ಜಗ್ಗೇಶ್ ಸಿನಿಮಾಕ್ಕೆ ಚುನಾವಣೆ ಬಿಸಿ: ಪೋಸ್ಟರ್ ಮುಚ್ಚಿದ ಚುನಾವಣಾಧಿಕಾರಿಗಳು, ಚಿತ್ರ ಪ್ರದರ್ಶನ ನಿಲ್ಲಿಸಲು ಸೂಚನೆ!
ನವರಸನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಚುನಾವಣೆ ಬಿಸಿ ಸದ್ಯ ಸಿನಿಮಾ ಮೇಲೂ ಬೀರಿದೆ. ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಚಿತ್ರ ಪ್ರದರ್ಶನ ಮಾಡಬೇಡಿ ಎಂದು ಚುನಾವಣಾಧಿಕಾರಿ ಆದೇಶಿಸಿದ್ದಾರೆ.
ಇದರಿಂದ ಕಂಗಾಲಾದ ಚಿತ್ರಮಂದಿರದ ಮಾಲೀಕರು, ಜಗ್ಗೇಶ್ ರಾಜ್ಯಸಭಾ ಸದಸ್ಯ, ಬಿಜೆಪಿಯ ಸ್ಟಾರ್ ಪ್ರಚಾರಕ ಮಾತ್ರ ಅವರು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ಅನೇಕ ನಟ ನಟಿಯರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಚಿತ್ರದ ಪ್ರದರ್ಶನವನ್ನು ಮುಂದುವರೆಸಲು ಅನುಮತಿ ನೀಡಿದ್ದಾರೆ. ಆದರೆ, ಚಿತ್ರಮಂದಿರದ ಮುಂದೆ ಇದ್ದ ಪೋಸ್ಟರ್ ಗಳಲ್ಲಿ ಜಗ್ಗೇಶ್ ಮುಖವನ್ನು ಮುಚ್ಚಿದ್ದಾರೆ.

ಸದ್ಯ ಚಿತ್ರಮಂದಿರದ ಹೊರಗೆ ಪೋಸ್ಟರ್ ಗಳಲ್ಲಿ ಜಗ್ಗೇಶ್ ಮುಖವನ್ನು ಬಿಳಿ ಹಾಳೆಯಿಂದ ಮುಚ್ಚಲಾಗಿದೆ. ಆದರೆ, ಚಿತ್ರ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ, ಎಂದಿನಂತೆ ಚಿತ್ರದ ಪ್ರದರ್ಶನ ಮುಂದುವರೆಯುತ್ತದೆ ಎಂದು ಚಿತ್ರಮಂದಿರದ ಮಾಲೀಕರು ತಿಳಿಸಿದ್ದಾರೆ.
ಜಗ್ಗೇಶ್ ಮಾತ್ರವಲ್ಲದೆ ಹಲವು ನಟ ನಟಿಯರು ಈಗ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದರೆ, ಶಿವರಾಜ್ ಕುಮಾರ್ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಮೋಹಕ ತಾರೆ ರಮ್ಯ, ನಿಶ್ವಿಕಾ ನಾಯ್ಡು, ಭಾವನಾ, ಶೃತಿ, ತಾರಾ ಅನುರಾಧ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು ಪ್ರಚಾರ ಮಾಡುತ್ತಿದ್ದಾರೆ.
ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾ
ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಚಿತ್ರ ಏಪ್ರಿಲ್ 28ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಂಡಿತ್ತು. ರಾಜ್ಯಾದ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡನೇ ವಾರ ಕೂಡ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ. ಜಗ್ಗೇಶ್ ಅಭಿನಯದ ಬಗ್ಗೆ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಟ ಜಗ್ಗೇಶ್ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ತಾನೆ ಅವರು, ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರವಾಗಿ ಮತಯಾಚನೆ ಮಾಡಿದ್ದರು. ಮಾತ್ರವಲ್ಲದೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications