ಹಿರಿಯೂರು ತಾಲ್ಲೂಕಿನಾದ್ಯಂತ ಗುಡುಗು ಸಹಿತ ಮಳೆರಾಯನ ಆರ್ಭಟ
ಹಿರಿಯೂರು, ಮೇ, 07: ಇಷ್ಟು ದಿನ ಮಳೆಯಿಲ್ಲದೆ ಬಿಸಿಲಿನ ಬೇಗೆಯಿಂದ ಬೆಂದಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಂಗಳವಾರ (ಮೇ 07) ಸುಮಾರು ಸಂಜೆ 6:15ರ ವೇಳಗೆ ಮಳೆರಾಯ ತಂಪೆರೆದಿದ್ದಾನೆ.
ಇಂದು ಸಂಜೆಯಾಗುತ್ತಿದ್ದಂತೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಾದ್ಯಂತ ಗುಡುಗು ಸಹಿತ ವರ್ಷದ ಮೊದಲ ಮಳೆರಾಯ ಆರ್ಭಟಿಸಿದ್ದಾರೆ. ಅರ್ಧ ಗಂಟೆಯಿಂದ ಮಳೆರಾಯ ಅಬ್ಬರಿಸಿದ್ದು, ಇದರಿಂದ ಇಲ್ಲಿನ ಜನರು, ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.

ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದೆ ಕಂಗೆಟ್ಟು, ಮೋಡ ನೋಡುತ್ತಿದ್ದ ಜನತೆಗೆ ಮಂಗಳವಾರ ಸಂಜೆ ವರುಣ ದೇವ ಕಣ್ತೆರೆಯುವ ಮೂಲಕ ಪ್ರಸಕ್ತ ಸಾಲಿನಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇನ್ನು ಮಳೆ ಸುರಿದ ಹಿನ್ನೆಲೆ ಸುಡು ಬಿಸಿಲಿನ ತಾಪಕ್ಕೆ ಹಿರಿಯೂರಿನ ಜನತೆ ಕೊಂಚ ನಿರಾಳರಾಗಿದ್ದಾರೆ. ತಾಲೂಕಿನ ಜನರ ಮನದಲ್ಲಿ ಕೊನೆಗೂ ಮಳೆ ಬಂತಲ್ಲ ಎಂಬ ಆಶಾಭಾವನೆ ಮೂಡಿತು.
ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ: ತಾಲ್ಲೂಕಿನಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಅಡಿಕೆ, ತೆಂಗು, ಬಾಳೆ ಸೇರಿದಂತೆ ಇನ್ನೀತರ ತೋಟಗಾರಿಕೆ ಬೆಳೆಗಳು ಒಣಗಿ ಹೋಗಿವೆ. ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೊರೆ ಹೋಗಿದ್ದರು. ಅಡಿಕೆ ಗಿಡಗಳಿಗೆ ಟ್ಯಾಂಕರ್ ನೀರು ಬಿಡಿಸುವ ಮೂಲಕ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇದಲ್ಲದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮ ಪಂಚಾಯಿತಿಯಿಂದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತದೆ. ಇನ್ನು ತೋಟಗಳಲ್ಲಿ ಬೋರ್‌ವೆಲ್ ಅಂತರಜಾಲ ಮಟ್ಟ ಕುಸಿದಿದೆ. ಸಾವಿರಾರು ಅಡಿಗಳಷ್ಟು ಬೋರ್ ಕೊರೆಸಿದರು ನೀರು ಸಿಗುತ್ತಿಲ್ಲ. ತಾಲೂಕಿನ ಗಾಯತ್ರಿ ಜಲಾಶಯದಲ್ಲಿ ನೀರು ಖಾಲಿಯಾಗಿದ್ದರಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೋರನಕಣಿವೆ ಜಲಾಶಯದಿಂದ ನೀರು ಹರಿಸಿದ್ದರು.












Click it and Unblock the Notifications