30 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ, ನಮ್ಮನ್ನು ಬಿಟ್ಟು ಯಾರು ಅಧಿಕಾರಕ್ಕೆ ಬರಲ್ಲ: ಗಾಲಿ ಜನಾರ್ದನ ರೆಡ್ಡಿ
ಚಿತ್ರದುರ್ಗ, ಮಾರ್ಚ್, 36: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸುಮಾರು 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮನ್ನು ಬಿಟ್ಟು ಯಾರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಐಮಂಗಲದಲ್ಲಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ಕೆ.ಆರ್.ಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದಕ್ಕೂ ಮೊದಲು ರೋಡ್ ಶೋ ನಡೆಸಿ, ಗ್ರಾಮದ ಕಲ್ಕುಂಟೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಇತ್ತ ಹಿರಿಯೂರು ಕ್ಷೇತ್ರಕ್ಕೆ ಮಾಜಿ ಸಚಿವ ಡಿ.ಸುಧಾಕರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಆದರೆ ಆ ಅಭ್ಯರ್ಥಿಯನ್ನು ಮಂತ್ರಿ ಮಾಡುತ್ತೇವೆ ಅಂತಾ ಹೇಳುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ
ಒಂದು ವೇಳೆ ಬಿಜೆಪಿಯಲ್ಲಿ ಹಾಲಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಟಿಕೆಟ್ ಪಡೆದು ಗೆಲುವು ಸಾಧಿಸಿದರೂ ಕೂಡ ಅವರಿಗೆ ಸಚಿವ ಸ್ಥಾನ ನೀಡುವ ಗ್ಯಾರಂಟಿನೂ ಇಲ್ಲ. ಆದರೆ ಹಿರಿಯೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಹೆಚ್.ಮಹೇಶ್ ಗೆದ್ದರೆ ಮಂತ್ರಿ ಮಾಡಿ ನಿಮ್ಮ ಕ್ಷೇತ್ರಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದರು.

ನಾನು 11 ವರ್ಷಗಳ ವನವಾಸ ಮುಗಿಸಿದ್ದೇನೆ. ಇದೀಗ ನನ್ನ ಜೀವನವನ್ನು ಜನರ ಮದ್ಯೆ ಸಾಗಿಸಲು ನಾನು ಪಕ್ಷವನ್ನು ಸ್ಥಾಪಿಸಿದ್ದೆನೆ. ನೂತನ ಪಕ್ಷ ಸ್ಥಾಪಿಸಿದ ಬಳಿಕ ತುಂಬಾ ಜನರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದವರು ಅಧಿಕಾರಕ್ಕೆ ಬಂದಿಲ್ಲ ಎಂದಿದ್ದರು. ಆದರೆ ಪಕ್ಕದ ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಿವೆ. ಅದರಂತೆಯೇ ರಾಜ್ಯದಲ್ಲಿಯೂ ಸಹ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಪ್ರತಿ ವರ್ಷ ರೈತರಿಗೆ ಖಾತೆಗೆ 15 ಸಾವಿರ ರೂಪಾಯಿ ಜಮಾ ಮಾಡಲಾಗುವುದು. ಪಂಪ್ ಸೆಟ್‌ಗಳಿಗೆ ಪ್ರತಿ ದಿನ 9 ಗಂಟೆಗೆ ಉಚಿತ ವಿದ್ಯುತ್, ಐದು ಲಕ್ಷ ಬಡ್ಡಿ ರಹಿತ ಸಾಲ ನೀಡುತ್ತೇವೆ. ಜೊತೆಗೆ ರೈತರಿಗೆ ಅನುಕೂಲವಾಗುವಂತೆ ಬೀಜ, ಗೊಬ್ಬರ ನೀಡಲು ಆಯಾ ಗ್ರಾಮಗಳಲ್ಲಿಯೇ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಬಸವೇಶ್ವರರ ರೈತ ಕೇಂದ್ರ ಸ್ಥಾಪಿಸಲಾಗುವುದು. ಜೊತೆಗೆ ನೀಡಲಾಗುವುದು ಎಂದರು.
ವಿಜಯನಗರ ಹಾಗೂ ಮೈಸೂರಿನಂತೆ ವಾಣಿವಿಲಾಸ ಜಲಾಶಯವನ್ನು ಸಹ ಪ್ರವಾಸ ಕೇಂದ್ರ ಮಾಡಲಾಗುತ್ತದೆ. ಕ್ಷೇತ್ರದ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಅಧಿಕಾರ ಬಂದು ವಿಧಾನಸೌಧ ಮೆಟ್ಟಿಲು ಹತ್ತಿದ ಕೂಡಲೇ ಭದ್ರಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಬಿಟ್ಟು ಹೋಗಿರುವ ನಾಲ್ಕು ಕೆರೆಗಳಾದ ಚಿಕ್ಕಸಿದ್ದವನಹಳ್ಳಿ, ಕುರುಮರಡಿಕೆರೆ, ಕುರುಬರಹಳ್ಳಿ, ಭರಂಪುರ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸಮಾಂತರ ನದಿ ಜೋಡಣೆ, ಏತನೀರಾವರಿ ಯೋಜನೆ ಜಾರಿಗೆ ತರಲಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ ಯೋಜನೆಗಳು, ಬಡವರಿಗೆ ಪ್ರತಿ ತಿಂಗಳು 2,500 ರೂಪಾಯಿ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿ ನೀಡಿ, ಬಟ್ಟೆ ಯಂತ್ರ ನೀಡಲಾಗುತ್ತದೆ. ಮನೆಗಳಲ್ಲಿ ಕುಳಿತು ಪ್ರತಿ ತಿಂಗಳು 30ರಿಂದ 40 ದುಡಿಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.












Click it and Unblock the Notifications