ಮಾಜಿ ರಾಜ್ಯಪಾಲ ಹಂಸರಾಜ್, ಮಾಜಿ ಲೋಕಾಯುಕ್ತರ ವಿರುದ್ಧ ರೇಣುಕಾಚಾರ್ಯ ಆರೋಪ
ದಾವಣಗೆರೆ, ಸೆಪ್ಟೆಂಬರ್ 9: ಕರ್ನಾಟಕಕ್ಕೆ ರಾಜ್ಯಪಾಲರಾಗಿದ್ದ ಹಂಸರಾಜ್ ಅವರು ಧ್ವಂಸರಾಜ್ ಆಗಿದ್ದರು. ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಕೊಟ್ಟ ವರದಿಗೆ ವಿಚಾರಣೆಗೆ ಅನುಮತಿ ಕೊಟ್ಟರು. ಸಂತೋಷ್ ಹೆಗ್ಡೆ ವಿಕೃತ ಮನಸ್ಸಿನ ವ್ಯಕ್ತಿ. ಯಡಿಯೂರಪ್ಪ ಅವರ ಮೇಲೆ ದುರುದ್ದೇಶದಿಂದ ಕೇಸ್ ಹಾಕಿ, ಜೈಲಿಗೆ ಹೋಗುವಂತೆ ಮಾಡಿದರು ಎಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಭಾನುವಾರ ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮತೀರ್ಥದಲ್ಲಿ ಮಾತನಾಡಿದ ಅವರು, ಸಂತೋಷ್ ಹೆಗ್ಡೆ ವಿಕೃತ ಮನಸಿನ ವ್ಯಕ್ತಿ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಲಿಲ್ಲ, ಲೂಟಿ ಮಾಡಲಿಲ್ಲ. ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ಹೋದರು. ಯಡಿಯೂರಪ್ಪ ಅವರು ಜೈಲಿಗೆ ಹೋದಾಗ ಬಿಜೆಪಿಯವರು ಯಾವುದೇ ಗಲಾಟೆ ಮಾಡಲಿಲ್ಲ ಎಂದಿದ್ದಾರೆ ರೇಣುಕಾಚಾರ್ಯ.

ಈಶ್ವರಪ್ಪ ಅವರು ಈಚೆಗೆ ನೀಡಿದ ಹೇಳಿಕೆಯೊಂದನ್ನು ಸಮರ್ಥಿಸಿರುವ ರೇಣುಕಾಚಾರ್ಯ, ರಾಜಕಾರಣಿಗಳ ಹೇಳಿಕೆಗಳು ಸ್ವಲ್ಪ ವ್ಯತ್ಯಾಸವಾಗಿ ಇರಬಹುದು. ಆದರೆ ಅದನ್ನು ವೈಭವೀಕರಿಸಬಾರದು. ಈಶ್ವರಪ್ಪ ಅವರು ಹಿರಿಯರು. ಉದ್ಧಟತನದ ಹೇಳಿಕೆ ನೀಡುವವರಲ್ಲ. ಎಡವಿದ ವ್ಯಕ್ತಿಗಳನ್ನು ಮೇಲಕ್ಕೆ ಎತ್ತಿ ಅವರ ಮನಸ್ಸನ್ನು ಪರಿವರ್ತನೆ ಮಾಡಬೇಕು ಎಂದು ಸಲಹೆ ಮಾಡಿದರು.
ಅನರ್ಹರು ಬಿಜೆಪಿ ಸೇರಿದ್ದಾರೆಂದು ನಾನು ಹೇಳಿಲ್ಲ. ಆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.












Click it and Unblock the Notifications