ಹಲ್ಲೆ ಪ್ರಕರಣ; ಶಾಮನೂರು ಶಿವಶಂಕರಪ್ಪ ಪುತ್ರ ಗಣೇಶ್ ಮೇಲೆ ದೂರು
ದಾವಣಗೆರೆ, ಡಿಸೆಂಬರ್ 27: ಸಿಮೆಂಟ್ ಅಂಗಡಿ ಮಾಲೀಕ ಮಹದೇವಪ್ಪ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಮನೂರು ಶಿವಶಂಕರಪ್ಪ ಅವರ ಮಗ ಎಸ್.ಎಸ್.ಗಣೇಶ್ ಅವರ ವಿರುದ್ಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ 24ರಂದು ಶಾಮನೂರು ರಸ್ತೆಯಲ್ಲಿದ್ದ ನಂದಿ ಸಿಮೆಂಟ್ ಅಂಗಡಿಯಲ್ಲಿ ಮಹಾದೇವಪ್ಪ ಅಂಗಡಿಯಲ್ಲಿ ಪೂಜೆ ಮಾಡುತ್ತಿದ್ದಾಗ ಏಕಾಏಕಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ಯುವಕರು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಮಹದೇವಪ್ಪನವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾಮನೂರು ಶಿವಶಂಕರಪ್ಪನವರ ಪುತ್ರ ಗಣೇಶ್ ಕೊಲೆ ಯತ್ನ ನಡೆಸಿದ್ದು ಎಂದು ಮಹದೇವಪ್ಪ ಅವರ ಸಹೋದರ ದೂರು ನೀಡಿದ್ದಾರೆ.
ಎಸ್ ಎಸ್ ಗಾರ್ಡೇನಿಯಾ ಹೊಟೇಲ್ ನ ಕಲ್ಯಾಣ ಮಂಟಪದ ಸೆಟ್ ಬ್ಯಾಕ್ ವಿಚಾರವಾಗಿ ಗಣೇಶ್ ಅವರು ಮಹದೇವಪ್ಪ ಅವರ ಜೊತೆ ಕಾನೂನು ಹೋರಾಟ ಮಾಡುತ್ತಿದ್ದು, ಈ ವಿಚಾರವಾಗಿ ಮಹದೇವಪ್ಪ ಅವರನ್ನು ಕೊಲೆ ಮಾಡಲು ಇಬ್ಬರು ವ್ಯಕ್ತಿಗಳಿಂದ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

2014ಕ್ಕೂ ಮುನ್ನ ತಾಲ್ಲೂಕಿನ ಹೆಬ್ಬಾಳಿನಲ್ಲಿರುವ ಜಿಎಂಎಂ ಎಂಟರ್ ಪ್ರೈಸಸ್ ನಲ್ಲಿ ಗಣೇಶ್, ಮುನಿಯಪ್ಪರೊಂದಿಗೆ ಮಹದೇವಪ್ಪ ಪಾಲುದಾರಿಕೆ ಹೊಂದಿದ್ದರು. ಕಾರಣಾಂತರಗಳಿಂದ 2015ರಲ್ಲಿ ಆ ಪಾಲುದಾರಿಕೆಯಿಂದ ಮಹದೇವಪ್ಪ ಹೊರಬಂದರು. ಗಣೇಶ್ ಒಡತನದಲ್ಲಿರುವ ಎಸ್ ಎಸ್ ಗಾರ್ಡೇನಿಯಾದ ಕಟ್ಟಡವು ಮಹದೇವಪ್ಪ ಅವರ ಮನೆಯ ಗೋಡೆಗೆ ಹತ್ತಿಕೊಂಡಿದ್ದು, ಈ ವಿಚಾರದಲ್ಲಿ ಮಹದೇವಪ್ಪ ನಗರ ಪಾಲಿಕೆಗೆ ಸೆಟ್ ಬ್ಯಾಕ್ ವಿಚಾರದಲ್ಲಿ ದೂರು ನೀಡಿದ್ದರು. ನಂತರ 2017ರಲ್ಲಿ ಮಹದೇವಪ್ಪ ಅವರು ಗಣೇಶ್ ಅವರ ಮೇಲೆ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ದೂರು ದಾಖಲಿಸಿದ್ದರು. ಇದೇ ವಿಚಾರದಲ್ಲಿ ಮನಸ್ತಾಪ ಮುಂದುವರೆದಿತ್ತು ಎನ್ನಲಾಗಿದೆ.
ನವೆಂಬರ್ ತಿಂಗಳಲ್ಲಿ ಗಣೇಶ್ ಅವರು ನಡೆಸುತ್ತಿರುವ ಕಲ್ಲು ಗಣಿಗಾರಿಕೆ ವಿಚಾರವಾಗಿ ಗಣಿ ಮತ್ತು ಭೂ ವಿಜಾನ ಇಲಾಖೆಯಿಂದ ಮಹದೇವಪ್ಪ ಅವರು ಮಾಹಿತಿ ಕೇಳಿದ್ದರು. ಇದರಿಂದ ಗಣೇಶ್ ಕೋಪಗೊಂಡಿದ್ದು, ಕೊಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications