ಚಿತ್ರದುರ್ಗದಲ್ಲಿ ಹಲವು ವರ್ಷಗಳ ನಂತರ ಹರಿದ "ವೇದಾವತಿ"; 90 ಅಡಿ ಮುಟ್ಟಿದ ವಿವಿ ಸಾಗರ
ಚಿತ್ರದುರ್ಗ, ಅಕ್ಟೋಬರ್ 23: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಬರದಿಂದ ನಲುಗಿಹೋಗಿತ್ತು. ಇದೀಗ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದೆ. ಐದು ವರ್ಷಗಳ ನಂತರ ಹಿರಿಯೂರು ಹೃದಯ ಭಾಗದಲ್ಲಿರುವ ವೇದಾವತಿ ನದಿಗೆ ನೀರು ಬಂದಿದೆ.
ಪಶ್ಚಿಮ ಘಟ್ಟಗಳಲ್ಲಿ ಉಗಮಿಸಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹರಿಯುವ ವೇದಾವತಿ ನದಿಯು ತುಂಗಭದ್ರಾ ನದಿಯೊಂದಿಗೆ ಸೇರುತ್ತದೆ. ಇದೀಗ ಮಳೆಯಿಂದಾಗಿ ವೇದಾವತಿ ನದಿ ಉಕ್ಕಿ ಹರಿಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿ ಹುಟ್ಟುವ 'ವೇದಾ' ನದಿಗೆ ಕಡೂರು ಬಳಿಯ ಮದಗದಕೆರೆಯಿಂದ ಹರಿದು ಬರುವ 'ಆವತಿ ಹಳ್ಳ'ವು ಸಂಗಮಿಸುವುದರೊಂದಿಗೆ 'ವೇದಾವತಿ ನದಿ'ಯಾಗಿ ಹರಿದು ಮುಂದೆ ಸಾಗುತ್ತದೆ. ಈ ವೇದಾವತಿ ನದಿಗೆ ಅಡ್ಡಲಾಗಿ ಹಿರಿಯೂರು ಬಳಿಯ ಮಾರಿಕಣಿವೆ ಎಂಬಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು 'ವಾಣಿ ವಿಲಾಸ ಸಾಗರ' ಅಣೆಕಟ್ಟೆಯನ್ನು ಕಟ್ಟಿದರು. ಅಲ್ಲಿಂದ ಮುಂದೆ ಹರಿದು ಕೂಡ್ಲಹಳ್ಳಿ ಸಂಗಮೇಶ್ವರ ಬಳಿ ಸುವರ್ಣಮುಖಿ ನದಿಯೊಂದಿಗೆ ವಿಲೀನಗೊಂಡು ನಂತರ ವೇದಾವತಿ ಮತ್ತು ಸುವರ್ಣಮುಖಿ ನದಿಗಳು ಕೂಡಿ, ಕೂಡಲಸಂಗಮ ಮೂಲಕ ದೆವರಕೊಟ್ಟ, ಶಿಡ್ಲಯ್ಯನಕೋಟೆ, ಚಳ್ಳಕೆರೆ ತಾಲೂಕಿನ ಬೆಳಗೆರೆ, ನಾರಾಯಣಪುರ ಡ್ಯಾಂ ಮುಖಾಂತರ ಆಂಧ್ರಪ್ರದೇಶದ ಬಳಿ 'ಹಗರಿ ನದಿ'ಯಾಗಿ ಹರಿದು ಮುಂದೆ ತುಂಗಭದ್ರಾ ನದಿಯಲ್ಲಿ ವಿಲೀನವಾಗುತ್ತದೆ.

ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಿರಿಯೂರಿನ ವಾಣಿವಿಲಾಸ ಜಲಾಶಯಕ್ಕೆ ನಿನ್ನೆ ಹದಿನೈದು ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದ್ದರಿಂದ ಪ್ರಸ್ತುತ ವಿವಿ ಸಾಗರದ ಜಲಾಶಯದ ನೀರಿನ ಮಟ್ಟ 90 ಅಡಿ ದಾಟುತ್ತಿದೆ. ಇದೇ ರೀತಿ ಮಳೆ ಆದರೆ ವಾಣಿ ವಿಲಾಸ ಜಲಾಶಯ ಶತಕ ಪೂರೈಸುವುದು ಶತಸಿದ್ಧ. ಜಲಾಶಯದ ಗರಿಷ್ಠ ಮಟ್ಟ 135 ಅಡಿ ಇದೆ. ವೇದಾವತಿ ನದಿ ಹರಿದಿರುವುದು ಜಿಲ್ಲೆಯ ತೋಟಗಳಲ್ಲಿ ಜೀವ ಕಳೆ ಕಾಣುತ್ತಿದೆ.












Click it and Unblock the Notifications