ಚಿತ್ರದುರ್ಗ: ಶಾಲಾ ಬಸ್ ಪಲ್ಟಿ, 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಚಿತ್ರದುರ್ಗ, ಜನವರಿ, 02: ಶಾಲಾ ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಮಲ್ಲಪ್ಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಸ್
ಪಲ್ಟಿಯಾಗಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡೊದ್ದಾರೆ.
ಇನ್ನು ಗಾಯಾಳು ವಿದ್ಯಾರ್ಥಿಗಳನ್ನು ಹೊಸದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,
ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಈ ಪ್ರಕರಣ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಚಿತ್ರದುರ್ಗದಲ್ಲಿ ಪ್ರತ್ಯೇಕ ಅಪಘಾತ, ಮೂವರ ಸಾವು
ಇನ್ನು ಹೊಸ ವರ್ಷದ ಹೊಸ್ತಿಲಲ್ಲಿ ಪ್ರತ್ಯೇಕ ಅಪಘಾತದಲ್ಲಿ ಮೂವರು ಅಸುನಿಗಿದ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಚಿತ್ರದುರ್ಗ ತಾಲೂಕಿನ ಹೊಸ ಕಲ್ಲಹಳ್ಳಿ ಬಳಿ ಆಟೋ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರ ಪ್ರಾಣ ಪಕ್ಷಿ ಸ್ಥಳದಲ್ಲೇ ಹಾರಿ ಹೋದ ಘಟನೆ ನಡೆದಿತ್ತು. ಮೃತರನ್ನ ಬೈಕ್ ಹಿಂಬದಿ ಕುಳಿತಿದ್ದ ಶಿಲ್ಪ (30), ಆಟೋದಲ್ಲಿ ಪ್ರಯಾಣಿಸುತಿದ್ದ ಬರ್ಕತ್ ಆಲಿ (35) ಸ್ಥಳದಲ್ಲೇ ಸಾವೀಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿತ್ತು.
ಇನ್ನು ಆಟೋದಲ್ಲಿದ್ದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರನ ಅತಿ ವೇಗ ಮತ್ತು ಅಜಾಗ್ರತೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು
ಟಿವಿಎಸ್ ಬೈಕ್ & ಬುಲೋರ ನಡುವೆ ಅಪಘಾತ: ಮತ್ತೊಂದು ಅಪಘಾತ ಚಳ್ಳಕೆರೆ ತಾಲೂಕಿನ ತಳುಕು ಸಮೀಪದ ಗಿರಿಯಮ್ಮನಹಳ್ಳಿ ಬಳಿ ಟಿವಿಎಸ್ ಬೈಕ್ ಮತ್ತು ಬುಲೋರ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಳುಕು ಲಂಬಾಣಿಹಟ್ಟಿ ಗ್ರಾಮದ ರಾಜನಾಯ್ಕ (55) ವರ್ಷ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನು ಸಿಟ್ಟಿಗೆದ್ದ ಮೃತ ಸಂಬಂಧಿಕರು ಗಿರಿಯಮ್ನಳ್ಳಿ ಗ್ರಾಮಸ್ಥರು ಕೆಲಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿತ್ತು.












Click it and Unblock the Notifications