ವರಿಷ್ಠರ ಸೂಚನೆ ಮೇರೆಗೆ ಮೊಳಕಾಲ್ಮೂರಿನಿಂದ ಹೊರಟ ಜನಾರ್ದನ ರೆಡ್ಡಿ!
ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ), ಏಪ್ರಿಲ್ 30: ಮಾಜಿ ಸಚಿವ- ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಯ ಕೇಂದ್ರ ವರಿಷ್ಠರ ಹುಕುಂ ಮೇರೆಗೆ ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಎದ್ದು ನಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಆಪ್ತ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರವಾಗಿ ಜನಾರ್ದನ ರೆಡ್ಡಿ ಅವರು ಮೊಳಕಾಲ್ಮೂರಿನಲ್ಲಿ ಪ್ರಚಾರ ನಡೆಸಿದ್ದರು. ಶ್ರೀರಾಮುಲು ಅಲ್ಲಿಂದ ನಾಮಪತ್ರ ಸಲ್ಲಿಸುವ ವೇಳೆ ಹಾಗೂ ರೋಡ್ ಶೋ ಸಂದರ್ಭದಲ್ಲಿ ಸ್ವತಃ ಜನಾರ್ದನ ರೆಡ್ಡಿ ಹಾಜರಿದ್ದರು.
ಯಾವಾಗ ಬಿಜೆಪಿಯ ಚುನಾವಣೆ ಪ್ರಚಾರದಲ್ಲಿ ಜನಾರ್ದನ ರೆಡ್ಡಿ ಕಾಣಿಸಿಕೊಳ್ಳಲು ಆರಂಭಿಸಿದರೋ ಅದೇ ವಿಚಾರವಾಗಿ ಪ್ರತಿ ಪಕ್ಷವಾದ ಕಾಂಗ್ರೆಸ್ ವಾಗ್ದಾಳಿ ಆರಂಭಿಸಿತು. ಬಳ್ಳಾರಿ ಗಣಿ ಹಗರಣದ ಪ್ರಮುಖ ಆರೋಪಿ ಜನಾರ್ದನ ರೆಡ್ಡಿ. ಆ ಕಾರಣಕ್ಕೆ ಸಿಬಿಐನಿಂದ ಜನಾರ್ದನ ರೆಡ್ಡಿಯನ್ನು ಬಂಧಿಸಲಾಗಿತ್ತು. ಸದ್ಯಕ್ಕೆ ಅವರು ಬಳ್ಳಾರಿ ಪ್ರವೇಶಿಸಬಾರದು ಎಂಬ ಷರತ್ತಿನ ಜಾಮೀನಿನ ಮೇಲೆ ಇದ್ದಾರೆ.

ಕಳೆದ ಮಾರ್ಚ್ ನಲ್ಲಿ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.
ಆದರೆ, ಬಳ್ಳಾರಿ ಚಿತ್ರದುರ್ಗದ ಗಡಿ ಭಾಗದಲ್ಲಿ ಒಂದು ಮನೆ ಬಾಡಿಗೆಗೆ ತೆಗೆದುಕೊಂಡು, ಶ್ರೀರಾಮುಲು ಪರವಾಗಿ ಪ್ರಚಾರ ಆರಂಭಿಸಿದ್ದರು.












Click it and Unblock the Notifications