ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ; ಎ. ನಾರಾಯಣಸ್ವಾಮಿ ಭಾವುಕ
ಚಿತ್ರದುರ್ಗ, ಜುಲೈ 7: "ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಭಾರತೀಯ ಜನತಾ ಪಕ್ಷ ಗುರುತಿಸಿದೆ ಅನ್ನುವುದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ,'' ಎಂದು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಭಾವುಕರಾಗಿ ಮಾತನಾಡಿದರು.
ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಖಚಿತವಾದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಿವಾಸಕ್ಕೆ ನಾರಾಯಣಸ್ವಾಮಿ ಆಗಮಿಸಿದ್ದರು. ನಿವಾಸದಿಂದ ಹೊರ ಬರುತ್ತಲೇ ಕೇಂದ್ರದ ಸಚಿವನಾಗುತ್ತಿರುವ ಬಗ್ಗೆ ಮಾಧ್ಯಮಗಳೊಂದಿಗೆ ಸಂತಸ ವ್ಯಕ್ತಪಡಿಸಿದ ಎ. ನಾರಾಯಣಸ್ವಾಮಿ, "ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ, ಪಕ್ಷ ಅವಕಾಶ ನೀಡಿದೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ,'' ಎಂದು ಹೇಳಿದರು.
ದಲಿತ ಎಡಗೈ ಸಮುದಾಯದ ಕೋಟಾಗೆ ಮೊದಲ ಅವಧಿಯಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ವಿಜಯಪುರದ ಸಂಸದ ರಮೇಶ್ ಜಿಗಜಿಣಗಿಗೆ ಸ್ಥಾನ ಕೊಡಲಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ರಮೇಶ್ ಜಿಗಜಿಣಗಿಗೆ ಸ್ಥಾನ ಕೊಟ್ಟಿರಲಿಲ್ಲ. ಹಾಗಾಗಿ ಆ ಕೋಟಾದಲ್ಲಿ ನಾರಾಯಣಸ್ವಾಮಿಗೆ ಸ್ಥಾನ ನೀಡಲಾಗಿದೆ. ಇನ್ನೂ ನಾರಾಯಣಸ್ವಾಮಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗದೆ.

ಇನ್ನು ಶೋಭಾ ಕರಂದ್ಲಾಜೆ ಕೂಡಾ ಕೇಂದ್ರ ಸಂಪುಟ ಸೇರ್ಪಡೆಯಾದ ರಾಜ್ಯದ ಐದನೇ ಸಂಸದೆಯಾಗಲಿದ್ದಾರೆ. ಈ ಹಿಂದೆ ಸರೋಜಿನಿ ಮಹಿಷಿ, ಬಳ್ಳಾರಿ ಸಂಸದೆಯಾಗಿದ್ದ ಬಸವರಾಜೇಶ್ಚರಿ, ಚಿಕ್ಕಮಗಳೂರು ಸಂಸದೆಯಾಗಿದ್ದ ಡಿ.ಕೆ. ತಾರದೇವಿ, ಕೆನರಾ ಸಂಸದೆಯಾಗಿದ್ದ ಮಾರ್ಗರೇಟ್ ಅಳ್ವಾ ಕೇಂದ್ರ ಸಚಿವರಾಗಿದ್ದರು. ಈಗ ಮತ್ತೆ ಉಡುಪಿ- ಚಿಕ್ಕಮಗಳೂರಿಗೆ ಅದೃಷ್ಟ ಒಲಿದು ಬಂದಿದೆ.












Click it and Unblock the Notifications