ದಾವಣಗೆರೆ: ಅಡಿಕೆ ತುಸು ಧಾರಣೆ, ಹೊಸವರ್ಷದ ವೇಳೆಗೆ ಕ್ವಿಂಟಾಲ್‌ಗೆ ₹50 ಸಾವಿರ ದಾಟುತ್ತಾ?
ದಾವಣಗೆರೆ, ಡಿಸೆಂಬರ್, 17: ಕಳೆದ ಕೆಲ ವಾರಗಳಿಂದ ಕುಸಿತ ಕಂಡಿದ್ದ ಅಡಿಕೆ ಧಾರಣೆಯು ಸ್ವಲ್ಪ ಮಟ್ಟದಲ್ಲಿ ಏರಿಕೆ ಕಂಡಿದೆ. ಇದು ಅಡಿಕೆ ಬೆಳೆಗಾರರ ಸಂತಸಕ್ಕೆ ಕಾರಣವಾಗಿದ್ದು, ಮತ್ತಷ್ಟು ದರ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ಮಾರುಕಟ್ಟೆಯಲ್ಲಿ ಅಡಿಕೆ ದರ ಹೆಚ್ಚಳವಾಗಿದ್ದು, ಪ್ರತಿ ಕ್ವಿಂಟಲ್ ಅಡಿಕೆ 48,199 ರೂಪಾಯಿ ಆಗಿದ್ದು, ಚೇತರಿಕೆ ಕಂಡಿದೆ.
ಅಡಿಕೆ ಮಾರುಕಟ್ಟೆಯಲ್ಲಿ ಚನ್ನಗಿರಿಯೂ ಪ್ರಮುಖ ಮಾರುಕಟ್ಟೆ. ಡಿಸೆಂಬರ್ ಎರಡನೇ ವಾರದಲ್ಲಿ ಚೇತರಿಕೆಯತ್ತ ಸಾಗಿದ್ದು, ಇದು ಅಡಿಕೆ ಬೆಳೆಗಾರರ ಮೊಗದಲ್ಲಿ ಸ್ವಲ್ಪ ಮಟ್ಟಿಗೆ ಮಂದಹಾಸ ಮೂಡಿಸಿದೆ. ಡಿಸೆಂಬರ್ 15ರಂದು ಒಂದೇ ದಿನ 400 ರೂಪಾಯಿ ಏರಿಕೆ ದಾಖಲಿಸಿರುವ ಅಡಿಕೆಯು ಪ್ರತಿ ಕ್ವಿಂಟಾಲ್‌ಗೆ ಹೊಸ ವರ್ಷದ ಬಳಿಕ 50 ಸಾವಿರ ರೂಪಾಯಿ ದಾಟುವ ವಿಶ್ವಾಸದಲ್ಲಿ ಇದ್ದಾರೆ.

ರಾಶಿ ಅಡಿಕೆ ಬೆಲೆ ಗರಿಷ್ಠ 48,199 ರೂಪಾಯಿ ಆಗಿದ್ದರೆ, ಕನಿಷ್ಠ ಬೆಲೆ 46,599 ರೂಪಾಯಿ ಆಗಿದೆ. ಡಿಸೆಂಬರ್ ತಿಂಗಳಿನಲ್ಲಿ ಬಹೇತಕ ಅಡಿಕೆ ಕೊಯ್ಲು ಮುಕ್ತಾಯ ಕಾಣಗಲಿದ್ದು. ಈ ತಿಂಗಳಲ್ಲಿ ಏರು ಮುಖಗತಿಯಲ್ಲಿ ಸಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳ ಆಗಬಹುದೆಂಬ ನಿರೀಕ್ಷೆಯೂ ಗರಿಗೆದರುವಂತೆ ಮಾಡಿದೆ.
ಈ ವರ್ಷದ ಅಡಿಕೆ ಧಾರಣೆಯಲ್ಲಿ ಸಾಕಷ್ಟು ಏರಿಳಿತ ಕಂಡು ಬಂದಿದೆ. ವರ್ಷದ ಕೊನೆ ತಿಂಗಳಿನಲ್ಲಿ ಮತ್ತೆ ಏರು ಮುಖದಲ್ಲಿ ಸಾಗುತ್ತಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದ್ದರೂ, ಹೇಳಿಕೊಳ್ಳುವಷ್ಟು ಧಾರಣೆ ಹೆಚ್ಚಾಗದಿರುವುದು ಸ್ವಲ್ಪ ನಿರಾಸೆಯನ್ನೂ ಮೂಡಿಸಿದೆ.
2023ರ ಏಪ್ರಿಲ್ ತಿಂಗಳಿನಲ್ಲಿ 48 ಸಾವಿರ ರೂಪಾಯಿ ಇದ್ದ ಅಡಿಕೆ ಧಾರಣೆಯು ಜೂನ್ ತಿಂಗಳಲ್ಲಿ 50 ಸಾವಿರ ರೂಪಾಯಿ ಗಡಿ ದಾಟಿತ್ತು. ಜುಲೈ ತಿಂಗಳಿನಲ್ಲಿ 57 ಸಾವಿರ ತಲುಪಿದ್ದ ಪ್ರತಿ ಕ್ವಿಂಟಲ್ ಅಡಿಕೆಯು ಒಂದೇ ತಿಂಗಳಿನಲ್ಲಿ 10 ಸಾವಿರ ರೂಪಾಯಿಯಷ್ಟು ಕುಸಿತ ಕಂಡಿತ್ತು.
ಅಲ್ಲಿಂದ ಇಲ್ಲಿಯವರೆಗೆ ಅಡಿಕೆ ಧಾರಣೆಯು ಸ್ವಲ್ಪ ಮಟ್ಟಿಗೆ ಏರುತ್ತಾ, ಇಳಿಯುತ್ತಾ ಸಾಗುತಿತ್ತು. ಆದರೆ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಅಡಿಕೆ ಧಾರಣೆ ಹೆಚ್ಚಳ ಕಂಡು ಬರುತ್ತಿರುವುದು ಬೆಳೆಗಾರರಿಗೆ ಸಮಾಧಾನ ತಂದಿದೆ. ಆದರೆ ಬೆಳೆಯು ಕಡಿಮೆಯಾಗಿದ್ದು, ಅಡಿಕೆ ತೂಕ ಬಂದಿಲ್ಲ. ಇದರಿಂದ ಇಳುವರಿಯೂ ಕುಂಠಿತವಾಗಿದೆ. ಕಳೆದ ವರ್ಷ ಒಂದು ಹೆಕ್ಟೇರ್‌ಗೆ 6-7 ಕ್ವಿಂಟಲ್ ಅಡಿಕೆ ಬಂದಿತ್ತು. ಆದರೆ ಈ ಬಾರಿ ಇಷ್ಟು ಬರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಅಡಿಕೆ ಬೆಳೆಗಾರರು.
ಈ ಬಾರಿ ಬೇಸಿಗೆಯು ಜಾಸ್ತಿಯಿದೆ. ಬಿಸಿಲೂ ಹೆಚ್ಚಿದೆ. ಮಳೆಯೂ ಕೈ ಕೊಟ್ಟಿದೆ. ಮತ್ತೆ, ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟವು ಕಡಿಮೆ ಇದೆ. ಇಂದಿಗೆ ನೀರಿನ ಮಟ್ಟ 151.4 ಅಡಿ ನೀರು ಇದೆ. ಕಳೆದ ವರ್ಷ 183 ಅಡಿ ನೀರು ಸಂಗ್ರಹ ಇತ್ತು. ಇನ್ನು ನಾಲ್ಕೈದು ತಿಂಗಳ ಕಾಲ ಅಡಿಕೆಯನ್ನು ಬಿಸಿಲಿನ ಬೇಗೆಯಿಂದ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಪ್ರತಿ ಕ್ವಿಂಟಲ್ ರಾಶಿ ಉತ್ತಮ ಅಡಿಕೆ ಕನಿಷ್ಠ ಬೆಲೆ 46,599 ರೂಪಾಯಿ ದಾಖಲಿಸಿದ್ದರೆ, ಗರಿಷ್ಠ 48,199 ರೂಪಾಯಿಗೆ ವಹಿವಾಟು ನಡೆಸಿದೆ. ಸರಾಸರಿ 47,506 ರೂಪಾಯಿ ಇದ್ದು, ಇನ್ನು ಬೆಟ್ಟೆ ಅಡಿಕೆಯು ಗರಿಷ್ಠ 37,737 ರೂಪಾಯಿ ವಹಿವಾಟು ನಡೆಸಿದೆ.












Click it and Unblock the Notifications