Bhadra Dam: ಭದ್ರಾ ಜಲಾಶಯದ ಸುರಕ್ಷತೆಗೆ ಆದ್ಯತೆ ನೀಡದಿದ್ದರೆ ಹೆದ್ದಾರಿ ಬಂದ್‌ಗೆ ನಿರ್ಧಾರ
ದಾವಣಗೆರೆ, ಜುಲೈ, 23: ಭದ್ರಾ ಜಲಾಶಯ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಜನರ ಜೀವನಾಡಿಯಾಗಿದೆ. ಅಲ್ಲದೆ ಲಕ್ಷಾಂತರ ಹೆಕ್ಟೇರ್, ಜನರಿಗೆ ನೀರುಣಿಸುವ ಈ ಡ್ಯಾಂ ಇದೀಗ ತುಂಬುವ ಸನಿಹದಲ್ಲಿದೆ. ಆದರೆ ಈಗ ನೀರು ಸೋರಿಕೆಯಿಂದಾಗಿ ಇದರ ಸುರಕ್ಷತೆ ಬಗ್ಗೆ ಅನುಮಾನ ಮೂಡುವಂತಾಗಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ.
ಜಲಾಶಯದ ದುರಸ್ತಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಹಾಗೆಯೇ ರಾಜ್ಯ ಸರ್ಕಾರ, ಭದ್ರಾ ಡ್ಯಾಂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಜುಲೈ 24ಕ್ಕೆ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ರೈತ ಒಕ್ಕೂಟದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಹಿರಿಯ ರೈತ ಮುಖಂಡ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರು, ಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವಿದೆ. ಜುಲೈ ಮಧ್ಯದ ವೇಳೆಯಲ್ಲಿಯೇ ಹೆಚ್ಚು ನೀರು ಬಂದಿದೆ. ಸಾವಿರಾರು ಕ್ಯೂಸೆಕ್ ಹರಿದು ಬರುತ್ತಿದ್ದು, ಮುಂದೆ ಮಳೆಗಾಲ ಇರುವುದರಿಂದ ಜಲಾಶಯದಿಂದ ಭದ್ರಾ ಅಚ್ಚುಕಟ್ಟುದಾರರಿಗೆ ನೀರು ಒದಗಿಸಬೇಕು. ಇದು ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ರೈತರ, ಜನರ ಜೀವನಾಡಿಯಾಗಿದೆ. ಆದ್ದರಿಂದ ಸುರಕ್ಷತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಭದ್ರಾ ಡ್ಯಾಂನಿಂದ ನಿತ್ಯ ನಾಲ್ಕೂವರೆಯಿಂದ ಐದು ಸಾವಿರ ಕ್ಯೂಸೆಕ್ ನೀರು ಪೋಲಾಗುತ್ತಿದೆ ಎಂಬ ಮಾಹಿತಿ ಬಂತು. ಆಗ ನಾನು ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್ ಬೆಂಗಳೂರಿನಲ್ಲಿ ಇದ್ದೆವು. ನಾವು ಆಲೋಚನೆ ಮಾಡಿ ಬಿಜೆಪಿ ನಾಯಕರೆಲ್ಲರೂ ಸೇರಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆವು. ಅಲ್ಲದೆ, ನೂರು ಮುಖಂಡರು ಭದ್ರಾ ಡ್ಯಾಂಗೆ ಭೇಟಿ ನೀಡಿದ್ದೆವು ಎಂದರು.
ನೀರು ಸೋರಿಕೆ ತಡೆಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದೆವು. ಆದರೆ ಅಧಿಕಾರಿಗಳು ಕೊಟ್ಟ ಉತ್ತರ ಸಮರ್ಪಕವಾಗಿರಲಿಲ್ಲ. ಅಲ್ಲಿಯೇ ಪ್ರತಿಭಟನೆ ನಡೆಸಿ ಡ್ಯಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಬಂದಿದ್ದೆವು. ಕೂಡಲೇ ಭದ್ರಾ ಡ್ಯಾಂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೂಡಲೇ ದುರಸ್ತಿಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರ ನಿಯೋಗವು ಭೇಟಿ ನೀಡಿದ ಬಳಿಕ ಡ್ಯಾಂನ ಪ್ಲೇಟ್‌ಗಳನ್ನು ದುರಸ್ತಿಪಡಿಸಿದರು. ರಿವರ್ ಸ್ಲೀವ್ಸ್ ತಾತ್ಕಾಲಿಕವಾಗಿ ಹಾಕಿದ್ದು, ಪ್ಲೇಟ್‌ಗಳು ತುಕ್ಕು ಹಿಡಿದಿದ್ದವು. ನಾವು ನೋಡಿ ಅಧಿಕಾರಿಗಳಿಗೆ ತೋರಿಸಿದೆವು. ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುವ ಜಲಾಶಯದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಜಲಾಶಯ ದಾವಣಗೆರೆ ಜಿಲ್ಲೆಯ ಶೇಕಡಾ 70ರಷ್ಟು ಅಚ್ಚುಕಟ್ಟುದಾರರು ಅವಲಂಬಿತರಾಗಿದ್ದಾರೆ. ಈ ಜಿಲ್ಲೆಯ ಜನರಿಗೆ ಭದ್ರಾ ನದಿಯ ನೀರೇ ಆಧಾರ. ಆದ್ದರಿಂದ, ಡ್ಯಾಂ ತುಂಬಿದರೆ ರೈತರು, ಜನರು ನಿಟ್ಟುಸಿರುಬಿಡುತ್ತಾರೆ. ಭದ್ರಾ ಡ್ಯಾಂ ತುಂಬದಿದ್ದರೆ, ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಈಗ ಡ್ಯಾಂ ನೀರು ಸೋರಿಕೆಯಾಗಿದ್ದ ವಿಚಾರ ಈಗ ಮುನ್ನೆಲೆಗೆ ಬಂದಿದೆ. ರೈತ ಮುಖಂಡರು, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ನೀರು ಸಂರಕ್ಷಿಸಿಕೊಳ್ಳುವ ಕುರಿತಂತೆ ಸಲಹೆಗಳನ್ನೂ ಕೊಟ್ಟಿದ್ದಾರೆ.
ಭದ್ರಾ ಜಲಾಶಯದಲ್ಲಿ ಸ್ಲೂಯಿಸ್ ಗೇಟ್ ಮೂಲಕ ನೀರು ಸೋರಿಕೆಯಾಗಿದ್ದು, ಇದು ರೈತರು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಹದಿನೈದರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಿದೆ ಎಂಬ ಆರೋಪ ಮಾಡಲಾಗಿತ್ತು. ದಾವಣಗೆರೆ ಬಿಜೆಪಿ ನಾಯಕರ ನಿಯೋಗವು ಸ್ಥಳಕ್ಕೆ ಭೇಟಿ ನೀಡಿ ನೀರಿನ ಸೋರಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು ಎಂದರು.
ಈಗ ಸ್ಲೂಯಿಸ್ ಗೇಟ್ ಮೂಲಕ ನೀರು ಹೋಗಿದ್ದೇಕೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. 1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿ ಡ್ಯಾಂನ ತಳಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಬೇಕು. ಹಳೆಯಾದಾಗಿರುವ ಡ್ಯಾಂ ಗೇಟ್‌ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು. ಅಲ್ಲದೆ, ಬೇಲಿ ನಿರ್ಮಿಸಿ ಸುಭದ್ರತೆ ಕಾಪಾಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಭದ್ರಾ ಡ್ಯಾಂನಲ್ಲಿ ನೀರಿನ ಲಭ್ಯತೆಗೆ ಅನುಸಾರವಾಗಿ ನೀರು ಬಿಡುವ ನಿರ್ಧಾರ ಮಾಡಬೇಕು. ಕೇಂದ್ರದ ಜಲ ಆಯೋಗ ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆಯಡಿ ಡ್ಯಾಂನ ಸುರಕ್ಷತೆಗೆ ₹100 ಕೋಟಿಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈ 100 ಕೋಟಿ ಬಿಡುಗಡೆ ಮಾಡಲಾರದೆ, ಕರ್ನಾಟಕ ನೀರಾವರಿ ನಿಗಮದ ಮೂಲಕ ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿ ಸುಮ್ಮನೆ ಕೈಕಟ್ಟಿ ಕುಳಿತಿದೆ. ಇದು ಸರಿಯಲ್ಲ. ಡ್ಯಾಂನ ಉಳಿವಿಗಾಗಿ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಲಾರದಷ್ಟು ಬಡತನ ರಾಜ್ಯ ಸರ್ಕಾರಕ್ಕೆ ಬಂದಿಲ್ಲ. ಆದ್ದರಿಂದ ಕೂಡಲೇ ಹಣ ಬಿಡುಗಡೆ ಮಾಡಿ ಡ್ಯಾಂನ ಸುರಕ್ಷತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ತೇಜಸ್ವಿ ಪಟೇಲ್, ಕೊಳೇನಹಳ್ಳಿ ಬಿ.ಎಂ ಸತೀಶ್, ನಾಗೇಶ್ವರರಾವ್, ಬಸವರಾಜ ನಾಯ್ಕ, ಲೋಕಿಕೆರೆ ನಾಗರಜ್, ಧನಂಜಯ ಕಡ್ಲೆಬಾಳ್, ಚಂದ್ರಶೇಖರ್ ಪೂಜಾರ ಸೇರಿದಂತೆ ಮತ್ತಿತ್ತರರು ಭಾಗವಹಿಸಿದ್ದರು.












Click it and Unblock the Notifications