ಅಮರನಾಥ ಯಾತ್ರೆಯಲ್ಲಿ ಪವಾಡ ಸದೃಶ್ಯವಾಗಿ ಪಾರಾದ ದಾವಣಗೆರೆ ಮಹಿಳೆಯರು: ಇಲ್ಲಿದೆ ರೋಚಕ ಕಥೆ
ದಾವಣಗೆರೆ, ಜುಲೈ 11: ಜಿಲ್ಲೆಯಿಂದ ಅಮರನಾಥ ಯಾತ್ರೆಗೆ ಹೋಗಿ ಸಿಲುಕಿಕೊಂಡಿದ್ದ ನಾಲ್ವರು ಮಹಿಳೆಯರು ಪವಾಡ ಸದೃಶರಾಗಿ ಪಾರಾಗಿ ಬಂದಿದ್ದಾರೆ. ನಗರದ ಶಾಮನೂರು ಸೇರಿದಂತೆ ವಿವಿಧ ಬಡಾವಣೆಯ ಮಹಿಳೆಯರು ಅಮರನಾಥ ಯಾತ್ರೆಗೆ ತೆರಳಿದ್ದರು.
ಎನ್.ಆರ್. ಗೀತಾ, ಸಿ.ಹೆಚ್. ಚಂದ್ರಿಕಾ, ಬಿ.ಜಿ. ಪುಷ್ಪಾ, ಎಸ್.ವಿ. ಉಷಾರಾಣಿ ಎನ್ನುವವರು ಅಮರನಾಥ ಯಾತ್ರೆಗೆ ತೆರಳಿದ್ದು, ಯಾತ್ರೆಯಲ್ಲಿ ಇವರು ಅಕ್ಷರಶ ನಲುಗಿ ಹೋಗಿದ್ದರು. ಕೊನೆಗೂ ದೇವರ ದಯೆಯಿಂದ ಯಾತ್ರಿಗಳು ಸುರಕ್ಷಿತವಾಗಿ ದಾವಣಗೆರೆ ಸೇರಿದ್ದಾರೆ.

ನಾಲ್ವರು ಮಹಿಳೆಯರು ದಾವಣಗೆರೆಯಿಂದ ಕಳೆದ ಜೂನ್ 30ರಂದು ಅಮರನಾಥ ಯಾತ್ರೆಗೆ ಹೋಗಿದ್ದರು. ಜುಲೈ 6ರಂದೇ ಅಮರನಾಥ ದರ್ಶನ ಮುಗಿಸಿ ಬೇಸ್ ಕ್ಯಾಂಪ್‌ಗೆ ತೆರಳಿದ್ದರು. ಅವರು ಅಮರನಾಥನ ದರ್ಶನ ಪಡೆದು ವಾಪಸ್ ಬಂದ ಎರಡು ಗಂಟೆಯಲ್ಲಿ ಅಮರನಾಥದಲ್ಲಿ ಪ್ರತಿಕೂಲ ಹವಾಮಾನ ಸ್ಥಿತಿ ಉಂಟಾಗಿದೆ. ಯಾತ್ರೆಯಲ್ಲಿ ಸಾಕಷ್ಟು ಜನರು ಸಿಲುಕಿದ್ದು, ನಾವು ದೇವರ ದಯೆಯಿಂದ ಸುರಕ್ಷಿತವಾಗಿ ವಾಪಸ್ ಬಂದಿದ್ದೇವೆ ಎಂದು ಯಾತ್ರಿಗಳು ಹೇಳುತ್ತಾರೆ.
ಅಲ್ಲಿನ ಸೇನೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು ಸಾಕಷ್ಟು ಸಹಾಯ ಮಾಡಿದ್ದು, ಅವರಿಗೆ ಧನ್ಯವಾದ ಹೇಳಬೇಕು. ಅದರಲ್ಲೂ ನಾವು ದರ್ಶನ ಮುಗಿಸಿ ಬೇಗ ವಾಪಸ್ ಬಂದಿದ್ದಕ್ಕೆ ಸುರಕ್ಷಿತವಾಗಿ ಬಂದಿದ್ದೇವೆ. ಸ್ವಲ್ಪ ತಡವಾಗಿದ್ದರೂ ಅಲ್ಲೇ ಸಿಕ್ಕಿ ಕೊಳ್ಳಬೇಕಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು.

ದೇವರ ದಯೆಯಿಂದ ಬದುಕಿ ಬಂದೆವು
ಯಾತ್ರೆ ವೇಳೆ ಬಹಳ ಕಷ್ಟ ಎದುರಾಯಿತು. ಕಷ್ಟಪಟ್ಟು ಅಮರನಾಥನ ದರ್ಶನ ಮಾಡಿದೆವು. ಮಳೆ ಆರಂಭವಾಯಿತು. ನಮ್ಮನ್ನು ಬೇಗ ಬೇಗ ಹೊರ ಕಳುಹಿಸಿದರು. ಹೊರ ಬಂದು ಮಳೆಯಲ್ಲಿ ತೊಯ್ದೆವು. ಎಲ್ಲಿ ಹೋಗ್ತಿದ್ದೀವಿ ಅಂತಾನೇ ಗೊತ್ತಾಗುತ್ತಿರಲಿಲ್ಲ. ರಸ್ತೆಯಲ್ಲಿ ಕೆಸರು ನೀರು ಹರಿದು ಬರುತ್ತಿತ್ತು. ಎಲ್ಲಿ ಕೊಚ್ಚಿ ಹೋಗುತ್ತೇವೆ ಎನ್ನುವ ಆತಂಕ ಶುರುವಾಗಿತ್ತು. ಅಷ್ಟು ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು, ಕೊನೆಯಲ್ಲಿ ಪವಾಡ ಸದೃಶವಾಗಿ ಪಾರಾಗಿ ಸುರಕ್ಷಿತವಾಗಿ ದಾವಣಗೆರೆಗೆ ವಾಪಸ್ ಆದೆವು.
ಕುದುರೆ ಮೇಲೆ ಹೋಗಬೇಡಿ, ಭದ್ರತೆ ಇಲ್ಲ, ಅಪಾಯ ಎದುರಾಗುವ ಸಾಧ್ಯತೆ ಇದೆ. ನಡೆದುಕೊಂಡು ಹೋಗಲು ನಿಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಡೋಲುವಿನಲ್ಲಿ ಹೋಗಿ ಬನ್ನಿ. ಬೇಗ ದರ್ಶನವೂ ಆಗುತ್ತದೆ. ಸೇಫ್ ಕೂಡ ಹೌದು. ಗಂಗಾಧರ ಸ್ವಾಮಿ ಅವರು ಕೊಟ್ಟ ಈ ಸಲಹೆಯಿಂದ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿ ಬಂದೆವು. ಗಂಗಾಧರ ಸ್ವಾಮಿ ಅವರ ಮಾತು ಕೇಳದಿದ್ದರೆ ಇಷ್ಟು ಬೇಗ ವಾಪಸ್ ಬರಲು ಸಾಧ್ಯವಾಗುತ್ತಿರಲಿಲ್ಲ. ಅಮರನಾಥ ಯಾತ್ರೆಯ ವೇಳೆ ದರ್ಶನವೂ ಚೆನ್ನಾಗಿ ಆಯಿತು. ಅಪಾಯದಿಂದಲೂ ಪಾರಾಗಿ ಬಂದೆವು. ದೇವರ ನಾಮ ಸ್ಮರಣೆ ನಮ್ಮನ್ನು ಕಾಪಾಡಿತು ಎಂದಿದ್ದಾರೆ.

ಇನ್ನು ಅಲ್ಲಿನ ಸಿಆರ್‌ಪಿಎಫ್‌ಗೆ ಹ್ಯಾಟ್ಸಾಪ್ ಹೇಳಲೇಬೇಕು, ಏಕೆಂದರೆ ಅಷ್ಟು ಅತ್ಯುತ್ತಮವಾಗಿ, ವ್ಯವಸ್ಥಿತವಾಗಿ ಭದ್ರತೆ ನೀಡುತ್ತಿದ್ದರು ಎಂದು ಎನ್.ಆರ್. ಗೀತಾ, ಸಿ.ಹೆಚ್. ಚಂದ್ರಿಕಾ, ಬಿ.ಜಿ. ಪುಷ್ಪಾ ಹಾಗೂ ಎಸ್.ವಿ. ಉಷಾರಾಣಿ ತಾವು ಅಮರನಾಥದಲ್ಲಿ ಎದುರಿಸಿದ ಸಂಕಷ್ಟದ ಬಗ್ಗೆ ಹಾಗೂ ತಮಗೆ ನೆರವಾದವರ ಬಗ್ಗೆ ಅನುಭವ ಹಂಚಿಕೊಂಡರು.












Click it and Unblock the Notifications