K.Poornima: ಹಿರಿಯೂರಿನಲ್ಲಿ ನಾಮಪತ್ರ ಸಲ್ಲಿಸಿದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್
ಚಿತ್ರದುರ್ಗ, ಏಪ್ರಿಲ್, 17: ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಮರು ಆಯ್ಕೆ ಬಯಸಿ ಅಪಾರ ಬೆಂಬಲಿಗರೊಂದಿಗೆ ಚುನಾವಣಾ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಗರದ ಶ್ರೀ ತೇರು ಮಲ್ಲೇಶ್ವರ ದೇವಾಲಯ, ಕಾಳಿಕಾಂಬಾ ದೇವಿ, ದುರ್ಗಾಪರಮೇಶ್ವರಿ ದೇವಾಲಯ, ಶ್ರೀಕೃಷ್ಣ ದೇವಾಲಯ, ಚರ್ಚ್‌ಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿದರು. ನಂತರ ನಗರದ ಶ್ರೀ ತೇರು ಮಲ್ಲೇಶ್ವರ ದೇವಾಲಯದಿಂದ ಸಾವಿರಾರು ಬೆಂಬಲಿಗರ ಜೊತೆ ರೋಡ್ ಶೋ ನಡೆಸಿ, ಚುನಾವಣಾ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಕಳೆದ 2018ರಲ್ಲಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆ ಆಗಿದ್ದರು. ಅದರಲ್ಲೂ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು. 2013ರಲ್ಲಿ ಹಿರಿಯೂರು ಕ್ಷೇತ್ರದಿಂದ ಪೂರ್ಣಿಮಾ ಶ್ರೀನಿವಾಸ್ ಅವರ ತಂದೆ ದಿವಂಗತ ಮಾಜಿ ಸಚಿವ ಎ.ಕೃಷ್ಣಪ್ಪ ಅವರು ಸ್ಪರ್ಧಿಸಿ ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದ್ದರು.

2018ರಲ್ಲಿ ಅಮೋಘ ಗೆಲುವು
ನಂತರ ತಂದೆಯ ಸಾವಿನಿಂದ ಧೃತಿಗೆಡದೆ ಪೂರ್ಣಿಮಾ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಅಂದಿನಿಂದ ಬಿಜೆಪಿ ಪಕ್ಷ ಸಂಘಟನೆ ಮಾಡುವ ಮೂಲಕ 2018ರಲ್ಲಿ ತಂದೆ ಸೋತ ಕ್ಷೇತ್ರದಲ್ಲಿ ಮಗಳು ಅಮೋಘ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಉತ್ತಮ ಆಡಳಿತ ನೀಡಿ ಇದೀಗ ಮರು ಆಯ್ಕೆ ಬಯಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಅದ್ದೂರಿ ಮೆರವಣಿಗೆ
ನಾಮಪತ್ರ ಸಲ್ಲಿಸುವ ಮೊದಲು ನಗರದ ಶ್ರೀ ತೇರು ಮಲ್ಲೇಶ್ವರ, ವಾಸವಿ ದೇವಸ್ಥಾನ, ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀಕೃಷ್ಣ ದೇವಾಲಯ, ಚರ್ಚ್, ಮಸೀದಿ, ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿದರು. ನಂತರ ಶ್ರೀ ತೇರು ಮಲ್ಲೇಶ್ವರ ದೇವಾಲಯದಿಂದ ತೆರೆದ ವಾಹನದಲ್ಲಿ ಹೊರಟ ಮೆರವಣಿಗೆ ನಗರದ ಬಿಇಓ ವೃತ್ತ, ಚರ್ಚ್ ರಸ್ತೆ, ಗಾಂಧಿ ವೃತ್ತದ ಮೂಲಕ ತಾಲೂಕು ಕಛೇರಿ ತಲುಪಿತು. ನಂತರ ಅವರು ಐದು ಜನರೊಂದಿಗೆ ಚುನಾವಣೆ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.












Click it and Unblock the Notifications