Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಎಷ್ಟಿದೆ.?-ಆಗಸ್ಟ್ 23ರ ಅಂಕಿಅಂಶಗಳು ಹೀಗಿವೆ
Vani Vilasa Sagara Dam: ಈ ಬಾರಿ ಮುಂಗಾರು ಮಳೆ ಅಬ್ಬರಿಸಿ ಬೊಬ್ಬೆರೆದ ಹಿನ್ನೆಲೆ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಈಗಾಗಲೇ ಕೆಲವು ಜಲಾಶಯಗಳಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಲಾಗಿದೆ. ಇತ್ತ ಚಿತ್ರದುರ್ಗ ಜಿಲ್ಲೆಯ ಏಕೈಕ ರೈತರ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ನಿಧಾನವಾಗಿ 120 ಅಡಿ ಮುಟ್ಟುಹ ಹಂತ ತಲುಪಿದೆ.
ಇಂದಿನ ವರದಿಯಲ್ಲಿ ವಾಣಿ ವಿಲಾಸ ಜಲಾಶಯಕ್ಕೆ 2,195 ಕ್ಯೂಸೆಕ್ ಒಳಹರಿವು ನೀರು ಹರಿದುಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 117.70 ಅಡಿ ತಲುಪಿದೆ. ಡ್ಯಾಂನಿಂದ ಯಾವುದೇ ಹೊರಹರಿವು ಇಲ್ಲ. ಮತ್ತೊಂದು ಕಡೆ ಭದ್ರಾ ಜಲಾಶಯದಿಂದ ಕಾಲುವೆ ಮೂಲಕ ಸುಮಾರು ಪ್ರತಿದಿನ 700 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಡ್ಯಾಂ 120 ಅಡಿಯತ್ತ ತಲುಪಲಿದೆ.

ಮತ್ತೊಂದು ಕಡೆ ಎತ್ತಿನಹೊಳೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಯಶಸ್ವಿಯಾಗಿದೆ. ಎತ್ತಿನಹೊಳೆ, ಭದ್ರಾ ನೀರಿನ ಜೊತೆಗೆ ಹೆಚ್ಚು ಮಳೆ ನೀರು ಬಂದರೆ ಪ್ರಸಕ್ತ ಸಾಲಿನಲ್ಲಿ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. 135 ಅಡಿ ಎತ್ತರ ಇರುವ ಡ್ಯಾಂ ಒಟ್ಟು 30 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ.
89 ವರ್ಷಗಳ ಬಳಿಕ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದು ನಿರ್ಮಿಸಿತ್ತು. ಸುಮಾರು ಒಂದು ತಿಂಗಳ ಕಾಲ ವೇದಾವತಿ ನದಿ ಹರಿದಿತ್ತು. ಇದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿತ್ತು. 2023ರಲ್ಲಿ ಡ್ಯಾಂಗೆ ಯಾವುದೇ ಹೇಳಿಕೊಳ್ಳುವಂತಹ ನೀರು ಹರಿದು ಬಂದಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
ಇದೇ ರೀತಿ ಇನ್ನೂ ಒಂದೆರಡು ತಿಂಗಳಲ್ಲಿ ಹೆಚ್ಚು ಮಳೆ ಬಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದರೆ, ಜಲಾಶಯ ಈ ಬಾರಿ ಕೋಡಿ ಬೀಳುವ ಸಾಧ್ಯತೆ ಇರುತ್ತದೆ. ಸುಮಾರು 12 ಅಡಿ ನೀರು ಜಲಾಶಯಕ್ಕೆ ಹರಿದು ಬಂದರೇ ಜಲಾಶಯದ ಕೋಡಿ ಬೀಳುವುದು ಬಹುತೇಕ ನಿಶ್ಚಿತವಾಗಿದೆ.
1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರು ಪ್ರದೇಶದ ಅಚ್ಚುಕಟ್ಟುದಾರರಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದ ವೇದಾವತಿ ನದಿಗೆ ಅಡ್ಡಲಾಗಿ ಮಾರಿ ಕಣಿವೆ ಬಳಿ ವಿವಿ ಸಾಗರ ಜಲಾಶಯವನ್ನು ನಿರ್ಮಾಣ ಮಾಡಿದರು. ಈ ಜಲಾಶಯ ನಿರ್ಮಾಣವಾಗಿ ಸುಮಾರು 118 ವರ್ಷ ಕಳೆದಿದೆ. ಇದು ಹಿರಿಯೂರು, ಚಿತ್ರದುರ್ಗ, ಚಳ್ಳೆಕೆರೆ ಸೇರಿದಂತೆ ಡಿಆರ್‌ಡಿಓಗೆ ಕುಡಿಯುವ ನೀರಿನ ಮೂಲವಾಗಿದೆ.












Click it and Unblock the Notifications