KSRTC Bus Accident: ಹಿರಿಯೂರಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, ವಿದ್ಯಾರ್ಥಿಗಳಿಗೆ ಗಾಯ
ಹಿರಿಯೂರು, ಸೆಪ್ಟೆಂಬರ್, 30: ರಾಜ್ಯದ ಹಲವೆಡೆ ಕೆಎಸ್‌ಆರ್‌ಟಿಸಿ ಬಸ್ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇನ್ನು ಇದೀಗ ಇಂದು (ಸೆಪ್ಟೆಂಬರ್ 30) ಮತ್ತೆ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಯ (KSRTC) ಬಸ್ ಪಲ್ಟಿಯಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಓಬಳಾಪುರ ತಾಂಡಾ ಬಳಿ ಸೋಮವಾರ ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಬಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಹಿರಿಯೂರು ಕಡೆ ಬರುವಾಗ ಓಬಳಾಪುರ ತಾಂಡಾ ಬಳಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸದ್ಯ ಈ ವೇಳೆ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಕೈ, ಕಾಲು, ಕಣ್ಣು ಇನ್ನೀತರ ಭಾಗಗಳಲ್ಲಿ ಗಾಯಗಳಾಗಿವೆ. ಈ ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಸ್ಥಳೀಯ ವಾಹನ ಹಾಗೂ ಅಂಬುಲೆನ್ಸ್‌ಗಳಲ್ಲಿ ಸಾಗಿಸಿ ಸ್ಥಳೀಯ ಮತ್ತು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಇಬ್ಬರು ಸ್ಥಳದಲ್ಲೇ ಸಾವು: ಲಾರಿ ಓವರ್ ಟೇಕ್ ಮಾಡಲು ಹೋಗಿ ಕಾರು ಲಾರಿಗೆ ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಡೆದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ತಡರಾತ್ರಿ 1 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಜಗಳೂರು ಮೂಲದ ಫಯಾಜ್ ಹಾಗೂ ಆಶ್ರಫ್ ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಕಾರಿನಲ್ಲಿದ್ದ ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಾಲಿಸಲಾಗಿದೆ.
ಜಗಳೂರು ಮೂಲದ ಮೂವರು ಚಿತ್ರದುರ್ಗದಿಂದ ಜಗಳೂರಿಗೆ ಕಡೆಗೆ ಹೋಗುವಾಗ ಚಿಕ್ಕಗೊಂಡನಹಳ್ಳಿ ಬಳಿ ಮುಂದೆ ಚಲಿಸುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಲಾರಿಯ ಹಿಂಬದಿಗೆ ವೇಗವಾಗಿ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ವಿಷಯ ತಿಳಿದ ತಕ್ಷಣ ತುರುವನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಮೂವರು ಸಾವು: ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಜಿಲ್ಲೆಯ ಚಿಕ್ಕಬೆನ್ನೂರು ಬಳಿ ಈ ಘಟನೆ ನಡೆದಿದ್ದು, ಅಪಘಾತ ರಭಸಕ್ಕೆ ಮೂವರು ಸ್ಥಳದಲ್ಲಿ ಅಸುನಿಗಿದ್ದಾರೆ ಎಂದು ತಿಳಿದುಬಂದಿತ್ತು. ಇನ್ನು ಪ್ರಜ್ವಲ್ ರೆಡ್ಡಿ (30 ವರ್ಷ), ಹರ್ಷಿತಾ (28 ವರ್ಷ) ಮತ್ತು ಮಗು ಸೋಹನ್ (2 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ. ಗಾಯಗೊಂಡವರನ್ನು ಶಿಲ್ಪ, ಸ್ವರ್ಣ ಜಾರ್ಜ್, ಮಧುಮಿತ, ವಿಜಯ್ ರೆಡ್ಡಿ, ಕೃಷ್ಣ, ಎಂದು ಗುರುತಿಸಲಾಗಿದೆ.
ಚಲಿಸುತ್ತಿದ್ದ ಲಾರಿಯ ಟಯರ್ ಬ್ಲಾಸ್ಟ್ ಆಗುತ್ತಿದ್ದಂತೆ, ವೇಗವಾಗಿ ಹಿಂಬದಿಯಿಂದ ಬಂದ ಫಾರ್ಚೂನರ್ ಕಾರು ಲಾರಿಗೆ ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಚಲಿಸುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಪ್ರಕರಣ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.












Click it and Unblock the Notifications