ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಈಶ್ವರಾನಂದಪುರಿ ಸ್ವಾಮೀಜಿ
ಚಿತ್ರದುರ್ಗ, ಆಗಸ್ಟ್ 10: ನಿಪ್ಪಾಣಿಗೆ ಬೇರೆ ಕಾಲೇಜು ಕೊಡಿ, ಅದಕ್ಕೆ ಬೇಕಾಗಿರುವ ಹಣವನ್ನು ನಾವು ಸ್ವಾಮೀಜಿಗಳು ಭಿಕ್ಷೆ ಬೇಡಿ ಕೊಡುತ್ತೇವೆ ಎಂದು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮಿ ರಾಜ್ಯ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.
Recommended Video
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಆದೇಶ ಮಾಡಲಾಗಿದೆ. ಕಾಲೇಜು ಸ್ಥಳಾಂತರ ಆದೇಶವನ್ನು ರದ್ದು ಮಾಡುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸಿದ್ದರು.
ಇದಕ್ಕೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಬದಲಿಸದ ಕಾರಣ ಇಂದಿನಿಂದ ತುರುವನೂರುನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಈಶ್ವರಾನಂದ ಶ್ರೀಗಳು, ನಿಮ್ಮನ್ನು ಪಾದಯಾತ್ರೆಯಲ್ಲಿ ಬಂಧಿಸಿದರೆ ನಾವು ನಿಮ್ಮ ಜೊತೆ ಬರುತ್ತೇವೆ ಎಂದು ಹೇಳಿದರು.

ಕೋವಿಡ್ ಹೋದರೂ ಕಾಲೇಜು ಹೋಗಲ್ಲ
ತುರುವನೂರು ಹೋಬಳಿಯಲ್ಲಿ ಕಾಲೇಜು ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಕೋವಿಡ್ ಹೊರಟು ಹೋಗುತ್ತದೆ, ಆದರೆ ಸರ್ಕಾರ ಮಾಡಿರುವ ಕಾಲೇಜು ಸ್ಥಳಾಂತರ ಹೋಗುವುದಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಇದನ್ನು ಸರಿ ಮಾಡಬಹುದಿತ್ತು, ಆದರೆ ಅವರು ಮಾಡಿಲ್ಲ. ಶಾಸಕ ರಘುಮೂರ್ತಿ ಅವರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಅಭಿವೃದ್ದಿ ಕೆಲಸಕ್ಕೆ ಸರ್ಕಾರ ಅಡ್ಡಿ ಮಾಡಬಾರದು. ಸರ್ಕಾರವೂ ಕೂಡಲೇ ಸ್ಥಳಾಂತರ ಮಾಡಿರುವುದನ್ನು ರದ್ದು ಮಾಡಿ ಎಂದು ಶ್ರೀಗಳು ಸರ್ಕಾರಕ್ಕೆ ಎಚ್ಚರಿಸಿದರು.

ಬೆಂಗಳೂರು ಚಲೋ
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಮಾರಕ ಮಹಾತ್ಮ ಗಾಂಧಿ ದೇವಸ್ಥಾನದ ಆವರಣದಿಂದ ಬೆಂಗಳೂರು ಚಲೋ ಕೈಗೊಳ್ಳಲಾಯಿತು. ಹಿಂದುಳಿದ ದಲಿತ ಮಠಾಧೀಶರಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಆದರೆ ಆರಂಭದಲ್ಲೇ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮಾಜಿ ಶಾಸಕ ಬಿ.ಜಿ ಗೋವಿಂದಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರ ಬಂಧಿಸಲಾಗಿದೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕ್ಷುಲ್ಲಕ ರಾಜಕೀಯವೆಂದ ಸಿದ್ದರಾಮಯ್ಯ
ಶಾಸಕರ ಬಂಧನಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಚಿತ್ರದುರ್ಗ ಜಿಲ್ಲೆ ತುರವನೂರು ಪ್ರಥಮ ದರ್ಜೆ ಕಾಲೇಜನ್ನು, ಹಠಾತ್ತನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ನಾನು 2014 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸ್ಥಾಪನೆಯಾಗಿರುವುದನ್ನು ಸ್ಥಳಾಂತರಗೊಳಿಸಿರುವುದು ಕ್ಷುಲ್ಲಕ ರಾಜಕೀಯವೆಂದು ಜರೆದಿದ್ದಾರೆ.

ಶಿಕ್ಷಣ ವಂಚಿತರನ್ನಾಗಿ ಮಾಡುವುದು ದುಷ್ಟತನ
2014 ರಲ್ಲಿ ಸ್ಥಾಪನೆಯಾದ ನೂತನ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅಣಿಯಾಗಿದ್ದರು. ಈ ಹಂತದಲ್ಲಿ ಗ್ರಾಮೀಣ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದು ದುಷ್ಟತನ. ತಕ್ಷಣವೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಸ್ಥಳಾಂತರದ ಆದೇಶ ವಾಪಸು ಪಡೆಯಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications