ಚಿತ್ರದುರ್ಗ ಜಿಲ್ಲೆಯ 6ರಲ್ಲಿ ಒಂದು ಕ್ಷೇತ್ರ ಗೆದ್ದು ಮರ್ಯಾದೆ ಉಳಿಸಿಕೊಂಡ ಬಿಜೆಪಿ
ಚಿತ್ರದುರ್ಗ, ಮೇ, 13: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಕೋಟೆ ನಾಡು ಚಿತ್ರದುರ್ಗದಲ್ಲಿ ಐದು ಕ್ಷೇತ್ರಗಳನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದಿದ್ದರೆ, ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ.
ಜಿಲ್ಲೆಯ ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು, ಚಿತ್ರದುರ್ಗ ಹಾಗೂ ಚಳ್ಳಕೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದರೆ, ಹೊಳಲ್ಕೆರೆ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಜಯಗಳಿಸುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದಾರೆ.

ಚಿತ್ರದುರ್ಗದಲ್ಲಿ 99,804 ಮತಗಳನ್ನು ಪಡೆಯುವ ಮೂಲಕ ಕೆ.ಸಿ.ವೀರೇಂದ್ರ ಅವರು ಗೆಲುವು ಸಾಧಿಸಿದ್ದಾರೆ. ಹೊಸದುರ್ಗ ಗೋವಿಂದಪ್ಪ ಬಿ.ಜಿ .72,570 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಮೊಳಕಾಲ್ಮೂರಿನಲ್ಲಿ ಎನ್.ವೈ.ಗೋಪಾಲಕೃಷ್ಣ 100,860 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಹಿರಿಯೂರು ಕ್ಷೇತ್ರದ ಡಿ.ಸುಧಾಕರ್ ಅವರು 61,945 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಹಾಗೆಯೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಟಿ.ರಘುಮೂರ್ತಿ ಅವರು 67,952 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿದ್ದಾರೆ. ಇನ್ನು ಹೊಳಲ್ಕೆರೆ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಅವರು 83,212 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
2018ರಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಮಾಜಿ ಸಚಿವ ಡಿ.ಸುಧಾಕರ್ ಈ ಬಾರಿ ಗೆಲುವು ಕಂಡಿದ್ದಾರೆ. ಇನ್ನು ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕನಾಗಿದ್ದ ಎನ್.ವೈ.ಗೋಪಾಲಕೃಷ್ಣ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಮತ್ತೊಂದು ಕಡೆ ಚಳ್ಳಕೆರೆ ಕ್ಷೇತ್ರದ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ಸ್ಪರ್ಧಿಸಿದ್ದ ಟಿ ರಘುಮೂರ್ತಿ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲುಕಂಡಿದ್ದ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಅವರು ಕೊನೆಯ ಚುನಾವಣೆ ಎಂದುಕೊಂಡು ಗೆಲುವಿನ ಹರ್ಷ ಕಂಡರು.
ಇನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದ್ದು ಕಾಂಗ್ರೆಸ್ ಅಭ್ಯರ್ಥಿ ಕ್ಯಾಸಿನೊ ದೊರೆ ಕೆಸಿ ವೀರೇಂದ್ರ ಪಪ್ಪಿ ಗೆಲುವಿನ ಕೇಕೆ ಹಾಕಿದ್ದಾರೆ. ಮತ್ತೊಂದೆಡೆ ಹೊಳಲ್ಕೆರೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಮಾಜಿ ಸಚಿವ ಹೆಚ್.ಆಂಜನೇಯ ವಿರುದ್ಧ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಜಯ ಸಾಧಿಸಿದ್ದಾರೆ.












Click it and Unblock the Notifications