ಮತ್ತೆ ಮಾತಾಡ್ತೇನೆ, ಈಗ ಬೇಡ: ಯಡಿಯೂರಪ್ಪ ಮಾತಿನ ಮರ್ಮವೇನು...?
ದಾವಣಗೆರೆ, ಜುಲೈ 23: ಮತ್ತೆ ಮಾತಾಡ್ತೇನೆ. ಈಗ ಬೇಡ. ಇದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೊನ್ನಾಳಿ ಪಟ್ಟಣದಲ್ಲಿರುವ ರೇಣುಕಾಚಾರ್ಯ ಮನೆಯಲ್ಲಿ ಆಡಿದ ಮಾತು. ಬೆಳಿಗ್ಗೆ ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ್ದ ಯಡಿಯೂರಪ್ಪ ಅವರು ರೇಣುಕಾಚಾರ್ಯ ಜೊತೆ ಚರ್ಚೆ ನಡೆಸಿದರು.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡುವಾಗ ರೇಣುಕಾಚಾರ್ಯ ಅವರು, ಮತ್ತೊಮ್ಮೆ ಚುನಾವಣೆಗೆ ನೀವು ಸ್ಪರ್ಧಿಸಬೇಕು ಎಂಬ ಮನವಿ ಮಾಡಿದರು. ಈ ವೇಳೆ ಈಗಾಗಲೇ ಹೇಳಿದ್ದೇನೆ. ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ, ಈ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆದ್ರೆ, ರೇಣುಕಾಚಾರ್ಯರಿಗೆ ಹೇಳಿದ ಒಂದು ರಾಜಕೀಯ ಪಡಸಾಲೆಯಲ್ಲಿ ಈಗ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. "ಆಮೇಲೆ ಮಾತಾಡ್ತೇನೆ'' ಎಂಬ ಮಾತು ತೀವ್ರ ಕುತೂಹಲ ಕೆರಳಿಸಿದೆ. ಒಂದು ವೇಳೆ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದರೆ ಅಥವಾ ತಮ್ಮ ಆಪ್ತರನ್ನು ಕಡೆಗಣಿಸಿದರೆ ಬೇರೆಯದ್ದೇ ರಣತಂತ್ರ ಹೆಣೆಯಲಿದ್ದಾರಾ? ಯಡಿಯೂರಪ್ಪ ಎನ್ನುವ ಗುಸುಗುಸು ಸಹ ಶುರುವಾಗಿದೆ. ಈಗಾಗಲೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪರ ಈ ಮಾತಿನ ಮರ್ಮವೇನು ಎಂಬ ಪ್ರಶ್ನೆಯೂ ಗರಿಗೆದರಿದೆ.

ಮಾಧ್ಯಮದವರ ಜೊತೆ ಮಾತನಾಡಿದ ಯಡಿಯೂರಪ್ಪ, ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲೆಸುವುದು ಬೇಡ. ಅಧಿಕಾರಕ್ಕೆ ಬಂದೇ ಬಿಡ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಸೆ ಕೈಗೂಡುವುದಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ 120 ಸೀಟು ಕಾಂಗ್ರೆಸ್ ಗೆಲ್ಲುವುದಿಲ್ಲ. ಬಿಜೆಪಿ 135ಕ್ಕೂ ಹೆಚ್ಚು ಸ್ಥಾನಗಳಲ್ಲಿ ವಿಜಯಭೇರಿ ಬಾರಿಸಲಿದೆ. ಸೂರ್ಯ, ಚಂದ್ರರು ಇರುವುದು ಎಷ್ಟೋ ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಭ್ರಮೆಯಲ್ಲಿರುವವರಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಭಾವುಕರಾದ ರೇಣುಕಾಚಾರ್ಯ
ಇನ್ನು ಯಡಿಯೂರಪ್ಪರ ಪಕ್ಕದಲ್ಲಿ ಕುಳಿತಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಭಾವುಕರಾಗಿದ್ದರು. ಉಮ್ಮಳಿಸಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಂಡರು. ಮಾಧ್ಯಮದವರ ಜೊತೆ ಮಾತನಾಡುವಾಗ ಯಡಿಯೂರಪ್ಪ ಅವರು ಚುನಾವಣೆ ನಿವೃತ್ತಿ ಘೋಷಿಸಿದ್ದಾರಲ್ವಾ ಎಂಬ ಪ್ರಶ್ನೆ ಎದುರಾದಾಗ ಮತ್ತೊಮ್ಮೆ ಭಾವುಕರಾದರು. ಈ ವೇಳೆ ನೋವನ್ನು ಅದುಮಿಟ್ಟುಕೊಂಡೇ ಮಾತನಾಡಿದ ರೇಣುಕಾಚಾರ್ಯ ನಮ್ಮಂಥವರಿಗೆ ಬಿ ಫಾರಂ ಕೊಡಿಸಿ ಶಾಸಕರನ್ನಾಗಿ ಮಾಡಿದರು. ಅವರಿಲ್ಲದ ಚುನಾವಣೆ ಊಹಿಸಿಕೊಳ್ಳಲು ಆಗದು ಎಂದು ಹೇಳಿದರು.












Click it and Unblock the Notifications