ಹಿರಿಯೂರು; ಈ ಬಡ ಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ
ಚಿತ್ರದುರ್ಗ, ಮೇ 26; ಮನೆಯಲ್ಲಿ ಕಿತ್ತು ತಿನ್ನುವ ಬಡತನ. ವಾಸಕ್ಕೆ ಯೋಗ್ಯವಾದ ಮನೆ ಇಲ್ಲ. ರೇಷನ್ ಕಾರ್ಡ್ ಸಿಕ್ಕಿಲ್ಲ. ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪತಿಯನ್ನು ಕಳೆದುಕೊಂಡು ಪತ್ನಿ ಮತ್ತು ಮಕ್ಕಳು ದಿಕ್ಕು ತೋಚದಂತಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ 30ನೇ ವಾರ್ಡ್‌ನ ಹರಿಶ್ಚಂದ್ರ ಘಾಟ್‌ನಲ್ಲಿ ವಾಸಿಸುವ ಬಡ ಕುಟುಂಬದ ನೋವಿನ ಕಥೆ ಇದು. ಹಿರಿಯೂರು ನಗರದ ಜಾಹಿದ್ ಮತ್ತು ಚಳ್ಳಕೆರೆಯ ರಾಜು 10 ವರ್ಷಗಳ ಹಿಂದೆ ವಿವಾಹವಾಗಿದ್ದರು.
ಈ ದಂಪತಿಗೆ 4 ವರ್ಷದ ಒಂದು ಗಂಡು, 8 ಮತ್ತು 6 ವರ್ಷದ ಎರಡು ಹೆಣ್ಣು ಮಕ್ಕಳಿದ್ದಾರೆ. ಕಿತ್ತು ತಿನ್ನುವ ಬಡತನದಲ್ಲೇ ಕುಟುಂಬ ಜೀವನ ನಿರ್ವಹಣೆ ಮಾಡುತ್ತಿತ್ತು. ಕುಟುಂಬಕ್ಕೆ ಆಧಾರವಾಗಿದ್ದ ರಾಜು ಕ್ಯಾನ್ಸರ್ ಮತ್ತು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದರು.

ಪತಿಯನ್ನು ಉಳಿಸಿಕೊಳ್ಳಲು ಜಾಹಿದ್ ಪಣತೊಟ್ಟು ಒಂದಿಷ್ಟು ಸಾಲ ಮಾಡಿ, ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಚಿಕಿತ್ಸೆ ಕೊಡಿಸಿದ್ದರು. ರಾಜು ಐದು ದಿನಗಳ ಹಿಂದೆ ಮೃತಪಟ್ಟಿದ್ದು, ಕುಟುಂಬ ದಿಕ್ಕು ತೋಚದಂತಾಗಿದೆ.
ತಂದೆಯ ಶವದ ಪಕ್ಕದಲ್ಲಿ ನಿಂತು ನೋಡುತ್ತಿರುವ ಏನು ಅರಿಯಾದ ಪುಟಾಣಿ ಮಕ್ಕಳನ್ನು ನೋಡಿದರೆ ಜನರು ಸಹ ಮುರುಕ ಪಟ್ಟರು. ಇವರ ಕುಟುಂಬಕ್ಕೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲ. ವಾಸಿಸಲು ಸ್ವಂತವಾದ ಮನೆಯಿಲ್ಲ.
ಕೋವಿಡ್ ಸಂದರ್ಭದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿರುವ ಬಡ ಕುಟುಂಬ ಸಹಾಯದ ನಿರೀಕ್ಷೆಯಲ್ಲಿದೆ. ಸರ್ಕಾರದಿಂದ ಸೂಕ್ತ ಸಹಕಾರ ಸಿಗುವುದೇ ಕಾದು ನೋಡಬೇಕಿದೆ.
ಸಹಾಯ ಮಾಡಲು ದಾನಿಗಳು ಮುಂದೆ ಬಂದರೆ ಕುಟುಂಬಕ್ಕೆ ನೆರವಾಗಲಿದೆ. ಕೋವಿಡ್ ಸಂದರ್ಭದಲ್ಲಿ ಆಹಾರದ ಕಿಟ್ ವಿತರಣೆ ಮಾಡುವವರು ಇವರಿಗೆ ಸಹಾಯ ಮಾಡಲಿದ್ದಾರೆಯೇ ಕಾದು ನೋಡಬೇಕು. ಸ್ಥಳೀಯ ಆಡಳಿತ ಕುಟುಂಬಕ್ಕೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿ ಕೊಡಲು ನೆರವಾಗಬೇಕಿದೆ.












Click it and Unblock the Notifications