Wayanad landslide: ರಕ್ಷಣಾ ಕಾರ್ಯದಲ್ಲಿ ತೊಡಗಿ ಕನ್ನಡಿಗರ ಮನ ಗೆದ್ದ ಹಿರಿಯೂರಿನ ಸೊಸೆ-ಮಾಹಿತಿ ಇಲ್ಲಿದೆ
ಹಿರಿಯೂರು, ಆಗಸ್ಟ್, 06: ದೇವರ ನಾಡು ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ರಾಜ್ಯದ ಬಹುತೇಕ ಮಂದಿ ಅಸುನೀಗಿದ ಘಟನೆ ನಡೆದಿದೆ. ಹಾಗೆಯೇ ಪರಿಹಾರ ಕಾರ್ಯವು ಕೂಡ ನಡೆಯುತ್ತಿದ್ದು, ಇನ್ನು ಈ ಭೀಕರ ಭೂ ಕುಸಿತ ದುರಂತದ ಪರಿಹಾರ ಕಾರ್ಯದಲ್ಲಿ ತೊಡಗಿದವರಲ್ಲಿ ವಯನಾಡಿನ ಜಿಲ್ಲಾಧಿಕಾರಿ ಮೇಘಶ್ರೀಯವರೂ ಒಬ್ಬರು.
ಹಗಲು ಇರುಳೆನ್ನದೆ, ಪರಿಹಾರ ಕಾರ್ಯದಲ್ಲಿ ತೊಡಗಿರುವ ಜಿಲ್ಲಾಧಿಕಾರಿ ಮೇಘಶ್ರೀಯವರು ಕನ್ನಡಿಗರು ಮತ್ತು ಚಿತ್ರದುರ್ಗ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಷಯವಾಗಿದೆ.

ಸರಣಿ ಭೂಕುಸಿತ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ನೂರಾರು ಮಂದಿ ಮಣ್ಣಿನಡಿ ಸಿಲುಕಿ ಪ್ರಾಣ ಬಿಟ್ಟಂತಹ ದುರ್ಘಟನೆ ನಡೆದಿದೆ. ಇನ್ನು ಮಣ್ಣಿನಲ್ಲಿ ಸಿಲುಕಿದ ಹಲವು ಜನರ ರಕ್ಷಣಾ ಕಾರ್ಯಾಚರಣೆಗೆಂದು ಘಟನೆ ನಡೆದ ನಡು ರಾತ್ರಿಯಲ್ಲಿಯೇ ಜಿಲ್ಲಾಧಿಕಾರಿ ಮೇಘಶ್ರೀ ಧಾವಿಸಿ ಪರಿಹಾರ ಕಾರ್ಯದಲ್ಲಿ ತೊಡಗಿರುವುದು ಕನ್ನಡಿಗರಿಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಎಸ್‌ಬಿಐ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ರುದ್ರಮುನಿ ಮತ್ತು ದಿ.ರುಕ್ಮಿಣಿದೇವಿಯವರ ಪುತ್ರಿಯಾದ ಮೇಘಶ್ರೀಯವರು ಇಂಜಿನಿಯರಿಂಗ್ ಪಧವೀಧರೆ. ಆರಂಭದ ವಿದ್ಯಾಭ್ಯಾಸವನ್ನು ದೊಡ್ಡೇರಿ, ಚಳ್ಳಕೆರೆ, ಚಿತ್ರದುರ್ಗದಲ್ಲಿ ಮುಗಿಸಿ, ಉನ್ನತ ವ್ಯಾಸಂಗವನ್ನು ಬೆಂಗಳೂರಿನಲ್ಲಿ ಮುಗಿಸುತ್ತಾರೆ. ನಂತರ ಒಂದೆರಡು ವರ್ಷ ಖಾಸಗಿ ಉದ್ಯೋಗ ಮಾಡಿ ನಂತರ ಐಎಎಸ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.
ಪ್ರಾರಂಭದಲ್ಲಿ ತಿರುವನಂತಪುರ ಮುಂತಾದ ಕಡೆ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ ಈಗ್ಗೆ 20 ದಿನಗಳ ಹಿಂದೆ ವಯನಾಡಿಗೆ ಜಿಲ್ಲಾಧಿಕಾರಿಯಾಗಿ ನಿಯುಕ್ತಿಯಾಗುತ್ತಾರೆ. ಸೇವೆಗೆ ಹಾಜರಾದ ಆರಂಭದಲ್ಲೇ ದೊಡ್ಡ ದುರ್ಘಟನೆಯ ಪರಿಹಾರ ಕಾರ್ಯದ ಜವಾಬ್ದಾರಿ ಹೊತ್ತಿರುವ ಮೇಘಶ್ರೀಯವರು ಪ್ರತಿ ನಿಮಿಷವನ್ನು ಭೂ ಕುಸಿತದಡಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಈಗಾಗಲೇ ಭೂ ಕುಸಿತಕ್ಕೆ ಬಲಿಯಾದ ದುರ್ದೈವಿಗಳ ಸಾಮೂಹಿಕ ಅಂತ್ಯ ಸಂಸ್ಕಾರದಲ್ಲೂ ನಿಂತು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಮೇಘಶ್ರೀಯವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸೊಸೆ ಎಂಬುದು ಮತ್ತೊಂದು ವಿಶೇಷತೆಯಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದ ಚೀಫ್ ಸೂಪರಿಂಟೆಡೆಂಟ್ ಆಗಿ ನಿವೃತ್ತರಾಗಿರುವ ತಾಲೂಕಿನ ಹರ್ತಿಕೋಟೆ ಗ್ರಾಮದ ವೀರೇಂದ್ರ ಸಿಂಹರ ಮಗ ಡಾ.ವಿಕ್ರಮಸಿಂಹರ ಪತ್ನಿ ಆಗಿದ್ದಾರೆ. ಇವರಿಗೆ ಧೃತಿ ಮತ್ತು ವಿಸ್ಮಯ ಎಂಬ ಇಬ್ಬರು ಮಕ್ಕಳಿದ್ದಾರೆ.
ಘಟನೆಯ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಮೇಘಶ್ರೀಯವರು ಜುಲೈ 10ರಂದು ವಯನಾಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಕ್ಷಣಾ ಕಾರ್ಯ, ಶವಗಳ ಗುರುತು ಪತ್ತೆ, ಸತ್ತವರ ಅಂತ್ಯ ಸಂಸ್ಕಾರ, ಉಳಿದವರಿಗೆ ಪುನರ್ವಸತಿಯಂತಹ ಹತ್ತಾರು ಕಾರ್ಯಗಳಲ್ಲಿ ತೊಡಗಿರುವ ಡಿಸಿ ಮೇಘಶ್ರೀಯವರಿಗೆ ಅಭಿನಂದನೆಗಳ ಸರಮಾಲೆಯೇ ಹರಿದುಬರುತ್ತಿದೆ.
ಜಿಲ್ಲಾಧಿಕಾರಿ ಮೇಘಶ್ರೀಯವರ ಮಾವ ಪರಪ್ಪನ ಅಗ್ರಹಾರ ಕಾರಾಗೃಹದ ನಿವೃತ್ತ ಚೀಫ್ ಸೂಪರಿಂಟೆಡೆಂಟ್ ಹರ್ತಿಕೋಟೆ ವೀರೇಂದ್ರ ಸಿಂಹ ಮಾತನಾಡಿ, ಜಿಲ್ಲಾಧಿಕಾರಿ ಮೇಘಶ್ರೀ ಕಾರ್ಯವೈಖರಿ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅಲ್ಲಿನ ಟಿವಿಗಳು ದೇವರ ನಾಡಿನ ದೇವತೆಗಳು ಮಿಲಿಟರಿ ಕಮಾಂಡರ್, ಮಹಿಳಾ ಸಚಿವೆ ಮತ್ತು ಮೇಘಶ್ರೀಯವರನ್ನು ದೇವರ ನಾಡಿನ ದೇವತೆಗಳು ಎಂದು ತೋರಿಸುತ್ತಿವೆ.
ಕೇರಳದ ಜನರೂ ಸಹ ಅವರ ಕಾರ್ಯವನ್ನು ಮೆಚ್ಚಿದ್ದು, ಆರಂಭದಲ್ಲಿ ಆತಂಕದಲ್ಲಿದ್ದೆವು. ಇದೀಗ ಸೊಸೆಯ ಮೇಲೆ ಅಭಿಮಾನ ಮೂಡುತ್ತಿದೆ. ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿರುವ ಮೇಘಶ್ರೀಯವರ ಸೇವೆ ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.












Click it and Unblock the Notifications