ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲಾನ್ ಏನು?
ದಾವಣಗೆರೆ, ಏಪ್ರಿಲ್, 02: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೇ ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಮತ್ತೊಂದೆಡೆ ಎಸ್.ಎ.ರವೀಂದ್ರನಾಥ್‌ಗೆ ವಯಸ್ಸು ಆಗಿದ್ದು ಹಾಗೂ ಆರೋಗ್ಯ ಸಮಸ್ಯೆಯಿರುವ ಕಾರಣ ಅವರು ಸ್ಪರ್ಧಿಸುವುದು ಅನುಮಾನವಾಗಿದೆ. ಆದ್ದರಿಂದ ಉಳಿದವರು ಟಿಕೆಟ್‌ಗೆ ತೀವ್ರ ಪೈಪೋಟಿ ಹಾಗೂ ಲಾಬಿ ನಡೆಸತೊಡಗಿದ್ದಾರೆ.
ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ
ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಸ್.ಟಿ.ವೀರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಜೀವನ್ ಮೂರ್ತಿ, ಕೆ. ಎಂ. ಸುರೇಶ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ. ಆದರೆ ಈ ಮೂವರಲ್ಲಿ ತೀವ್ರ ಪೈಪೋಟಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿನ್ನೆಯಷ್ಟೇ ದಾವಣಗೆರೆಗೆ ಆಗಮಿಸಿ ವೋಟಿಂಗ್ ನಡೆಸಿದ್ದಾರೆ. ಆರ್‌ಎಸ್‌ಎಸ್ ಕಟ್ಟಾ ಕಾರ್ಯಕರ್ತರಾದ ವೀರೇಶ್, ಬಿಜೆಪಿಗೆ ದುಡಿದಿರುವ ಜಗದೀಶ್, ರೈತ ಮೋರ್ಚಾ ಮೂಲಕ ಗಮನ ಸೆಳೆದಿರುವ ಲೋಕಿಕೆರೆ ನಾಗರಾಜ್, ಬಿಜೆಪಿ ಹಿರಿಯ ಮುಖಂಡ ಜೀವನ್ ಮೂರ್ತಿ ಅವರ ಹೆಸರು ಕೂಡ ಕೇಳಿಬರುತ್ತಿದೆ.
ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಉಳಿದಿದ್ದು, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಘೋಷಿಸುತ್ತದೆಯಾ ಎಂಬ ಕುತೂಹಲವೂ ಗರಿಗೆದರಿದೆ. ಇನ್ನು ಕೆಲವರು ಮಾತ್ರ ಟಿಕೆಟ್ ಪಡೆಲು ಪ್ರಯತ್ನ ಮುಂದುವರೆಸಿದ್ದಾರೆ.
ಮತ್ತೊಂದೆಡೆ ರವೀಂದ್ರನಾಥ್ ಅವರ ಅಭಿಪ್ರಾಯವೂ ಮುಖ್ಯ ಆಗುತ್ತದೆ. ಸಂಸದ ಜಿ.ಎಂ. ಸಿದ್ದೇಶ್ವರ ಅಥವಾ ಅವರ ಪುತ್ರ ಅನಿತ್ ಅವರ ಹೆಸರೂ ಸಹ ಕೇಳಿ ಬರುತ್ತಿದೆ. ಆದರೆ ಮಲ್ಲಿಕಾರ್ಜುನ್ ಅವರ ವಿರುದ್ಧ ಯಾರು ಕಣಕ್ಕಿಳಿಯುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

2013ರಲ್ಲಿ ಬಿಜೆಪಿಯ ಎಸ್.ಎ.ರವೀಂದ್ರನಾಥ್ ಅವರ ವಿರುದ್ಧ ಮಲ್ಲಿಕಾರ್ಜುನ್ ಭಾರಿ ಅಂತರದಲ್ಲಿ ಜಯಗಳಿಸಿದ್ದರು. ಆದರೆ 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ್ ವಿರುದ್ಧ ಎಸ್. ಎ. ರವೀಂದ್ರನಾಥ್ ಜಯಭೇರಿ ಬಾರಿಸಿದ್ದರು. ಸಚಿವರಾಗಿದ್ದ ಮಲ್ಲಿಕಾರ್ಜುನ್ ಅವರ ವಿರುದ್ಧ ವಿರೋಚಿತ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ ಸೋಲಿಸಲು ಬಿಜೆಪಿ ರಣತಂತ್ರ
ಮಲ್ಲಿಕಾರ್ಜುನ್ ಅವರು ಸಹ ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರು ಪಕ್ಷದ ಮುಖಂಡರು, ಕಾರ್ಯಕರ್ತರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದಾರೆ. ಅದೇ ರೀತಿಯಲ್ಲಿ ಬಿಜೆಪಿಯು ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಿ ಮಲ್ಲಿಕಾರ್ಜುನ್ ಅವರನ್ನು ಸೋಲಿಸಬೇಕೆಂಬ ರಣತಂತ್ರ ಹೆಣೆದಿದೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಆದ ಬಳಿಕ ರವೀಂದ್ರನಾಥ್ ಅವರೇ ಕಣಕ್ಕಿಳಿಯುತ್ತಿದ್ದರು. ಆದರೆ ಈ ಬಾರಿ ಬೇರೆಯವರಿಗೆ ಟಿಕೆಟ್ ನೀಡುವುದು ಖಚಿತ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳುತ್ತಿದ್ದರೂ, ಎಸ್. ಎ. ರವೀಂದ್ರನಾಥ್ ಅವರು ಯಾರಿಗೆ ತಮ್ಮ ಬೆಂಬಲ ಸೂಚಿಸುತ್ತಾರೆ ಎಂಬ ಕುತೂಹಲದ ಜೊತೆಗೆ ಆಕಾಂಕ್ಷಿಗಳ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ರೈತಮುಖಂಡ ಲೋಕಿಕೆರೆ ನಾಗರಾಜ್ ಹಾಗೂ ದಾವಣಗೆರೆ- ಹರಿಹರ ಬ್ಯಾಂಕ್‌ನ ನಿರ್ದೇಶಕ ಎನ್.ಎ. ಮುರುಗೇಶ್, ಜೀವನ್ ಮೂರ್ತಿ ಸೇರಿದಂತೆ ಹಲವು ಆಕಾಂಕ್ಷಿಗಳು ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದಾರೆ. ಕೊನೆಗೆ ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕೆಲ ಆಕಾಂಕ್ಷಿಗಳು ಪಕ್ಷದ ವರಿಷ್ಠರ ಮೂಲಕ ತಮಗೆ ಟಿಕೆಟ್ ನೀಡಬೇಕು ಎಂಬ ಒತ್ತಡವನ್ನೂ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಈಗಾಗಲೇ ವರಿಷ್ಠರು ಆಕಾಂಕ್ಷಿಗಳ ಬಗ್ಗೆ ವರದಿ ಪಡೆದಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications