ಇಡಿ ತನಿಖೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ದೌರ್ಭಾಗ್ಯ: ತೇಜಸ್ವಿ ಸೂರ್ಯ
ದಾವಣಗೆರೆ, ಜೂನ್ 14: "ಇಡಿ ತನಿಖೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುವುದಕ್ಕೆ ಹೊರಟಿರುವುದು ದೌರ್ಭಾಗ್ಯ. ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಇದ್ದರೆ ತನಿಖೆ ಎದುರಿಸಬೇಕಿತ್ತು" ಎಂದು ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದರು.
ದಾವಣಗೆರೆ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ತನಿಖೆ ಆಗಬಾರದು ಎಂದರೆ ಹೇಗೆ?. ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂದೆ ಕಾಂಗ್ರೆಸ್ ಪಕ್ಷವು ಬಿಜೆಪಿ ಮೇಲೆ ದಾಖಲಿಸುತ್ತಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗು ಅಮಿತ್ ಶಾ ಅವರ ಮೇಲೆ ಪ್ರಕರಣ ದಾಖಲಿಸಿತ್ತು" ಎಂದರು.
"ಮೋದಿ ಅವರು ಒಬ್ಬರೇ ಹೋಗಿ ಸತತ 10 ಗಂಟೆ ಕಾಲ ವಿಚಾರಣೆ ಎದುರಿಸಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಾಚಾರ ಆಗಿರೋದು ಪ್ರಾಥಮಿಕ ಹಂತದಲ್ಲೇ ಕಂಡುಬರುತ್ತಿದೆ. ಭ್ರಷ್ಟಾಚಾರ ಮಾಡಿಲ್ಲ ಅಂದರೆ ತನಿಖೆಗೆ ಒಳಗಾಗಿ" ಎಂದು ತೇಜಸ್ವಿ ಸೂರ್ಯ ಹೇಳಿದರು.

"ತನಿಖೆಯಲ್ಲಿ ಎಲ್ಲವೂ ಹೊರಬರಲಿ. ಭ್ರಷ್ಟಾಚಾರ ಮಾಡಿದ್ದರೆ ಸಾಮಾನ್ಯರಂತೆ ಶಿಕ್ಷೆ ಅನುಭವಿಸಲಿ. ಈ ದೇಶ ಗಾಂಧಿ ಕುಟುಂಬ ದಿಕ್ಕಿನಲ್ಲಿ ನಡೆಯೋದಿಲ್ಲ. ಕಾನೂನಿನ ಸಂವಿಧಾನದ ಪ್ರಕಾರ ನಡೆಯುತ್ತಿದೆ. ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಈಗ ತನಿಖೆ ದಿಕ್ಕು ತಪ್ಪಿಸಲು ಸಾವಿರಾರು ಜನರನ್ನು ಬೀದಿಗೆ ಇಳಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಿಸುತ್ತಿದೆ. ಒಂದು ಕಾಲದಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕಾಂಗ್ರೆಸ್ ಪಕ್ಷವು ಯುವರಾಜನ ರಕ್ಷಣೆಗೆ ನಿಂತಿರುವುದು ಬೇಸರದ ಸಂಗತಿ" ಎಂದರು.
"ಸರಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ತಪ್ಪು ಮಾಡಿದವರು ಒಪ್ಪಿಕೊಳ್ಳುವ ಧೈರ್ಯ ತೋರಿಸಬೇಕಿತ್ತು. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರೂ ಸಂವಿಧಾನ, ಕಾನೂನಿನಡಿ ಸಮಾನರು. ಮನಸ್ಸಿನಲ್ಲಿ ಕಟ್ಟಿಕೊಂಡಿರುವ ಅರಮನೆಯಿಂದ ಹೊರಬನ್ನಿ. ಸತ್ಯ ನಿಮ್ಮ ಜೊತೆಗಿದ್ದರೆ ಪರಿಣಾಮ, ಪ್ರತಿಫಲ ನಿಮ್ಮ ಪರ ಇರುತ್ತದೆ. ಭ್ರಷ್ಟಾಚಾರ ಎಸಗಿದ್ದರೆ ಶಿಕ್ಷೆ ಆಗುತ್ತದೆ" ಎಂದು ತಿಳಿಸಿದರು.
ಅದ್ದೂರಿ ಸ್ವಾಗತ: ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ದಾವಣಗೆರೆಗೆ ಆಗಮಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯಗೆ ಹೆಬ್ಬಾಳದ ಟೋಲ್ ಗೇಟ್ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು. ಕಾರು ರ್‍ಯಾಲಿ ಮೂಲಕ ದಾವಣಗೆರೆಗೆ ಕರೆತರಲಾಯಿತು.

ಇಲ್ಲಿಗೆ ಆಗಮಿಸಿದ ಬಳಿಕ ತೇಜಸ್ವಿ ಸೂರ್ಯ ಬೆಣ್ಣೆದೋಸೆ ಸವಿದು ಸಂತಸ ಪಟ್ಟರು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಟಿ. ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಯುವ ಮುಖಂಡ ಶಿವನಗೌಡ ಪಾಟೀಲ್, ಪಾಲಿಕೆ ಸದಸ್ಯರು, ಯುವ ಮೋರ್ಚಾ ಜಿಲ್ಲಾ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.












Click it and Unblock the Notifications