Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಹೆಚ್ಚಳ-ಅಂಕಿಅಂಶಗಳು ಇಲ್ಲಿವೆ
Vani Vilasa Sagara Dam: ಮಧ್ಯ ಕರ್ನಾಟಕದ ಬಯಲು ಸೀಮೆಯ ಏಕೈಕ ರೈತರ ಜೀವನಾಡಿ ಆಗಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭಾರೀ ಮಳೆಯಿಂದ ಇತ್ತೀಚಿಗಷ್ಟೇ 1.79 ಅಡಿ ನೀರು ಹರಿದುಬಂದಿದೆ. ಹಾಗಾದರೆ ಇದೀಗ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಾಹಿತಿಯ ಪ್ರಕಾರ, ವಾಣಿ ವಿಲಾಸ ಸಾಗರ ಜಲಾಶಯಕ್ಕೆ 2,195 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 115.20 ಅಡಿ ಇದೆ. ಜುಲೈ 29ರಂದು 113.50 (16.07 ಟಿಎಂಸಿ) ರಿಂದ 8/08/2024ಕ್ಕೆ ಅಂದರೆ ಇಂದಿಗೆ 115.20 ಅಡಿ (17.14ಟಿಎಂಸಿ) ನೀರು ಸಂಗ್ರಹವಾಗಿದೆ.

ಜಲಾಶಯಕ್ಕೆ ಒಳಹರಿವು ಇದೀಗ ಆರಂಭ ಆಗಿದ್ದು, ಇಂದಿನ ದಿನದವರೆಗೂ ನೀರು ಹರಿದು ಬರುತ್ತಿದೆ. ಅಷ್ಟೇ ಅಲ್ಲದೆ ಜೊತೆಗೆ ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರ ಡ್ಯಾಂಗೆ ಪ್ರತಿದಿನ 700 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ನೀರಿನ ಮಟ್ಟ ಹೆಚ್ಚಳ ಆಗುತ್ತಿದೆ.
ದಿನಾಂಕ 29/07/2024ರಂದು 974 ಕ್ಯೂಸೆಕ್ ಒಳಹರಿವು, 30/07/2024ರಂದು 4737 ಕ್ಯೂಸೆಕ್, 31/07/2024ರಂದು 1,301, 1/08/2024ರಂದು 693, 2/08/2024ರಂದು 728, 3/08/2024ರಂದು 808, ಜುಲೈ 4, 5, 6ರಂದು 346, 7/08/2024ರಂದು 1,039, 8/08/2024ರಂದು 2,195 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ.
2,000ನೇ ಇಸವಿಯಲ್ಲಿ 122.50 ಅಡಿ ತುಂಬುವ ಮೂಲಕ ಡ್ಯಾಂ ದಾಖಲೆ ಬರೆದಿತ್ತು. ಬಳಿಕ 2021ರ ನವೆಂಬರ್‌ನಲ್ಲಿ 122.75 ಅಡಿಗೆ ಡ್ಯಾಂ ನೀರಿನ ಮಟ್ಟ ತಲುಪುವ ಮೂಲಕ ಮತ್ತೊಮ್ಮೆ ಹೊಸ ದಾಖಲೆ ನಿರ್ಮಿಸಿತ್ತು. 1958ರಲ್ಲಿ ಡ್ಯಾಂ ನೀರಿನ ಮಟ್ಟ 124.25 ಅಡಿ ದಾಟಿತ್ತು. 1935ರಲ್ಲಿ 135.25 ಅಡಿ ನೀರು ಹರಿದು ಬಂದಿದ್ದರಿಂದ ಮೊದಲ ಬಾರಿಗೆ ಜಲಾಶಯದಲ್ಲಿ ಕೋಡಿ ಬಿದ್ದು ನೀರು ಹರಿದಿತ್ತು.
ಬಳಿಕ 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿತ್ತು. 1957ರಲ್ಲಿ 125.05 ಅಡಿ ಮಾತ್ರ ನೀರು ಸಂಗ್ರಹ ಆಗಿತ್ತು. 2000ರಲ್ಲಿ 122.50 ಅಡಿಗೆ ಮಾತ್ರ ನೀರಿನ ಮಟ್ಟ ತಲುಪಿತ್ತು. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗಿ ನೀರು ಜಲಾಶಯಕ್ಕೆ ಹರಿದು ಬಂದರೆ, 2022ರ ಬಳಿಕ ಮತ್ತೆ ಡ್ಯಾಂ ದಾಖಲೆ ಬರೆದಿತ್ತು.
ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಭಾಗದಲ್ಲಿ 800ರಿಂದ 1,000 ಅಡಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಆದರೆ ವಾಣಿ ವಿಲಾಸ ಜಲಾಶಯದಲ್ಲಿ ನೀರು ಸಂಗ್ರಹ ಆಗುತ್ತಿದ್ದಂತೆ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ. ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 50ರಿಂದ 200 ಅಡಿಗೆ ನೀರು ಸಿಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ, ಚಟುವಟಿಕೆಗಳು ಸಂಭ್ರಮದಿಂದ ಗರಿಗೆದರಿದ್ದು, ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.











Click it and Unblock the Notifications