ಹಿರಿಯೂರು ಕ್ಷೇತ್ರ ವಶಪಡಿಸಿಕೊಳ್ಳುವತ್ತ ಜೆಡಿಎಸ್ ಚಿತ್ತ: ಜೆಡಿಎಸ್ ನಾಯಕರ ಒಗ್ಗಟ್ಟು ಪ್ರದರ್ಶನ
ಚಿತ್ರದುರ್ಗ, ಮೇ 06: ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿದ್ದ ಹಿರಿಯೂರು ವಿಧಾನಸಭಾ ಕ್ಷೇತ್ರವನ್ನು ಪುನಃ ಜೆಡಿಎಸ್ ಹಿಡಿತಕ್ಕೆ ತೆಗೆದುಕೊಳ್ಳಲು ಅಭ್ಯರ್ಥಿ ಎಂ. ರವೀಂದ್ರಪ್ಪ ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಜಾಸ್ತಿ ಇದ್ದುದರಿಂದ ಟಿಕೆಟ್ ಘೋಷಣೆ ಸ್ವಲ್ಪ ವಿಳಂಬವಾಗಿತ್ತು, ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಘೋಷಣೆಯಾಯಿತು.
ಟಿಕೆಟ್ ಘೋಷಣೆ ವಿಳಂಬದಿಂದ ಜೆಡಿಎಸ್ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ಮತ್ತೊಂದು ಕಡೆ ಅಭ್ಯರ್ಥಿಗೆ ರಾಜಕೀಯ ಅನುಭವ ಇಲ್ಲದಿದ್ದರೂ ಸಹ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅನುಭವದಿಂದಲೇ, ಕಡಿಮೆ ಅವಧಿಯಲ್ಲಿ ಜೆಡಿಎಸ್ ಮತದಾರರ ಮೊಗದಲಿ ಕಳೆಗುಂದುವಂತೆ ಮಾಡಿದ್ದಾರೆ.

ಅನ್ಯ ಪಕ್ಷಗಳಿಗೆ ಸೇರಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರನ್ನ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಜೊತೆಗೆ, ನೂತನ ಜಿಲ್ಲಾಧ್ಯಕ್ಷರ ನೇಮಕ ಹಾಗೂ ಮಾಜಿ ಜಿಪಂ ಸದಸ್ಯ ದ್ಯಾಮೆಗೌಡ, ನಗರಸಭೆ ಹಾಲಿ ಸದಸ್ಯ ವೈಪಿಡಿ ದಾದಾಪೀರ್, ಕೃಷಿಕ ಸಮಾಜದ ಅಧ್ಯಕ್ಷ ಹೆಚ್ ಆರ್ ತಿಮ್ಮಯ್ಯ ಸೇರಿ ಹಲವು ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡು ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದಿದೆ.
2008ರಲ್ಲಿ ಪಕ್ಷೇತರು, 2013ರಲ್ಲಿ ಕಾಂಗ್ರೆಸ್ ಹಾಗೂ 2018ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಈ ಮೂರು ಗೆಲುವು ಸಹ ಹೊರಗಿನ ಅಭ್ಯರ್ಥಿಗಳು. ಸತತ ಮೂರು ಬಾರಿ ಸೋಲುಕಂಡಿರುವ ಜೆಡಿಎಸ್ ಸೋಲಿನ ಎದೆಗುಂದದೆ ಈ ಬಾರಿ ಗೆಲುವಿನ ಹೊಸ್ತಿಲಲ್ಲಿ ನಿಂತಿದೆ.
ಇತ್ತ ಕಾಂಗ್ರೆಸ್ ಪಕ್ಷದಿಂದ ಸ್ಟಾರ್ ಪ್ರಚಾರಕರಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಿ ಪ್ರಚಾರ ನಡೆಸಿದ್ದಾರೆ. ಇದರ ಜೊತೆಗೆ ಬೇರೆ ರಾಜ್ಯದ ಶಾಸಕರನ್ನು ಕರೆಸಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಎ ನಾರಾಯಣಸ್ವಾಮಿ, ರಾಜ್ಯ ನಾಯಕ ಬಿವೈ ವಿಜಯೇಂದ್ರ ಸೇರಿದಂತೆ ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳ ಬಿಜೆಪಿ ನಾಯಕರು ಪ್ರಚಾರ ಕೈಗೊಂಡಿದ್ದಾರೆ.

ಇತ್ತ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎರಡು ದಿನದ ಹಿಂದೆ ಪಂಚರತ್ನ ಯಾತ್ರೆ ಕಾರ್ಯಕ್ರಮಕ್ಕೆ ಬಂದು ಒಂದು ಗಂಟೆ ಕಾರ್ಯಕ್ರಮ ನಡೆಸಿ ಮತಪ್ರಚಾರ ನೆಡೆಸಿದ್ದು, ಬಿಟ್ಟರೆ ಬೇರೆ ಯಾರು ಸಹ ಬಂದಿಲ್ಲ. ಆದರೆ ನಮಗೆ ನಾವೇ ಸ್ಟಾರ್ ಪ್ರಚಾರಕರು ಎಂದುಕೊಂಡಿರುವ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಅಬ್ಬರದ ಪ್ರಚಾರದ ಮೂಲಕ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಹಗಲು ಇರುಳು ಎನ್ನದೆ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಂತೆ ಮತಯಾಚನೆ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ಉಂಟಾಗಿದ್ದಿದ್ದರಿಂದ ಜೆಡಿಎಸ್ ಕಥೆ ಮುಗಿಯಿತು ಎನ್ನುತ್ತಿದ್ದವರಿಗೆ ಜೆಡಿಎಸ್ ಪಕ್ಷ ಪುಟಿದೇಳುವ ಮೂಲಕ ವಿರೋಧಿಗಳಿಗೆ ಸರಿಯಾದ ಉತ್ತರ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಾಮಪತ್ರ ಸಲ್ಲಿಕೆ ವೇಳೆ ಹಾಗೂ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗೆ ಜೇನು ನೊಣಗಳಂತೆ ಹಾರಿ ಬಂದಂತೆ, ಬಂದಿರುವ ಜನಸಾಗರವೇ ಸಾಕ್ಷಿಯಾಗಿದೆ. ಇದನ್ನು ನೋಡಿರುವ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಇನ್ನಷ್ಟು ಉತ್ಸಾಹ ಹುರಿದುಂಬಿಸಿದೆ.
ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಭರ್ಜರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಅಭ್ಯರ್ಥಿಯನ್ನು ಎತ್ತಿನಗಾಡಿ, ಟ್ರಾಕ್ಟರ್, ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ಆರತಿ ಬೆಳಗಿ ಸ್ವಾಗತಿಸಿ, ಬೆಂಬಲ ಸೂಚಿಸುವುದನ್ನು ನೋಡಿದರೆ ಜೆಡಿಎಸ್ ಗೆಲುವಿನ ಕಡೆ ಮುಖಮಾಡಿದೆ ಎನ್ನಲಾಗುತ್ತಿದೆ.

ಒಗ್ಗಟ್ಟು ಪ್ರದರ್ಶಿಸಿದ ಜೆಡಿಎಸ್ ನಾಯಕರು
ನನಗೆ ನನಗೆ ಟಿಕೆಟ್ ಎಂದುಕೊಂಡು ನಾನೊಂದು ಕಡೆ, ನೀನೊಂದು ಕಡೆ ಎಂದಿದ್ದವರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಮಾಜಿ ಜಿಪಂ ಅಧ್ಯಕ್ಷ ಎಂ. ಜಯಣ್ಣ, ಎಂ. ರವೀಂದ್ರಪ್ಪ, (ಅಭ್ಯರ್ಥಿ) ಶಿವಪ್ರಸಾದ್ ಗೌಡ ಇದೀಗ ಒಟ್ಟುಗೂಡಿ ಚುನಾವಣೆ ಪ್ರಚಾರದಲ್ಲಿದ್ದಾರೆ. ಇವರ ಜೊತೆಗೆ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ ಯಶೋಧರ, ಒಕ್ಕಲಿಗರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ತಾಪ ಸದಸ್ಯ ಶಂಕರಮೂರ್ತಿ ಒಟ್ಟಾಗಿ ಕೆಲಸ ಮಾಡುತ್ತಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ತಂದಿದೆ. ಇದಲ್ಲದೆ ಕಾಡುಗೊಲ್ಲ ಸಮುದಾಯ ಮುಖಂಡರಾದ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಜೆಜಿ ಹಳ್ಳಿ ಮಂಜುನಾಥ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಬಿದರಿಕೆರೆ ಚಿದಾನಂದ್, ಓಣಿಹಟ್ಟಿ ಜಯಣ್ಣ ಹಾಗೂ ಕಾಡುಗೊಲ್ಲ ಸಮುದಾಯದ ಒಂದಿಷ್ಟು ಮತಗಳು ಜೆಡಿಎಸ್ ಪಕ್ಷಕ್ಕೆ ಇರುವುದರಿಂದ ಅಭ್ಯರ್ಥಿಗೆ ಆನೆ ಬಲ ಬಂದಂತಾಗಿದೆ.
ನಿವೃತ್ತ ಮುಖ್ಯ ಚೀಫ್ ಇಂಜಿನಿಯರ್ ಅಧಿಕಾರಿಯಾಗಿರುವ ರವೀಂದ್ರಪ್ಪ ಅವರಿಗೆ ವಾಕ್ ಚಾತುರ್ಯ ಇಲ್ಲ ಎನ್ನಲಾಗುತ್ತಿದೆ. ಆದರೆ ಮತಪ್ರಚಾರಕ್ಕೆ ಹೋದಲ್ಲೆಲ್ಲ ಮೈಕ್ ಹಿಡಿದು ಅಬ್ಬರಿಸುತ್ತಿದ್ದಾರೆ. ಮೊದ ಮೊದಲಿಗೆ ಮಾತಾಡಲು ಹಿಂದೇಟು ಹಾಕುತ್ತಿದ್ದ ಅಭ್ಯರ್ಥಿ ಇದೀಗ ಮೈಕ್ ಹಿಡಿದರೆ ಸಾಕು ನಿರರ್ಗಳವಾಗಿ ಭಾಷಣದಲ್ಲಿ ಅಬ್ಬರಿಸಿ, ಹೊರಗಿನವರ ಆಸೆ ಆಮಿಷಗಳಿಗೆ ಬಲಿಯಾಗದೆ, ಹೊರಗಿನವರನ್ನು ಹೊರಗಡೆ ಇಟ್ಟು, ಮೂರು ಬಾರಿ ನಮ್ಮ ಪಕ್ಷವನ್ನು ಸೋಲಿಸಿದ್ದಿರಿ, ಇದೊಂದು ಬಾರಿ ಅವಕಾಶ ನೀಡುವ ಮೂಲಕ, ನಿಮ್ಮ ಈ ನೆಲದ ಮಣ್ಣಿನ ಮಗನಿಗೆ ಮತ ನೀಡಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಮತ್ತೊಂದು ಕಡೆ ಅಭ್ಯರ್ಥಿ ಮತಪ್ರಚಾರದಲ್ಲಿದ್ದಾಗ ಜೆಡಿಎಸ್ ಅಭ್ಯರ್ಥಿ ಎಂ ರವೀಂದ್ರಪ್ಪ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೆ ಧೃತಿಗೆಡದೆ ನನ್ನ ಮನೆಯಲ್ಲಿ ಅಕ್ರಮವಾಗಿ ಕೂಡಿಟ್ಟಿರುವುದು ಏನು ಇಲ್ಲವೆಂದು ಚುನಾವಣೆಯ ಕಡೆ ಗಮನ ಹರಿಸಿ, ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳುವತ್ತ ದಾಪುಗಾಲು ಇಟ್ಟಿದ್ದಾರೆ ಜೆಡಿಎಸ್ ಅಭ್ಯರ್ಥಿ.
ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ತ್ರಿಕೋನ ಸ್ಪರ್ಧೆಯಿಂದ ಏರ್ಪಟ್ಟಿದ್ದು ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿ ನಡೆಯಲಿದೆ ಎಂದು ಎರಡು ಪಕ್ಷಗಳ ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಆದರೆ ಯಾರಿಗೆ ಗೆಲುವು ಎಂಬುದನ್ನು ಮೇ 13ರ ತನಕ ಕಾದು ನೋಡಬೇಕಿದೆ.












Click it and Unblock the Notifications