Vani vilasa Sagara Dam: ಇತಿಹಾಸ ಪ್ರಸಿದ್ಧ ಮಾರಿಕಣಿವೆ ಡ್ಯಾಂ ಕೋಡಿ ಬೀಳಲು ಕ್ಷಣಗಣನೆ ಆರಂಭ; ನೀರಿನ ಮಟ್ಟ ಎಷ್ಟಿದೆ?
Vani vilasa Sagara Dam: ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಒಳಹರಿವು ಮುಂದುವರೆದಿದ್ದು, ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳುವ ಸನಿಹದಲ್ಲಿದೆ. ಹಾಗಾದರೆ ಇದೀಗ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ನೀಡಲಾಗಿದೆ ಗಮನಿಸಿ.
ಇಂದಿನ ವರದಿಯಲ್ಲಿ ಭದ್ರಾ ಜಲಾಶಯದಿಂದ 577 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ 128.65 ಅಡಿ ತಲುಪಿದೆ. ಡ್ಯಾಂ ಕೋಡಿ ಬೀಳಲು 1.45 ಅಡಿ ಅಷ್ಟೇ ನೀರು ಬರಬೇಕಿದೆ. ಮತ್ತೊಂದೆಡೆ ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ 2025ರ ಜನವರಿವರೆಗೂ ನೀರು ಹರಿಸುವುದನ್ನು ಮುಂದುವರಿಸುವಂತೆ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಹೊರಬಿದ್ದಿರುವುದು ತಾಲೂಕಿನ ರೈತರ ಕೋಡಿ ಬೀಳುವ ಕನಸು ನನಸಾಗುವ ಕಾಲ ಹತ್ತಿರ ಬಂದಂತಾಗಿದೆ. ಜಿಲ್ಲೆಯ ಹಲವು ತಾಲೂಕುಗಳ ಕುಡಿಯುವ ನೀರಿನ ದಾಹ ನೀಗಿಸುವ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಇನ್ನೂ ಒಂದು ಟಿಎಂಸಿ ನೀರಿನ ಅವಶ್ಯಕತೆ ಇದೆ. ಮತ್ತೆ ನೀರು ಹರಿಸಲು ಆದೇಶ ಬಂದಿದ್ದು, ಜಿಲ್ಲೆಯ ಜನರ ಮೊಗದಲ್ಲಿ ಆಶಾಭಾವನೆ ಮೂಡಿಸಿದೆ.
ಆರೋಪಗಳಿಗೆ ತೆರೆ ಎಳೆಯಲಿರುವ ಸಚಿವರು: ವಾಣಿ ವಿಲಾಸ ಸಾಗರ ಜಲಾಶಯ ಮೂರನೇ ಬಾರಿ ಕೋಡಿ ಬೀಳುವ ಕಾಲ ತೀರಾ ಸನಿಹಕ್ಕೆ ಬರುತ್ತಿರುವ ಹೊತ್ತಲ್ಲಿ, ಈ ಸಂದರ್ಭವನ್ನು ಬಹಳ ನಾಜೂಕಾಗಿ ರಾಜಕೀಯ ಲಾಭ ಮತ್ತು ಹಳೆಯ ಆಪಾದನೆಗಳನ್ನು ತೊಳೆದುಕೊಳ್ಳುವುದಕ್ಕೆ ಬಳಸಿಕೊಳ್ಳುವ ಮೂಲಕ ಸಚಿವರು ಮತ್ತೊಂದು ಚಾಕಚಕ್ಯತೆಯ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ.
2018ರ ಹಿಂದಿನ ಅವಧಿಯಲ್ಲಿ ತಾಲೂಕಿನಲ್ಲಿ ಬರ ಆವರಿಸಿ ಲಕ್ಷಾಂತರ ತೆಂಗಿನಮರಗಳು ಒಣಗಿ ಹೋಗಿದ್ದವು. 2018ರ ಚುನಾವಣೆಯಲ್ಲಿ ಇದೇ ವಿಷಯ ಬಹುದೊಡ್ಡ ಚರ್ಚೆಯಾಗಿ ಸಚಿವರ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ನಂತರ ಗೆದ್ದ ಬಿಜೆಪಿ ಶಾಸಕರ ಅವಧಿಯಲ್ಲಿ 2022ರಲ್ಲಿ ವಾಣಿ ವಿಲಾಸ ಸಾಗರ ಜಲಾಷಯ ಕೋಡಿ ಬಿದ್ದಿತ್ತು.
ಈ ವೇಳೆ ಅವರ ಪಕ್ಷ ಮತ್ತು ಅವರ ಬೆಂಬಲಿಗರು ಪ್ರಕೃತಿ ನಿಯಮದಂತೆ ಕೋಡಿ ಬಿದ್ದಿದೆ ಎಂಬುದನ್ನು ಮರೆತು ಕಾಲ್ಗುಣ, ಭಾಗೀರಥಿ ಎಂದೆಲ್ಲಾ ಪ್ರಚಾರ ಪಡೆದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಳೆ ಪ್ರಮಾಣ ಕಡಿಮೆ ಹಾಗೂ ಬರ ಇರುತ್ತದೆ ಎಂಬ ಅಪಪ್ರಚಾರ ತೊಳೆಯಲು ಇದೀಗ ಸಚಿವರು ತಮ್ಮ ಅಧಿಕಾರದ ಅವಧಿಯಲ್ಲೂ ಜಲಾಶಯ ಕೋಡಿ ಬೀಳಲಿದ್ದು, ಹಿಂದಿನ ಎಲ್ಲಾ ಅಪ ಪ್ರಚಾರಗಳಿಗೂ ತೆರೆ ಎಳೆಯುವ ಮುಂಗನಸ್ಸಿನಲ್ಲಿರುವಂತಿದೆ.
ಈಗಾಗಲೇ ಕೋಡಿ ಬಿದ್ದಾಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ ಬಾಗಿನ ಬಿಡಿಸಿ ದಶಕಗಳ ಅಪಪ್ರಚಾರಕ್ಕೆ ಒಂದು ತೆರೆ ಎಳೆಯಲಾಗುವುದು ಎಂದು ಕಾಂಗ್ರೆಸ್ ವಲಯದಲ್ಲೇ ಗುಸುಗುಸು ಎನ್ನುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾರ ಅವಧಿ, ಯಾರ ಆಡಳಿತ ಆದರೇನು ಕೋಡಿ ಬಿದ್ದು ವರ್ಷವೆಲ್ಲಾ ನೀರಿಗೆ ಬರ ಇರದಿದ್ದರೆ ಸಾಕು ಎಂಬುದು ರೈತರ, ಸಾರ್ವಜನಿಕರ ಅಭಿಪ್ರಾಯವಾಗಿದೆ.
ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ 2025ರ ಜನವರಿವರೆಗೂ ನೀರು ಹರಿಸುವಂತೆ ಆದೇಶ ಮಾಡಿರುವುದು ಸ್ವಾಗತಾರ್ಹ. ಭದ್ರಾದಿಂದ ಪ್ರತಿದಿನ 700 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇನ್ನು ಒಂದೂವರೆ ಅಡಿ ನೀರು ಜಲಾಶಯಕ್ಕೆ ಹರಿದು ಬಂದರೆ ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಆದರೆ ಸಚಿವರು ತಮ್ಮ ಕಾಲದಲ್ಲಿ ಕೋಡಿ ಬೀಳಿಸುವ ಭಾಗೀರಥ ಪಟ್ಟಕ್ಕಾಗಿ ಈ ಆದೇಶ ಮೀಸಲಾಗಿರಬಾರದು. ಇದು ಮುಂದಿನ ದಿನಗಳಲ್ಲೂ ಶಾಶ್ವತವಾಗಿರಬೇಕು. ತಾಲ್ಲೂಕಿನಲ್ಲಿ ಮಳೆಯಾಗದ ಸಂದರ್ಭದಲ್ಲೂ ಭದ್ರಾದಿಂದ ವಾಣಿ ವಿಲಾಸ ಸಾಗರ ಡ್ಯಾಂಗೆ ನೀರು ಹರಿಯುವಂತಿರಬೇಕು. ಹಿರಿಯೂರು ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ಮತ್ತು ಕೆರೆಗಳಿಗೆ ನೀರು ಹರಿಸಬೇಕು. ಡ್ಯಾಂ ಕೋಡಿ ಬಿದ್ದ ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.












Click it and Unblock the Notifications