ದಾವಣಗೆರೆ; ಚನ್ನಗಿರಿ ನವೋದಯ ಶಾಲೆ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್
ದಾವಣಗೆರೆ, ಡಿಸೆಂಬರ್ 12; ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವೋದಯ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಗಂಟಲು ಮಾದರಿ ಪಡೆಯಲಾಗಿದ್ದು, ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಜಿಲ್ಲೆಯ ಶಾಲಾ, ಕಾಲೇಜು, ನರ್ಸಿಂಗ್, ಅರೆ ವೈದ್ಯಕೀಯ ಸೇರಿದಂತೆ ಇತರೆ ಕೋರ್ಸ್ ಗಳಲ್ಲಿ ಅಭ್ಯಾಸ ಮಾಡುತ್ತಿರುವ 4882 ಮಂದಿಯ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 3667 ಮಂದಿಯ ವರದಿ ನೆಗೆಟಿವ್ ಬಂದಿದೆ. ಇಂದು 544 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ನಾಲ್ವರು ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಖಚಿತವಾಗಿದೆ. ಇನ್ನು 1215 ಜನರ ಪರೀಕ್ಷಾ ವರದಿ ಬರಬೇಕಿದೆ.
ವಿದೇಶದಿಂದ ಇಲ್ಲಿಯವರೆಗೆ ಜಿಲ್ಲೆಗೆ 73 ಜನರು ಆಗಮಿಸಿದ್ದಾರೆ. ಅಪಾಯದ ಅಂಚಿನ ದೇಶಗಳಿಂದ ಬಂದವರು 29 ಮಂದಿ. ಎಲ್ಲರ ಗಂಟಲು ಮಾದರಿ ಪರೀಕ್ಷೆ ಮಾಡಲಾಗಿದ್ದು ಎಲ್ಲಾ ನೆಗೆಟಿವ್ ಬಂದಿದೆ. ಈ ದಿನದವರೆಗೆ 16 ಜನರು ಕ್ವಾರಂಟೈನ್ ಮುಗಿಸಿದ್ದರೆ, 13 ಜನರು ಕ್ವಾರಂಟೈನ್‌ನಲ್ಲಿ ಇದ್ದಾರೆ.

ಭಾನುವಾರವಾದ ಕಾರಣ ಇಂದು ಶಾಲೆಗೆ ರಜೆ ಇದೆ. ಸೋಮವಾರದ ಹೊತ್ತಿಗೆ ಪರೀಕ್ಷಾ ವರದಿ ಕೈ ಸೇರುವ ಸಾಧ್ಯತೆ ಇದ್ದು, ಶಾಲೆಯನ್ನು ಸೀಲ್ ಡೌನ್ ಮಾಡಬೇಕೇ?, ಬೇಡವೋ? ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಶಾಲೆಯನ್ನು ಸ್ಯಾನಿಟೈಸ್ ಮೂಲಕ ಸ್ವಚ್ಛಗೊಳಿಸಲಾಗಿದೆ. ಸೋಂಕಿತ ವಿದ್ಯಾರ್ಥಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇಡಲಾಗಿದೆ. ವಿದ್ಯಾರ್ಥಿಗಳ ಟ್ರಾವೆಲ್ ಹಿಸ್ಟರಿ ಇನ್ನೂ ಗೊತ್ತಾಗಿಲ್ಲ.
ಮಾರ್ಗಸೂಚಿ; ಕೋವಿಡ್ ಸೋಂಕು ತಡೆಗಟ್ಟಲು ಶಾಲಾ-ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದ್ದರು.
"ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಜಿಲ್ಲೆಯ ಸರ್ಕಾರಿ/ ಅನುದಾನಿತ/ ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು, ತಪ್ಪಿದಲ್ಲಿ ಅಂತಹ ಶಾಲಾ-ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದರು.
ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಶಾಲಾ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ತರಗತಿಯಲ್ಲಿ ಒಂದು ಡೆಸ್ಕಿಗೆ ಇಬ್ಬರು ವಿದ್ಯಾರ್ಥಿಗಳನ್ನು ಕೂಡಿಸುವುದು. ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಿ ಆಯಾ ತರಗತಿಯ ಕೋಣೆಯಲ್ಲಿಯೇ ಪ್ರಾರ್ಥನೆಯನ್ನು ನಡೆಸಬೇಕಿದೆ.
ಶಾಲಾ ಶಿಕ್ಷಕರು/ ಸಿಬ್ಬಂದಿ ಮತ್ತು ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯ. ಪ್ರತಿದಿನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನ್ನಿಂಗ್‌ಗೆ ಒಳಪಡಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕು.
ಪ್ರತಿ ಭಾನುವಾರ ತರಗತಿಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸುವುದು. ಶಿಕ್ಷಕರು ಮತ್ತು ಸಿಬ್ಬಂದಿಯವರು ಹಾಗೂ ಮಕ್ಕಳ ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯಬೇಕು. ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹಬ್ಬಗಳು ಮತ್ತು ಸಮಾರಂಭಗಳನ್ನು ಮುಂದಿನ ಆದೇಶದವರೆಗೂ ನಿಷೇಧಿಸಲಾಗಿದೆ.
ಅನಗತ್ಯವಾಗಿ ಶಾಲಾ-ಕಾಲೇಜುಗಳಿಗೆ ಪೋಷಕರು/ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವುದು. ಈ ಸೂಚನೆಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಲು ಶಾಲಾ-ಕಾಲೇಜುಗಳು ಹಾಗೂ ವಸತಿ ನಿಲಯಗಳ ಮುಖಸ್ಥರಿಗೆ ಸರ್ಕಾರ ಸೂಚನೆ ನೀಡಿತ್ತು.
ಕೋವಿಡ್ ಪರೀಕ್ಷೆ ಕಡ್ಡಾಯ; ದಾವಣಗೆರೆ ಜಿಲ್ಲಾಡಳಿತ ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಪ್ರತಿಯೊಂದು ಹಾಸ್ಟೆಲ್, ಖಾಸಗಿ ವಸತಿಯುತ ಶಾಲೆಗಳಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು, ಅಡುಗೆಯವರು. ನರ್ಸಿಂಗ್, ಪ್ಯಾರಾ ಮೆಡಿಕಲ್, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಅಂಗನವಾಡಿ ಸಹಾಯಕಿ ಮತ್ತು ಮೇಲ್ವಿಚಾರಕರು ಎಲ್ಲರೂ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಬೇಕು ಎಂದು ಸೂಚನೆ ನೀಡಿತ್ತು.
ಆರೋಗ್ಯ ಇಲಾಖೆಯು ಡ್ರೈವರ್, ಕಂಡೆಕ್ಟರ್, ಹೋಟೆಲ್, ರೆಸ್ಟೋರೆಂಟ್, ಹೆಚ್ಚು ಜನಸಂದಣಿ ಇರುವೆಡೆ ಕೆಲಸ ಮಾಡುವ ಹಮಾಲಿಗಳು ಮುಂತಾದವರಿಗೂ ಪರೀಕ್ಷೆ ಮಾಡಬೇಕು. ಜಿಲ್ಲೆಯ ಎಲ್ಲ ತಾಲ್ಲೂಕು ಮಟ್ಟದಲ್ಲೂ ಕೂಡ ಪರೀಕ್ಷೆ ನಡೆಯಬೇಕು ಎಂದು ಸೂಚನೆ ನೀಡಿತ್ತು.
ಜಿಲ್ಲೆಯ ಎಲ್ಲ ಖಾಸಗಿ ವಸತಿಯುತ ಶಾಲೆಗಳಿಗೆ ಕೂಡಲೆ ಭೇಟಿ ನೀಡಿ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರು, ಸಿಬ್ಬಂದಿಗಳ ಆರೋಗ್ಯ ವಿವರವನ್ನು ಖುದ್ದು ಸಂಗ್ರಹಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ಡಿಡಿಪಿಐಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು.












Click it and Unblock the Notifications