Vani vilasa Sagara Dam: ವಾಣಿ ವಿಲಾಸ ಸಾಗರ ಡ್ಯಾನಿಂದ ಕುಡಿಯುವ ನೀರು ಕೊಡದಿದ್ರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಹಿರಿಯೂರು, ಮಾರ್ಚ್, 22: ತಾಲೂಕಿನ ವಾಣಿ ವಿಲಾಸ ಜಲಾಶಯದಿಂದ ಭರಮಗಿರಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಕೊಡದಿದ್ದರೆ, ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಪ್ರತಿಭಟನೆ ನಡೆಸಿ ಮಾತನಾಡಿದ ಗ್ರಾಮಸ್ಥರು, ವಾಣಿವಿಲಾಸ ಜಲಾಶಯದಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮದಲ್ಲಿ ಕೆರೆ ಇದ್ದು, ಇದೀಗ ನೀರಿಲ್ಲದೆ ಕೆರೆ ಬತ್ತಿ ಹೋಗಿದೆ. ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸಾವಿರಾರು ಅಡಿಗಳಷ್ಟು ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆಳಲು ತೊಡಿಕೊಂಡಿದ್ದಾರೆ. ರೈತರು ತೋಟವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಆತ್ಯಹತ್ಯೆ ದಾರಿ ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ವಾಣಿವಿಲಾಸಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಭರಮಗಿರಿ, ಬಳಘಟ್ಟ, ತಳವಾರಟ್ಟಿ, ಅಗಳೇರಹಟ್ಟಿ, ಕಕ್ಕಯ್ಯನಹಟ್ಟಿ , ಕುಂಟಪ್ಪನಹಟ್ಟಿ ಈ ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತುಂಬಾ ಸಮಸ್ಯೆ ಉಂಟಾಗಿದೆ. ನಮ್ಮೂರಿನಿಂದ ಮೂರು ಕಿಲೋ ಮೀಟರ್ ಸಮೀಪದಲ್ಲಿರುವ ವಾಣಿ ವಿಲಾಸ ಜಲಾಶಯದಿಂದ ಭರಮಗಿರಿ ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೂರಾರು ಕಿಲೋ ಮೀಟರ್ ದೂರದವರೆಗೆ ನೀರು ಕೊಡಲು ಆಗುತ್ತದೆ. ಆದರೆ ಡ್ಯಾಂ ಬುಡದಲ್ಲಿರುವ ಹಳ್ಳಿಗಳಿಗೆ ನೀರು ಕೊಡಲು ಏಕೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಒಂದು ವೇಳೆ ಸಚಿವರು ಗ್ರಾಮಸ್ಥರ ಮನವಿಗೆ ಸ್ಪಂದಿಸಿದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications