ಕೇಂದ್ರ ಬಜೆಟ್; ಚಿತ್ರದುರ್ಗ ಜಿಲ್ಲೆ ಜನತೆಯ ನಿರೀಕ್ಷೆಗಳೇನು?
ಚಿತ್ರದುರ್ಗ, ಜನವರಿ 31: ಮಹಾಮಾರಿ ಕೊರೊನಾ ಮೂರನೇ ಅಲೆ ನಡುವೆಯೂ ಈ ಬಾರಿ ಕೇಂದ್ರ ಬಜೆಟ್ ಅಧಿವೇಶನ ಆರಂಭಗೊಂಡಿದೆ. ದೇಶದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ತಮ್ಮ 4ನೇ ಬಜೆಟ್ ಮಂಡಿಸಲು ಸಿದ್ಧಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಯವ್ಯಯದ ಮೇಲೆ ಚಿತ್ರದುರ್ಗ ಜಿಲ್ಲೆಯ ಜನತೆ ಭರವಸೆಯನ್ನಿಟ್ಟಿದ್ದಾರೆ. ಜಿಲ್ಲೆಗೆ ಈ ಬಾರಿ ಬಜೆಟ್‌ನಲ್ಲಿ ಏನಾದರೂ ಘೋಷಣೆ ಮಾಡಲಾಗುತ್ತದೆ ಎಂಬ ಆಸೆ ಜನರಲ್ಲಿ ಮೂಡಿದ್ದು, ಎಲ್ಲರ ಚಿತ್ತ ಕೇಂದ್ರ ಬಜೆಟ್‌ನತ್ತ ಮೂಡಿದೆ.
ಪ್ರಮುಖವಾಗಿ ಚಿತ್ರದುರ್ಗ ಜಿಲ್ಲೆಯ ಸಂಸದರೊಬ್ಬರು ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಕಳೆದ ವರ್ಷ ಜಿಲ್ಲೆಗೆ ಹೇಳಿಕೊಳ್ಳುವಂತಹ ಯೋಜನೆ ಘೋಷಣೆ ಆಗಿರಲಿಲ್ಲ. ಈ ಬಾರಿ ಜಿಲ್ಲೆಯ ಸಂಸದರೊಬ್ಬರು ಕೇಂದ್ರದಲ್ಲಿ ಸಚಿವರಾಗಿದ್ದರಿಂದ ಜಿಲ್ಲೆಗೆ ಏನಾದರೂ ಸಿಗಬಹುದೇ ಎಂದು ಜನರಲ್ಲಿ ಬಜೆಟ್ ಉತ್ಸಾಹ ಮೂಡಿಸಿದ್ದು, ಪ್ರತಿ ವರ್ಷದಂತೆ ಜಿಲ್ಲೆಯ ಜನತೆ ಹಾಗೂ ತೆರಿಗೆದಾರರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.

ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕ ಮಧ್ಯೆ ಬರುವ ಬಯಲು ಸೀಮೆಯ ಚಿತ್ರದುರ್ಗ ಸಾಕಷ್ಟು ಅಭಿವೃದ್ಧಿ ಹೊಂದಬೇಕಿದೆ. ಪುಣೆ, ಬೀದರ್, ಶ್ರೀರಂಗಪಟ್ಟಣ ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿದ ಜಿಲ್ಲೆಯಾಗಿದೆ. ಈ ಭಾಗದ ರೈತಾಪಿ ವರ್ಗ ಬಹುತೇಕ ಕೃಷಿಯನ್ನು ಅವಲಂಬಿಸಿದ್ದಾರೆ. ಹೆಚ್ಚಿನ ಅನುದಾನ ನೀಡಬೇಕು ಎಂದು ಮಾತುಗಳು ಕೇಳಿಬರುತ್ತಿವೆ.
ಚಿತ್ರದುರ್ಗ-ತುಮಕೂರು ನೇರ ರೈಲ್ವೆ
ಸುಮಾರು 30-40 ವರ್ಷಗಳಿಂದ ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಹೋರಾಟ ನಡೆಯುತ್ತಿದೆ. ಚಿತ್ರದುರ್ಗದಿಂದ ಬೆಂಗಳೂರು ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಜನರು ಬೆಂಗಳೂರಿಗೆ ಹೋಗಲು, ಬರಲು ಬಹುತೇಕ ಪ್ರಯಾಣಿಕರು ಬಸ್‌ಗಳನ್ನೆ ಅವಲಂಬಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಡ ಕೂಲಿ ಕಾರ್ಮಿಕರು, ನಿರುದ್ಯೋಗಿಗಳು, ಬುಡಕಟ್ಟು ಸಮುದಾಯಗಳು ಹೆಚ್ಚು ವಾಸವಾಗಿದ್ದಾರೆ. ಹಾಗಾಗಿ ಬೆಂಗಳೂರಿಗೆ ಹೋಗಿ ಬರುವುದಕ್ಕೆ ಹೆಚ್ಚಿನ ಸಮಯ ಹಾಗೂ ಅಧಿಕ ಬಸ್ ದರ ಎಂಬ ಮಾತುಗಳಿವೆ. ಈ ಹಿನ್ನೆಲೆಯಲ್ಲಿ ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಮಾರ್ಗವನ್ನು ಕಲ್ಪಿಸಿದರೆ ಒಳ್ಳೆಯದು. ಬಡವರಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲೆಯ ಜನರ ಮೊದಲ ಬೇಡಿಕೆಯಾಗಿದೆ.
ಜಿಲ್ಲೆಗೆ ಬೇಕಿದೆ ಮೆಡಿಕಲ್ ಕಾಲೇಜು
ಚಿತ್ರದುರ್ಗ ಜಿಲ್ಲೆಯಲ್ಲಿ ಬಡ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿದ್ದು, ವಿದ್ಯಾಭ್ಯಾಸ ಮಾಡಲು ಮೆಡಿಕಲ್ ಕಾಲೇಜಿನ ಅವಶ್ಯಕತೆ ತುಂಬಾನೇ ಇದೆ. ಈ ಹಿಂದೆ ರಾಜ್ಯ ಸರ್ಕಾರ ಜಿಲ್ಲೆಗೆ ಮೆಡಿಕಲ್ ಘೋಷಣೆ ಮಾಡಲಾಗಿತ್ತು. ಆದರೆ ಅದನ್ನು ಖಾಸಗಿ ಒಡೆತನಕ್ಕೆ ಒಳಪಡಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದನ್ನು ಜಿಲ್ಲೆಯ ಜನತೆ ವಿರೋಧಿಸಿದ್ದರು. ನಮಗೆ ಖಾಸಗಿ ಒಡೆತನದ ಮೆಡಿಕಲ್ ಕಾಲೇಜು ಬೇಡ, ಸರ್ಕಾರಿ ಒಡೆತನದ ಮೆಡಿಕಲ್ ಕಾಲೇಜನ್ನು ಸ್ಥಾಪಿಸಿದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅನುಕೂಲವಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.

ಕೃಷಿಗೆ ಆದ್ಯತೆ ನೀಡಲಿ
ಮಧ್ಯ ಕರ್ನಾಟಕದ ಜಿಲ್ಲೆಯ ರೈತರು ಹೆಚ್ಚಾಗಿ ಈರುಳ್ಳಿ ಬೆಳೆಯುತ್ತಾರೆ. ಬೆಳೆದ ಈರುಳ್ಳಿಯನ್ನು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಕೊಂಡೊಯ್ಯುಬೇಕು. ಈರುಳ್ಳಿ ದರ ಕಡಿಮೆ ಇದ್ದಾಗ ಸಾಕಷ್ಟು ರೈತರಿಗೆ ಬಾಡಿಗೆ, ಕೂಲಿ, ಖರ್ಚು ಸೇರಿ ಮೈಮೇಲೆ ಬಂದು ನಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ನಮ್ಮ ಜಿಲ್ಲೆಯಲ್ಲಿ ಒಂದು ಈರುಳ್ಳಿ ಖರೀದಿ ಕೇಂದ್ರ ಸ್ಥಾಪನೆ ಮಾಡಿದರೆ ಒಂದಷ್ಟು ಲಾಭದ ನಿರೀಕ್ಷೆ ಇಲ್ಲದಿದ್ದರೂ, ಹಾಕಿದ ಬಂಡವಾಳವಾದರೂ ಬರುತ್ತದೆ. ಜೊತೆಗೆ ಉತ್ತರ ಕರ್ನಾಟಕದ ಗದಗ, ರಾಯಚೂರು, ಬಾಗಲಕೋಟೆ ಸೇರಿದಂತೆ ಇತರೆ ಜಿಲ್ಲೆಗಳ ರೈತರಿಗೂ ಸಹ ಅನುಕೂಲವಾಗಲಿದೆ ಎನ್ನಬಹುದು.
ಐತಿಹಾಸಿಕ ಕೋಟೆ ಅಭಿವೃದ್ಧಿಪಡಿಸಿ
ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಏಳುಸುತ್ತಿನ ಕೋಟೆಯನ್ನು ಅಭಿವೃದ್ಧಿ ಪಡಿಸಬೇಕು. ಅನೇಕ ವರ್ಷಗಳು ಆಗಿರುವುದರಿಂದ ಕೋಟೆಯ ಕೆಲವು ಭಾಗಗಳು ಶಿಥಿಲಾವಸ್ಥೆ ತಲುಪಿದ್ದು, ಪ್ರವಾಸೋದ್ಯಮದ ದೃಷ್ಟಿಯಿಂದ ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದರೆ ಪ್ರವಾಸಿಗರು ಕೋಟೆಯನ್ನು ವೀಕ್ಷಿಸಲು ಅನುಕೂಲವಾಗುತ್ತದೆ. ಇದರ ಜೊತೆಗೆ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯವನ್ನು ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಬೇಕಿದೆ.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಲಿ
ಜಿಲ್ಲೆಯ ಜನರ ಬಹು ನಿರೀಕ್ಷಿತ ಯೋಜನೆ ಎಂದರೆ ಅದು ಭದ್ರಾ ಮೇಲ್ದಂಡೆ ಯೋಜನೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಬೇಕು. ಜಿಲ್ಲೆಗೆ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ. ಈ ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ಹೆಚ್ಚಿನ ನೀರು ಹರಿಸಿ ಜಿಲ್ಲೆಯಲ್ಲಿ ಬರುವ ಎಲ್ಲಾ ತಾಲೂಕುಗಳಿಗೆ ಕುಡಿಯುವ ನೀರನ್ನು ಕಲ್ಪಿಸಬೇಕಿದೆ.
ಉದ್ಯೋಗ ಸೃಷ್ಟಿಸಿ
ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗದ ಸಮಸ್ಯೆ ಕಾಡುತ್ತಿದೆ. ಜಿಲ್ಲೆಯಲ್ಲಿ ಹೆಚ್ಚು ನಿರುದ್ಯೋಗಿಗಳಿದ್ದಾರೆ. ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಪ್ರಾರಂಭಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಂತಹ ಬಜೆಟ್ ಆಗಬೇಕು. ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಗುಡಿ ಕೈಗಾರಿಕೆಗಳಾದ ಬುಟ್ಟಿ ಹೆಣೆಯುವುದು, ಮಡಿಕೆ ಕುಡಿಕೆ ತಯಾರಿಕೆ, ಕಮ್ಮಾರಿಕೆ ಇಂತವರಿಗೆ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಇವರ ಜೊತೆಗೆ ರೈತರಿಗೆ ಕೃಷಿಗೆ ಅನುಕೂಲವಾಗುವಂತಹ ಬಜೆಟ್ ಮಂಡನೆಯಾಗಬೇಕು ಎಂದು ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಅಭಿಪ್ರಾಯಪಟ್ಟರು.
ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆಯ ಜನತೆ ಬಜೆಟ್ ಮೇಲೆ ಹತ್ತು ಹಲವಾರು ಯೋಜನೆಗಳ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಕೇಂದ್ರದಿಂದ ಜಿಲ್ಲೆಗೆ ಏನೇನು ಸೌಲಭ್ಯಗಳು ಸಿಗುತ್ತವೆ ಎಂಬುದನ್ನು ಮಂಗಳವಾರದ ಬಜೆಟ್‌ವರೆಗೆ ಕಾಯಬೇಕಿದೆ.












Click it and Unblock the Notifications