Breaking; ಮುರುಘಾ ಮಠದ ಆಡಳಿತಾಧಿಕಾರಿ ನೇಮಕ ರದ್ದು
ಚಿತ್ರದುರ್ಗ, ಮೇ 22; ಚಿತ್ರದುರ್ಗದ ಮುರಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಪಿ. ಎಸ್. ವಸ್ತ್ರದ್‌ರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿತ್ತು.
ಸೋಮವಾರ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಈ ಕುರಿತು ಆದೇಶ ಹೊರಡಿಸಿದೆ. ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿದೆ. ಕರ್ನಾಟಕ ಸರ್ಕಾರ 2022ರ ಡಿಸೆಂಬರ್ 13ರಂದು ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು.

ಕರ್ನಾಟಕ ಸರ್ಕಾರ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ನೋಡಿಕೊಳ್ಳಲು ನಿವೃತ್ತ ಐಎಎಸ್ ಅಧಿಕಾರಿ ಪಿ. ಎಸ್. ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ರಾಜ್ಯ ಸರ್ಕಾರದ ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ತಮ್ಮ ವಿರುದ್ಧ ಪ್ರಕರಣ ದಾಖಲಾದ ನಂತರ ಈಗಾಗಲೇ ಮುರುಘಾ ಶರಣರು ಮಠದ ವ್ಯವಹಾರಗಳಿಗೆ ಸಂಬಂಧಿಸಿದ ಜಿಪಿಎ ನೀಡಿದ್ದಾರೆ. ಶಿಕ್ಷ ಣ ಸಂಸ್ಥೆಗಳಿಗೆ ನಿವೃತ್ತ ನ್ಯಾಯಾಧೀಶರಿಗೆ ಜಿಪಿಎ ನೀಡಿದ್ದಾರೆ. ಮಠದ ವ್ಯವಹಾರಗಳಿಗೆ ಬಸವಪ್ರಭು ಸ್ವಾಮಿಗೆ ಜಿಪಿಎ ನೀಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಮಠಾಧಿಪತಿ ಜೈಲಿನಲ್ಲಿರುವುದು ಆಡಳಿತಾಧಿಕಾರಿ ನೇಮಿಸಲು ಸಕಾರಣವಲ್ಲ. ಹಾಗಾಗಿ ಆಡಳಿತಾಧಿಕಾರಿ ನೇಮಕ ರದ್ದುಪಡಿಸಬೇಕು ಎಂದು ಮಠದ ಭಕ್ತರಾದ ಡಿ. ಎಸ್. ಮಲ್ಲಿಕಾರ್ಜುನ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಕ್ರಮ ಸಮರ್ಥಿಸಿಕೊಂಡಿದ್ದ ಸರ್ಕಾರ; ಕರ್ನಾಟಕ ಸರ್ಕಾರ ಹೈಕೋರ್ಟ್‌ನಲ್ಲಿ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿತ್ತು. ಮಠಾಧಿಪತಿ ಮಠದ ಆಸ್ತಿಯ ಮಾಲೀಕನಾಗುವುದುದಿಲ್ಲ, ಹಾಗಾಗಿ ಆಸ್ತಿ ಉಳಿಸಲು ಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಿತ್ತು ಎಂದು ಹೇಳಿತ್ತು.
ಮಠಾಧಿಪತಿ ಬಂಧನದಲ್ಲಿರುವುದರಿಂದ ಮಠದ ಆಡಳಿತ ನಿರ್ವಹಣೆ ಸಾಧ್ಯವಿಲ್ಲ. ದೈನಂದಿನ ಆಡಳಿತ ನಿರ್ವಹಣೆ ಮಾಡಲು ಆಸ್ತಿಯನ್ನು ಉಳಿಸಲು ಆಡಳಿತಾಧಿಕಾರಿ ನೇಮಿಸಲಾಗಿದೆ. ಒಂದು ವೇಳೆ ಬಂಧನಕ್ಕೆ ಒಳಗಾಗಿರುವ ಮುರುಘಾ ಶರಣರಿಗೆ ಜಾಮೀನು ಸಿಕ್ಕರೆ ಆನಂತರ ಸರ್ಕಾರ ಆಡಳಿತಾಧಿಕಾರಿ ನೇಮಕ ನಿರ್ಧಾರ ಮರುಪರಿಶೀಲನೆ ಮಾಡಬಹುದು ಎಂದು ವಾದ ಮಂಡಿಸಿತ್ತು.
ಮಠದ ಆಸ್ತಿಯ ನಿರ್ವಹಣೆ ಮಾತ್ರ ಮಠಾಧಿಪತಿಯ ಕರ್ತವ್ಯವಾಗಿರುತ್ತದೆ. ಮಠಾಧಿಪತಿ ಮಠದ ಆಸ್ತಿಯ ಮಾಲೀಕನಾಗುವುದಿಲ್ಲ. ಮಠಾಧಿಪತಿ ಅನುಪಸ್ಥಿತಿಯಲ್ಲಿಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಿತ್ತು ಎಂದು ವಾದಿಸಿತ್ತು.
ಹೈಕೋರ್ಟ್‌ನಲ್ಲಿ ಸರ್ಕಾರ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಮುರುಘಾ ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹಾಗೂ ನೂರಾರು ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತ ಕುಸಿದು ಹೋಗಬಾರದು ಎಂಬ ಏಕೈಕ ಸದುದ್ದೇಶದಿಂದ ಆಡಳಿತಾಧಿಕಾರಿ ನೇಮಕ ಮಾಡಿದೆ.
ರಿಲಿಜಿಯಸ್ ಡಿನಾಮಿನೇಶನ್ (ಧಾರ್ಮಿಕ ಪಂಥ) ಮತ್ತು ಮಠಾಧಿಪತಿ ಎಂಬುದರ ವ್ಯಾಖ್ಯಾನ ಬೇರೆ ಬೇರೆಯಾಗುತ್ತದೆ. ಮಠ ಒಂದು ಸಾರ್ವಜನಿಕ ಟ್ರಸ್ಟ್. ಹೀಗಾಗಿ, ಮಠದ ಅಧೀನದಲ್ಲಿರುವ ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ಮತ್ತು ಸಂಸ್ಥೆಗಳ ನಿರಾತಂಕ ಆಡಳಿತದ ಮುಂದುವರಿಕೆ ಹಾಗೂ ರಕ್ಷಣೆಗಾಗಿ ತನ್ನ ಅಧಿಕಾರ ಚಲಾಯಿಸಿದೆ ಎಂದು ವಾದಿಸಿತ್ತು.
ಅರ್ಜಿದಾರರು ಮುರುಘಾಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಸ್ವಾಮಿಜಿ ಪೋಕ್ಸೋ ಪ್ರಕರಣ ಸಂಬಂಧ 2022ರ ಸೆ.1ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಸದ್ಯ ಮಠದ ಉಸ್ತುವಾರಿ ಬೇರೆಯವರಿಗೆ ವಹಿಸಲಾಗಿದೆ. ಅದನ್ನೇ ನೆಪ ಮಾಡಿಕೊಂಡು ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿ ಅಧಿಕಾರ ಚಲಾಯಿಸಿದೆ ಎಂದು ಹೇಳಿದ್ದರು.
ಒಂದು ವೇಳೆ ಮಠ ಮತ್ತು ಟ್ರಸ್ಟ್ ವ್ಯವಹಾರಗಳು ಸೂಕ್ತ ರೀತಿಯಲ್ಲಿನಡೆಯುತ್ತಿಲ್ಲಎಂದಾದರೆ ಸಿವಿಲ್ ಪ್ರಕ್ರಿಯಾ ಸಂಹಿತೆ-1908ರ (ಸಿಪಿಸಿ) ಸೆಕ್ಷನ್ 92ರ ಅನುಸಾರ ಪರಿಹಾರ ಪಡೆಯಲು ಮುಕ್ತ ಅವಕಾಶಗಳಿತ್ತು. ಅದು ಬಿಟ್ಟು ಏಕಾಏಕಿ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಸಂವಿಧಾನಬಾಹಿರ ಎಂದು ವಾದ ಮಂಡಿಸಿದ್ದರು.












Click it and Unblock the Notifications