Davanagere Benne Dose: ಡಿಸೆಂಬರ್ 23ರಿಂದ ಮೂರು ದಿನಗಳ ಕಾಲ ಬೆಣ್ಣೆದೋಸೆ ಹಬ್ಬ- ಸ್ಥಳ & ವಿಶೇಷತೆ ತಿಳಿಯಿರಿ
ದಾವಣಗೆರೆ, ಡಿಸೆಂಬರ್, 13: ದಾವಣಗೆರೆ ಅಂದತಕ್ಷಣ ಮೊದಲು ನೆನೆಪಿಗೆ ಬರುವುದೇ ಬೆಣ್ಣೆದೋಸೆ. ಇಲ್ಲಿನ ಬೆಣ್ಣೆದೋಸೆ ಬರೀ ಜಿಲ್ಲೆ, ರಾಜ್ಯ ಅಲ್ಲದೇ ದೇಶದಲ್ಲೇ ಪ್ರಸಿದ್ಧಿ ಪಡೆಯುವ ಮೂಲಕ ಇತಿಹಾಸದ ಪುಟಗಳಲ್ಲಿಯೂ ಅಚ್ಚೊತ್ತಿದೆ. ಇದೀಗ ಇದಕ್ಕೊಂದು ಬ್ರಾಂಡಿಂಗ್ ನೀಡಲು ಜಿಲ್ಲಾಡಳಿತ ಡಿಸೆಂಬರ್ 23, 24, 25ರಂದು ದಾವಣಗೆರೆಯಲ್ಲಿ ಬೆಣ್ಣೆದೋಸೆ ಹಬ್ಬವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೋಸೆ ಉತ್ಸವ ಆಯೋಜನೆಗೆ ಸಂಬಂಧಿಸಿದಂತೆ ಸಿದ್ಧತೆಯ ಕುರಿತು ಏರ್ಪಡಿಸಲಾದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಹೋಟೆಲ್ ಮಾಲೀಕರೊಂದಿಗೆ ಚರ್ಚಿಸಲಾಗಿದ್ದು, ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗಿದೆ. ದಾವಣಗೆರೆ ನಗರದ ಎಂಬಿಎ ಮೈದಾನ ಮತ್ತು ಗ್ಲಾಸ್‍ಹೌಸ್ ಮುಂಭಾಗ ದೋಸೆ ಹಬ್ಬವನ್ನು ಆಯೋಜಿಸಲಾಗಿದ್ದು, ಮೂರು ದಿನಗಳ ಕಾಲ ಬೆಳಗ್ಗೆ 8 ಗಂಟೆಯಿಂದ ರಾತ್ರಿವರೆಗೆ ದೋಸೆ ಸವಿಯಬಹುದಾಗಿದೆ ಎಂದರು.

ಬೆಣ್ಣೆದೋಸೆ ಹಬ್ಬದಲ್ಲಿ ಸುಮಾರು 5 ಲಕ್ಷ ಜನರು ಭಾಗಿಯಾಗಬೇಕೆಂಬ ಗುರಿ ಹೊಂದಲಾಗಿದೆ. ಇದಕ್ಕಾಗಿ ಎರಡು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ದೋಸೆ ಹೋಟೆಲ್ ಮಾಲಿಕರೊಂದಿಗೆ ಸಭೆ ನಡೆಸಲಾಗಿದ್ದು 10ಕ್ಕಿಂತ ಹೆಚ್ಚು ಹೋಟೆಲ್ ಮಾಲಿಕರು ಭಾಗವಹಿಸುವರು. ದೋಸೆ ಹಬ್ಬವನ್ನು ಏರ್ಪಡಿಸುವ ಮೂಲಕ ದಾವಣಗೆರೆ ದೋಸೆಯ ಸಾಂಪ್ರದಾಯಿಕತೆ ಉಳಿಸುವ ಮೂಲಕ ಗುಣಮಟ್ಟವನ್ನು ಕಾಪಾಡಿಕೊಂಡು ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಕಲ್ಪಿಸುವುದು ಈ ಹಬ್ಬದ ಉದ್ದೇಶವಾಗಿದೆ ಎಂದರು.
ದೋಸೆ ಹೋಟೆಲ್‍ಗಳಿಗೆ ಮಾನದಂಡದನ್ವಯ ಮುಂದಿನ ದಿನಗಳಲ್ಲಿ ಅಧಿಕೃತ ಟ್ಯಾಗ್ ನೀಡಲಿದ್ದು, ಇದಕ್ಕಾಗಿ ಆಹಾರ ಸುರಕ್ಷತಾ ಕಾಯಿದೆ ನಿಯಮ ಪಾಲನೆ, ಗುಣಮಟ್ಟ, ಕಲಬೆರಕೆ ರಹಿತ ಆಹಾರದ ಮಾನದಂಡಗಳನ್ನು ಅಳವಡಿಸಿಕೊಳ್ಳುವವರಿಗೆ ಈ ಟ್ಯಾಗ್ ನೀಡಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಣ್ಣೆದೋಸೆ ಹೋಟೆಲ್‍ಗಳಿಗೆ ಪ್ರಮಾಣ ಪತ್ರ
ಬೆಣ್ಣೆದೋಸೆ ಹೋಟೆಲ್‍ಗಳಿಗೆ ಗುಣ್ಣಮಟ್ಟದ ಖಾತರಿಯನ್ನು ಒದಗಿಸಲು ಆಹಾರ ಸುರಕ್ಷತಾ ಕಾಯಿದೆಯನ್ವಯ ಪರಿಶೀಲನೆ ನಡೆಸಿ ದೋಸೆಗೆ ಬಳಸುವ ಧಾನ್ಯಗಳು, ಬೆಣ್ಣೆ, ಎಣ್ಣೆ ಮತ್ತು ಇತರೆ ವಸ್ತುಗಳು, ಅಲ್ಲಿನ ಆರೋಗ್ಯವಂತ ಸಿಬ್ಬಂದಿಯ ತಪಾಸಣೆ ಸೇರಿದಂತೆ ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ಮಾನದಂಡಗಳನ್ನು ಪರಿಶೀಲಿಸಿ ಜಿಲ್ಲಾಡಳಿತದಿಂದ ಬ್ರಾಂಡಿಂಗ್ ಪ್ರಮಾಣ ಪತ್ರವನ್ನು ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಈ ಹೋಟೆಲ್‍ಗಳನ್ನು ಜೋಡಣೆ ಮಾಡಲಾಗುತ್ತದೆ.
ಪ್ರಮಾಣ ಪತ್ರ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಪಾಲಿಕೆ ಆಯುಕ್ತರು, ಆಹಾರ ಸುರಕ್ಷತಾ ಕಾಯಿದೆ ಅಂಕಿತ ಅಧಿಕಾರಿಗಳು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಒಳಗೊಂಡ ಸಮಿತಿ ರಚಿಸಿ ಅಧ್ಯಯನ ವರದಿ ನೀಡಲು ಇತ್ತೀಚೆಗಷ್ಟೇ ತಿಳಿಸಲಾಗಿದೆ.












Click it and Unblock the Notifications