ಮೊಳಕಾಲ್ಮೂರು : ಶ್ರೀರಾಮುಲುಗೆ ಪೊರಕೆ, ಚಪ್ಪಲಿ ಸ್ವಾಗತ!
Recommended Video

ಚಿತ್ರದುರ್ಗ, ಏಪ್ರಿಲ್ 13 : ಮಹಿಳೆಯರಿಂದ ಪೊರಕೆ ಹಿಡಿದು ಪ್ರತಿಭಟನೆ, ಕಾರಿಗೆ ಕಲ್ಲು ತೂರಾಟ, ಚಪ್ಪಲಿ ಎಸೆತ, ಲಘು ಲಾಠಿ ಪ್ರಹಾರ...ಇದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಇಂದಿನ ಚಿತ್ರಣ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಲು ನಿರ್ಧರಿಸಿದ್ದ ಬಿ. ಶ್ರೀರಾಮುಲು ಶುಕ್ರವಾರ ನಾಯಕನಹಟ್ಟಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದದರು.
ನಾಯಕನಹಟ್ಟಿಯ ದೇವಾಲಯಕ್ಕೆ ಶ್ರೀರಾಮುಲು ಭೇಟಿ ನೀಡಬೇಕಿತ್ತು. ಆದರೆ, ಹಾಲಿ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ದೇವಾಲಯದ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಕುಳಿತು ಶ್ರೀರಾಮುಲು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಮಹಿಳೆಯರು, ಮಕ್ಕಳು 'ಗೋ ಬ್ಯಾಕ್ ಶ್ರೀರಾಮುಲು' ಎಂದು ಘೋಷಣೆಗಳನ್ನು ಕೂಗಿದರು. ಮಹಿಳೆರು ಪೊರಕೆ ಹಿಡಿದು ಶ್ರೀರಾಮುಲು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಶ್ರೀರಾಮುಲು ಅವರ ಕಾರಿನತ್ತ ಚಪ್ಪಲಿಗಳನ್ನು ತೂರಿದರು.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಚುನಾವಣಾ ಪ್ರಚಾರ ಆರಂಭಿಸಲು ಬಿ. ಶ್ರೀರಾಮುಲು ನಿರ್ಧರಿಸಿದ್ದರು. ಆ ದೇವಸ್ಥಾನದ ಬಳಿಯೇ ಎಸ್. ತಿಪ್ಪೇಸ್ವಾಮಿ ಬೆಂಬಲಿಗರು ಬಹುಸಂಖ್ಯೆಯಲ್ಲಿ ಜಮಾವಣೆಯಾಗಿದ್ದರು. ಶ್ರೀರಾಮುಲು ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದೇ ಸಂದರ್ಭದಲ್ಲಿ ಬಿ. ಶ್ರೀರಾಮುಲು ಬೆಂಬಲಕ್ಕೆ ಬಿಜೆಪಿ ತಾಲೂಕು ಕಾರ್ಯದರ್ಶಿ ವೆಂಕಟಸ್ವಾಮಿ ಅವರ ಬೆಂಬಲಿಗರು ಬಂದರು. ಪ್ರತಿಭಟನಾನಿರತ ಗುಂಪಿನ ಮೇಲೆ ಹಲ್ಲೆ ನಡೆಸಿದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ತಿಪ್ಪೇಸ್ವಾಮಿ ಬಣದ 118 ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು.












Click it and Unblock the Notifications