ಶ್ರೀತೇರುಮಲ್ಲೇಶ್ವರ ರಥೋತ್ಸವ: ಮಲ್ಲೇಶ್ವರನ ಮುಕ್ತಿ ಬಾವುಟ ಈ ಬಾರಿ ಎಷ್ಟು ಲಕ್ಷಕ್ಕೆ ಹರಾಜು?
ಚಿತ್ರದುರ್ಗ, ಫೆಬ್ರವರಿ 24: ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಿರಿಯೂರು ನಗರದ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ಮಧ್ಯಾಹ್ನ 1.30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.
ತಾಲೂಕಿನ ಬೀರೇನಹಳ್ಳಿ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳಿಗೆ ಚಾಲನೆ ನೀಡಿದ ನಂತರ ಬೆಳಿಗ್ಗೆ 9ಗಂಟೆಗೆ ದೇವಸ್ಥಾನದಲ್ಲಿದ್ದ ಶಿವಧನಸ್ಸನ್ನು ಹೊರತೆಗೆದು ಸಮೀಪದ ವೇದಾವತಿ ನದಿಗೆ ತೆಗೆದುಕೊಂಡು ಹೋಗಿ, ಅಭಿಷೇಕ ಮಾಡಿ ದೇವಾಲಯಕ್ಕೆ ತರಲಾಯಿತು.

ಅನಂತರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಲ್ಲಿಗೆ, ಕಾಕಡಾ, ಕನಕಾಂಬರ ಹಾಗೂ ಇನ್ನಿತರ ಹೂವುಗಳು ಸೇರಿದಂತೆ ವಿವಿಧ ರೀತೀಯ ಹೂವುಗಳು ಹಾಗೂ ಬಣ್ಣಬಣ್ಣದ ಅಂಲಕೃತವಾದ ವಿವಿಧ ಬಟ್ಟೆಗಳಿಂದ ಸಿಂಗರಿಸಿ ಅಲಂಕಾರಗೊಂಡ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿ ಮುಜರಾಯಿ ಅಕಾರಿ ಹಾಗೂ ತಹಸೀಲ್ದಾರ್ ಸಿ. ರಾಜೇಶ್ ಕುಮಾರ್ ಪೂಜೆ ಸಲ್ಲಿಸಿದರು.
ನಂತರ ಭಕ್ತರ ಸಮ್ಮುಖದಲ್ಲಿ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.
ನೂರಾರು ಭಕ್ತಾದಿಗಳು ಹರ ಹರ ಮಹಾದೇವ ಎಂದು ದೇವರನ್ನು ಸ್ಮರಿಸುತ್ತಾ ರಥದ ಹಗ್ಗವನ್ನು ಹಿಡಿದು ಎಳೆಯವ ಮೂಲಕ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡ ಬ್ರಹ್ಮ ರಥೋತ್ಸವ ಕರಡಿ ಚಮಳ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ವಾಸವಿ ರಸ್ತೆಯ ಮೂಲಕ ಸಿದ್ದನಾಯಕ ಸರ್ಕಲ್‌ವರೆಗೂ ಸಾವಿರಾರು ಭಕ್ತಾಗಳು ಉತ್ಸವದಿಂದ ರಥವನ್ನು ಎಳೆದರು.

ಬ್ರಹ್ಮರಥೋತ್ಸವ ನಂತರ ಸಂಜೆ ವೇಳೆ ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ಸ್ವಾಮಿ ರಥೋತ್ಸವ ನಡೆಯಿತು. ರಥೋತ್ಸವ ಪ್ರಯುಕ್ತ ನಗರದಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಮುನ್ನೇಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಂಬೂಬಜಾರ್ ರಸ್ತೆ, ಟಿ.ಟಿ.ರಸ್ತೆ, ದುರ್ಗಾಂಬಿಕಾ ರಸ್ತೆ, ಆಸ್ಪತ್ರೆ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಾಹನ ಸಂಚಾರ ವ್ಯವಸ್ಥೆ ಕಡಿತಗೊಳಿಸಿದ್ದು, ಬ್ಯಾರೀಕೇಡ್ ಅಳವಡಿಸಿ ಭಕ್ತಾದಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಥ ಎಳೆಯುವ ಸಮಯದಲ್ಲಿ ಬಿಗಿ ಪೋಲಿಸ್ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಕ್ರಮ ವಹಿಸಿದ್ದರು.
18ಲಕ್ಷಕ್ಕೆ ಮುಕ್ತಿಬಾವುಟ - ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಸತತ 7ನೇ ಬಾರಿಗೆ ಬ್ರಹ್ಮರಥೋತ್ಸಕ್ಕೆ ಚಾಲನೆ ನೀಡುವ ಮೊದಲು ನಡೆಯುವ ಮುಕ್ತಿ ಭಾವುಟ ಹರಾಜು ಜನರಲ್ಲಿ ಕುತೂಹಲ ಕೆರಳಿಸಿತು. ಒಂದು ಲಕ್ಷಕ್ಕೆ ಜಗದೀಶ್ ಭಂಡಾರಿ ಅವರಿಂದ ಆರಂಭವಾದ ಹರಾಜು ಪ್ರಕ್ರಿಯೆಯು ಹಂತಹತವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೇ ನೇರ ಪೈಪೋಟಿ ಏರ್ಪಟ್ಟಿತ್ತು, ಅಂತಿಮವಾಗಿ ರೂ 18ಲಕ್ಷಗಳಿಗೆ ಕೂಗುವ ಮೂಲಕ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪಾಲಾಯಿತು.
ಕಳೆದ ಬಾರಿಯೂ ರೂ.10ಲಕ್ಷಗಳಿಗೆ ಇವರೇ ಕೂಗಿದ್ದರು. ಈ ಬಾವುಟ ಪಡೆದರೆ ಉತ್ತಮ ಆರೋಗ್ಯ, ಸಂಪತ್ತು, ವ್ಯಾಪಾರ ವಹಿವಾಟು ವೃದ್ದಿಯಾಗುತ್ತದೆ ಎಂಬ ನಂಬಿಕೆಯು ಇದೆ. ಆದ್ದರಿಂದ ಅನೇಕ ಜನರು ಭಾವುಟ ಪಡೆಯಲು ಪೈಪೋಟಿ ನಡೆಸುತ್ತಾರೆ. ಈ ಬಾರಿ ಚುನಾವಣೆ ಕಾವು ಇರುವುದರಿಂದ ಭಾರೀ ಕುತೂಹಲ ಮೂಡಿಸಿದ್ದರೂ, ಇಬ್ಬರ ನಡುವೆ ಮಾತ್ರ ಪೈಪೋಟಿ ಏರ್ಪಟ್ಟಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಮೊತ್ತಕ್ಕೆ ಕೂಗುವ ಮೂಲಕ ಜನತೆಯಲ್ಲಿ ಉತ್ಸಾಹ ಹೆಚ್ಚಿಸಿತ್ತು.

ದಾರಿಯುದ್ದಕ್ಕೂ ಬಾಳೆಹಣ್ಣುಗಳ ಎಸೆತ
ದೇವರನ್ನು ರಥೋತ್ಸವದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ಭಕ್ತರು ತಮ್ಮ ಇಷ್ಟಾರ್ಥಗಳು ನೇರವೇರಿಸಲು ಹರಕೆಯಂತೆ ತಂದಿದ್ದ ಬಾಳೆಹಣ್ಣುಗಳನ್ನು ರಥಕ್ಕೆ ತೂರುತ್ತಿದ್ದ ದೃಶ್ಯ ಕಂಡುಬಂದಿತು. ಅಲ್ಲದೇ ಮೆರವಣೆಗೆಯುದ್ದಕ್ಕೂ ಹಣ್ಣು ತೂರುವುದು, ಜತೆಗೆ ಇಷ್ಟಾರ್ಥಗಳನ್ನು ಹಣ್ಣಿನ ಮೇಲೆ ಬರೆದು ಎಸೆಯುತ್ತಿದ್ದು ವಿಶೇಷವಾಗಿತ್ತು. ಅಲ್ಲದೆ ರಥದ ಶಿಖರಕ್ಕೆ ಬಾಳೆಹಣ್ಣು ತಲುಪಲು ಭಕ್ತಾಗಳು ಹಾಗೂ ಯುವಕರು ಹರಸಾಹಸ ಪಟ್ಟರು. ಆ ಮೂಲಕ ಭಕ್ತಾದಿಗಳು ತಮ್ಮ ಹರಕೆಗಳನ್ನು ತೀರಿಸಿದರು. ಜಾತ್ರೆಗೆ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮುಕ್ತಿ ಬಾವುಟದಲ್ಲಿ ಹ್ಯಾಟ್ರಿಕ್
ನಗರದ ಐತಿಹಾಸಿಕ ಶ್ರೀ ತೇರು ಮಲ್ಲೇಶ್ವರನ ಬ್ರಹ್ಮ ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಮೂರು ಬಾರಿ ಮುಕ್ತಿ ಬಾವುಟ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 2022 ರಲ್ಲಿ 12ಲಕ್ಷ, 2023ರಲ್ಲಿ 10ಲಕ್ಷ ಹಾಗೂ 2024 ರಲ್ಲಿ ಬರೊಬ್ಬರಿ 18 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಾರ್ತಿಕ್, ಮಾಜಿ ಜಿಪಂ ಸದಸ್ಯರಾದ ಸಿಬಿ. ಪಾಪಣ್ಣ, ಆರ್ ನಾಗೇಂದ್ರ ನಾಯ್ಕ, ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ್, ನಗರಸಭೆ ಸದಸ್ಯ ಅಜ್ಜಪ್ಪ, ತಿಪ್ಪೇಸ್ವಾಮಿ, ರವಿಚಂದ್ರನಾಯ್ಕ, ಮಾಜಿ ನಗರಸಭೆ ಅಧ್ಯಕ್ಷ ಟಿ. ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್, ಕಂದಿಕೆರೆ ಜಗದೀಶ್ ಹಾಗೂ ದೇವಸ್ಥಾನದ ಮುಜರಾಯಿ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.












Click it and Unblock the Notifications