. ಹುಲಿ ಎಂದಿಗೂ ಹುಲ್ಲು ತಿನ್ನೋಲ್ಲಾ, ನರೇಂದ್ರ ಮೋದಿಯವರು ಹುಲಿ. ಭ್ರಷ್ಟಾಚಾರ ಮುಕ್ತ ಆಡಳಿತ ನರೇಂದ್ರ ಮೋದಿಯವರು ನೀಡಿದ್ದಾರೆ. ಮೋಜು ಮಸ್ತಿಗಾಗಿ 26 ಪಕ್ಷಗಳು ಮಹಾಘಟ್ ಬಂಧನ್ ಕಟ್ಟಿಕೊಂಡಿದ್ದಾರೆ. ಮೋದಿಯವರು ಮೂರನೇ ಬಾರಿಗೆ ಮತ್ತೆ ದೇಶದ ಪ್ರಧಾನ ಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇವಸ್ಥಾನದಲ್ಲಿ ಪೂಜೆ ಮಾಡಲು ಅನುಮತಿ ಪಡೆಯಬೇಕು ಎಂದು ಹೇಳಿದೆ. ಆದರೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಯಾವ ದೊಣ್ಣೆನಾಯ್ಕನ ಅಪ್ಪಣೆ ಬೇಕಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications