ನ್ಯಾಮತಿ: 16 ವರ್ಷದ ಬಾಲಕಿಯನ್ನು ಕೊಂದಿದ್ದ ಪುಂಡಾನೆ ಕೊನೆಗೂ ಸೆರೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನ
ದಾವಣಗೆರೆ, ಏಪ್ರಿಲ್, 11: ಚನ್ನಗಿರಿ ಸೇರಿದಂತೆ ವಿವಿಧೆಡೆ ಜನರ ನಿದ್ದೆಗೆಡಿಸಿದ್ದ ಸಲಗ ಕೊನೆಗೂ ಸೆರೆಯಾಗಿದೆ. ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕಿನ ಜೀನಹಳ್ಳಿ - ಕೆಂಚಿಕೊಪ್ಪ ಬಳಿ ಅರವಳಿಕೆ ನೀಡಿ ಪುಂಡಾನೆಯನ್ನು ಬಲೆಗೆ ಕೆಡವಲಾಗಿದೆ.
ಕಳೆದ ನಾಲ್ಕು ದಿನಗಳಿಂದಲೂ ಆನೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು. ಅಲ್ಲದೆ ಈ ಆನೆ ಸಂತೇಬೆನ್ನೂರಿನ 16 ವರ್ಷದ ಬಾಲಕಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿ ಕೊಂದು ಹಾಕಿ, ಊರೊಳಗೆ ದಾಂಧಲೆ ಮಾಡಿತ್ತು. ಹೀಗೆ ಸುಮಾರು ಆರು ಜನರ ಮೇಲೆ ದಾಳಿ ನಡೆಸಿದ್ದ ಪುಂಡಾನೆ ಕೊನೆಗೂ ಸಿಕ್ಕಿ ಬಿದ್ದಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವಿನಯ್ ಮೇಲೆ ದಾಳಿ
ಚನ್ನಗಿರಿ ತಾಲೂಕಿನ ಸೂಳೆಕೆರೆ, ಸಂತೆಬೆನ್ನೂರು, ಹೊನ್ನಾಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಓಡಾಡುತ್ತಿದ್ದ ಆನೆ ಸೆರೆಗೆ ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಅವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. ಆದರೆ ಅರವಳಿಕೆ ಮದ್ದು ನೀಡಲು ಹೋಗಿದ್ದಾಗ ವಿನಯ್ ಮೇಲೆ ದಾಳಿ ನಡೆಸಿತ್ತು. ಸೊಂಟದ ಮೇಲೆ ಕಾಲಿಟ್ಟಿದ್ದ ಆನೆಯು ಮಾರಣಾಂತಿಕ ದಾಳಿಯನ್ನು ಕೂಡ ನಡೆಸಿತ್ತು.
ನಂತರ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯು ಗಾಯಗೊಂಡಿದ್ದ ವಿನಯ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ
ಹೆಣ್ಣಾನೆಯಿಂದ ಸಲಗ ಸೆರೆ
ಸೂಳೆಕೆರೆ, ಸಂತೇಬೆನ್ನೂರು ಸೇರಿದಂತೆ ಕೆಲ ಗ್ರಾಮಗಳಲ್ಲಿ ಸಂಚರಿಸಿದ್ದ ಆನೆಯು ಜನರ ಮೇಲೆ ದಾಳಿ ನಡೆಸುತ್ತಿದ್ದದ್ದು ಆತಂಕಕ್ಕೆ ಕಾರಣವಾಗಿತ್ತು. ತಾಯಿ ಮಗಳ ಮೇಲೆ ದಾಳಿ ಮಾಡಿದಾಗಲಂತೂ ಜನರ ಆತಂಕ ಹೆಚ್ಚಾಗಿತ್ತು. ಆದ್ದರಿಂದ ಜನರು ಮನೆಯಿಂದ ಹೊರಗೆ ಬರಲು ಹಾಗೂ ತೋಟ, ಜಮೀನುಗಳಿಗೆ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹೀಗೆ ಆತಂಕ ಹೆಚ್ಚಾಗುವಂತೆ ಮಾಡಿದ್ದ ಕಾಡಾನೆ ಕೊನೆಗೂ ನ್ಯಾಮತಿ ಬಳಿಯ ಜೀನಹಳ್ಳಿ - ಕೆಂಚಿಕೊಪ್ಪ ಸಮೀಪದಲ್ಲಿ ಸೆರೆ ಸಿಕ್ಕಿದೆ.

ಆನೆಯನ್ನು ಪತ್ತೆ ಹಚ್ಚಲು ಸೂಳೆಕೆರೆ ಪರಿಸರದಲ್ಲಿ ಡ್ರೋಣ್ ಸಹ ಬಳಕೆ ಮಾಡಲಾಯಿತು. ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ಆನೆಯನ್ನು ಸೆರೆ ಹಿಡಿಯಲು ಗಜದಳದೊಂದಿಗೆ ನೂರಾರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆದರೂ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಬಳಿಕ ಹೆಣ್ಣಾನೆ ಮೂಲಕ ಆಕರ್ಷಿಸಿ ಒಂಟಿ ಸಲಗವನ್ನು ಸೆರೆಹಿಡಿಯಲಾಯಿತು.
ಒಂಟಿ ಸಲಗ ಸೆರೆಗೆ ಶಿವಮೊಗ್ಗದ ಸಕ್ರೆಬೈಲ್‌ನ ಆನೆ ಶಿಬಿರದಲ್ಲಿದ್ದ ಭಾನುಮತಿ ಹೆಸರಿನ ಹೆಣ್ಣಾನೆಯನ್ನು ಕರೆದುಕೊಂಡು ಬರಲಾಯಿತು. ಭಾನುಮತಿ ಆನೆಯ ಆಕರ್ಷಣೆ ತೋರಿಸಿ ಸಲಗಕ್ಕೆ ಖೆಡ್ಡಾ ತೋಡಲಾಯಿತು. ಡ್ರೋಣ್ ಸೇರಿದಂತೆ ಕಳೆದ ಸೋಮವಾರ ಎಲ್ಲಿಯೂ ಪತ್ತೆಯಾಗದ ಕಾರಣ ರಣತಂತ್ರ ಬದಲಿಸಲು ನಿರ್ಧರಿಸಲಾಯಿತು.
ಆನೆಗಳು ಒಂದು ರಾತ್ರಿ ಸುಮಾರು 30 ಕಿಲೋಮೀಟರ್‌ವರೆಗೆ ನಡೆಯುತ್ತವೆ. ಆದರೆ ಡ್ರೋಣ್ ಸಾಮರ್ಥ್ಯ ಇರೋದು ಜಾಸ್ತಿ ಎಂದರೆ ಐದು ಕಿಲೋಮೀಟರ್ ಮಾತ್ರ. ತೋಟಗಳಿಗೆ ನುಗ್ಗಿದರೆ ಇಲ್ಲವೇ ಊರೊಳಗೆ ದಾಳಿ ಇಟ್ಟ ಕೂಡಲೇ ಮಾಹಿತಿ ನೀಡುವಂತೆ ಜನರಿಗೆ ಸೂಚನೆ ನೀಡಲಾಗಿತ್ತು.
ಎರಡು ತಂಡಗಳಿಂದ ಕಾರ್ಯಾಚರಣೆ
ಆನೆ ಸೆರೆಗೆ ಪ್ರತ್ಯೇಕ ಎರಡು ತಂಡಗಳನ್ನು ರಚಿಸಲಾಗಿತ್ತು. ಸೂಳೆಕೆರೆ, ಹೊಸಹಳ್ಳಿ ತಾಂಡಾ, ಕೆಂಚಗಾರನಹಳ್ಳಿ, ಹೊಸಹಳ್ಳಿ, ದಾಗಿನಕಟ್ಟೆ, ಬಸವಾಪಟ್ಟಣ, ಬೆನಕಹಳ್ಳಿ, ಕೊಮಾರನಹಳ್ಳಿ, ಮಲ್ಲಿಗೇನಹಳ್ಳಿ, ಗಾಣದಕಟ್ಟೆ, ಲಿಂಗದಹಳ್ಳಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಆನೆ ಕಂಡರೆ ಮಾಹಿತಿ ನೀಡುವಂತೆ ಡಂಗುರ ಸಾರಲಾಗಿತ್ತು.
ಮಂಗಳವಾರ (ಏಪ್ರಿಲ್ 11) ಜೀನಹಳ್ಳಿ - ಕೆಂಚಿಕೊಪ್ಪ ಬಳಿ ಆನೆ ಸಂಚಾರ ಮಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಕೂಡಲೇ ಆಗಮಿಸಿದ ತಂಡವು ಆನೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications