ಚಿತ್ರದುರ್ಗ; ಹಿರಿಯೂರಿನಲ್ಲಿ ಪ್ರತ್ಯೇಕ ಅಪಘಾತ, 3 ಸಾವು
ಚಿತ್ರದುರ್ಗ, ಜನವರಿ 17: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಬಳಿ ಇಬ್ಬರು ಹಾಗೂ ವಡ್ಡನಹಳ್ಳಿ ಬಳಿ ಒಬ್ಬರು ಮೃತಪಟ್ಟಿದ್ದಾರೆ. ಈ ಎರಡೂ ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ನಡೆದಿವೆ.
ಮೇಟಿಕುರ್ಕೆ ಬಳಿ ಅಂಚೆ ಇಲಾಖೆಯ ಕಾಗದ ಸಾಗಣೆ ಮಾಡುತ್ತಿದ್ದ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರು ಕ್ಯಾಂಟರ್ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು, ಊಟ ಮುಗಿಸಿ, ಕ್ಯಾಂಟರ್ ಗಾಡಿ ಮುಂದೆ ಮಲಗಿಕೊಂಡಿದ್ದರು.

ಕ್ಯಾಂಟರ್ ಗಾಡಿ ವಾಹನವನ್ನು ಯಾವುದೇ ಮೂನ್ಸೂಚನೆ ನೀಡದೆ ನಿಲ್ಲಿಸಿದ್ದರಿಂದ, ದಾವಣಗೆರೆಯಿಂದ ಬೆಂಗಳೂರು ಕಡೆಗೆ ಕಾಗದಗಳನ್ನು ತುಂಬಿಕೊಂಡು ಸಾಗುತ್ತಿದ್ದ ಅಂಚೆ ಇಲಾಖೆಯ ವಾಹನ ಇಬ್ಬರಿಗೆ ಡಿಕ್ಕಿ ಹೊಡೆದಿದೆ.
ಸ್ಥಳದಲ್ಲಿಯೇ ಕುಮಾರ್ ( 24), ವಿಜಯ್ (28) ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಅಂಚೆ ಇಲಾಖೆ ವಾಹನ ಚಾಲಕನ ಅತಿ ವೇಗ ಕಾರಣ ಎಂದು ಆರೋಪಿಸಲಾಗಿದೆ.
ಟಾಟಾ ಏಸ್ ಡಿಕ್ಕಿ; ಮತ್ತೊಂದು ಕಡೆ ಹಿರಿಯೂರು ತಾಲೂಕಿನ ವಡ್ಡನಹಳ್ಳಿ ಬಳಿ ಲಾರಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಮುರುಗನ್ ( 36) ಎಂಬುವವರು ಮೃತಪಟ್ಟಿದ್ದಾರೆ.
ರಕ್ಷಿತ, ಪವನ್, ಚಂದ್ರು, ರಾಜು, ಕುಮಾರ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications