"ಸಿರಿಗೆರೆ ತರಳಬಾಳು ಮಠದ ₹2,000 ಕೋಟಿ ಮೌಲ್ಯದ ಆಸ್ತಿ ಗುಳುಂ"
ಚಿತ್ರದುರ್ಗ, ಸೆಪ್ಟೆಂಬರ್, 1: ಸಿರಿಗೆರೆಯ ತರಳಬಾಳು ಮಠ ಇಡೀ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಮಠಗಳಲ್ಲಿ ಒಂದಾಗಿದೆ. ಇಂತಹ ಮಠದಲ್ಲಿ ಪೀಠಾಧಿಪತಿ ಮಠಕ್ಕೆ ಸೇರಿದ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ಗಂಭೀರ ಆರೋಪ ಬಂದಿದೆ. ಹಾಗಾದರೆ ಈ ಆರೋಪವನ್ನು ಮಾಡಿದ್ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
"ಏಕವ್ಯಕ್ತಿ ಟ್ರಸ್ಟ್ ನಿರ್ಮಾಣ ಮಾಡಿಕೊಂಡು ತರಳಬಾಳು ಮಠಕ್ಕೆ ಸೇರಿದ ಅಂದಾಜು 2,000 ಕೋಟಿ ಮೌಲ್ಯದ ಆಸ್ತಿಯನ್ನು ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಮಠವನ್ನು ಖಾಸಗಿ ಸ್ವತ್ತಾಗಿ ಪರಿವರ್ತಿಸಿಕೊಂಡಿದ್ದಾರೆ," ಎಂದು ಸಾದರ ಲಿಂಗಾಯತ ಸಮುದಾಯದ ಮುಖಂಡರು ಆರೋಪ ಮಾಡಿದರು ಅಂತಾ ಪ್ರಜಾವಾಣಿ ವರದಿ ಮಾಡಿದೆ.

ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಭಕ್ತರ ವತಿಯಿಯಿಂದ ಸಭೆ ನಡೆಸಿದ್ದು, ಈ ವೇಳೆ ಸಿರಿಗೆರೆಯ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕೆಂಬ ಹೋರಾಟವನ್ನು ಮುಂದುವರೆಸಲು ತೀರ್ಮಾನ ಮಾಡಿದ್ದಾರೆ. ಭಕ್ತರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕು & ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಆಯೋಜನೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
1977ರಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರೂಪಿಸಿದ್ದ ಬೈಲಾ ರದ್ದುಪಡಿಸಿ 1990ರಲ್ಲಿ ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಳ್ಳಲಾಗಿದೆ. ಹಳೆಯ ಮಠವನ್ನು ಗುಳುಂ ಮಾಡಿ ಹೊಸ ನಾಮಕರಣ ಮಾಡಲಾಗಿದೆ. ಜಮೀನು, ಶಿಕ್ಷಣ ಸಂಸ್ಥೆ ಸೇರಿ ಮಠದ ಸಂಪೂರ್ಣ ಆಸ್ತಿ ಏಕವ್ಯಕ್ತಿ ಟ್ರಸ್ಟ್‌ಗೆ ವರ್ಗಾವಣೆಗೊಂಡಿದೆ ಎಂದು ಆರೋಪ ಮಾಡಿದ್ದಾರೆ.
ಈ ಟ್ರಸ್ಟ್‌ನಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರಮಾಧಿಕಾರ ಹೊಂದಿದ್ದು, ಎಲ್ಲವೂ ಅವರ ಸ್ವತ್ತಾಗಿ ಬದಲಾವಣೆ ಆಗಿದೆ. 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ ನೀವು ಬಂಡವಾಳಶಾಹಿ ಅಲ್ಲವೆ? ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದರು.
ಮಠ ಹಾಗೂ ಪೀಠಾಧಿಪತಿಯನ್ನು ಭಕ್ತರು ವಿರೋಧ ಮಾಡುತ್ತಿಲ್ಲ. ಬದಲಾಗಿ ಮಠದಲ್ಲಿರುವ ಭಕ್ತರ ಆಸ್ತಿ ಉಳಿಯಬೇಕೆಂಬುದಷ್ಟೇ ನಮ್ಮ ಉದ್ದೇಶ. ಭಕ್ತರ ಮನಸಿನಲ್ಲಿ ವಿಷಬೀಜ ಬಿತ್ತಿ ಸಮಾಜವನ್ನು ಇಬ್ಭಾಗ ಮಾಡಬೇಡಿ. ಸುತ್ತೂರು ಮಠ, ಮಾದಾರ ಚನ್ನಯ್ಯ ಗುರುಪೀಠದಂತೆ ತರಳಬಾಳು ಮಠಕ್ಕೂ ಉತ್ತಾರಾಧಿಕಾರಿ ನೇಮಕ ಆಗಬೇಕು ಎಂದು ಹೇಳಿದರು.
ಉದ್ಯಮಿ ಅಣಬೇರು ರಾಜಣ್ಣ, ಅನ್ನ, ಅಕ್ಷರ ದಾಸೋಹದಲ್ಲಿ ವೀರಶೈವ ಲಿಂಗಾಯತ ಮಠಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಸಮಾಜ ತಿದ್ದುವ, ಭಕ್ತರನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಮಠಾಧೀಶರಿಗೆ ಆಸ್ತಿ, ಹಣದ ವ್ಯಾಮೋಹ ಏಕೆ? ಭಕ್ತರು ಮಠಕ್ಕೆ ನೀಡಿದ ಕಾಣಿಕೆಯನ್ನ ಸ್ವಂತ ಆಸ್ತಿಯಾಗಿ ಪರಿವರ್ತನೆ ಮಾಡಿಕೊಳ್ಳುವುದು ತಪ್ಪಲ್ಲವೇ? ಎಂದು ಪ್ರಶ್ನಿಸಿದರು.
ಭಕ್ತರು ಹೇಳೋದೇನು?: 1990ರಲ್ಲಿ ರಚನೆಯಾದ ಏಕವ್ಯಕ್ತಿ ಟ್ರಸ್ಟ್‌ಡೀಡ್ ರದ್ದುಪಡಿಸಬೇಕು. 1977ರ ಬೈಲಾ ಪ್ರಕಾರ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕು. ಹಾಳಾಗಿರುವ ಶಾಲೆ-ಕಾಲೆಜುಗಳನ್ನು ಸರಿಪಡಿಸಿ ಅಕ್ಷರ ದಾಸೋಹ ಮುಂದುವರೆಸಬೇಕು. ಹಾಗೆಯೇ ಮಠದ ಭಕ್ತರ ಮೇಲೆ ಹಾಕಿರುವ ಪ್ರಕರಣಗಳು ಹಿಂಪಡೆಯಬೇಕು. ಸಾದರ ಸಮಾಜದಲ್ಲಿ ಮೂಡಿರುವ ಗೊಂದಲ ನಿವಾರಣೆ ಮಾಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.












Click it and Unblock the Notifications