ಕೇಂದ್ರದ ಕಡೆ ಬೆರಳು ತೋರಿಸುವುದು ಕಾಂಗ್ರೆಸ್ ಬೇಜವಾಬ್ದಾರಿಯ ಪರಮಾವಧಿ - ಕಾಗೇರಿ
ಚಿತ್ರದುರ್ಗ, ನವೆಂಬರ್ 07: ಕೆಲಸ ಮಾಡದೇ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡುವ ಕಾಂಗ್ರೆಸ್ ಸರ್ಕಾರದ ಕೆಲಸ ಬೇಜವಾಬ್ದಾರಿತನದ ಪರಮಾವಧಿ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಚಿತ್ರದುರ್ಗ ಜಿಲ್ಲೆಗೆ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರ ನೇತೃತ್ವದ ಬರ ಅಧ್ಯಯನ ತಂಡ ಆಗಮಿಸಿದ್ದು, ಜಿಲ್ಲೆಯ ಕೊಳಾಳ್ ಗ್ರಾಮದಿಂದ ಬರ ಅಧ್ಯಯನ ಪ್ರಾರಂಭಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರದಿಂದ ಬರ ಪರಿಹಾರಕ್ಕೆ ಪರಿಹಾರ ನೀಡಲಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆಗೆ ಉತ್ತರಿಸಿದ ಅವರು ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಜನಪರ ಕಾಳಜಿ ಇದೆ. ಕೇಂದ್ರ ತಂಡ ಬಂದು ಈಗಾಗಲೇ ಬರ ಬಗ್ಗೆ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ ಎಂದರು.

ರಾಜ್ಯದಲ್ಲಿ ಜನ ಆರಿಸಿರುವುದು ಕಾಂಗ್ರೆಸ್ ಸರ್ಕಾರವನ್ನು, ಈ ಸರ್ಕಾರ ತಾನೇನು ಮಾಡುತ್ತಿದೆ ಎನ್ನುವುದನ್ನು ಹೇಳಲಿ. ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರಕಾರ ಅಂತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕಾವೇರಿ ವಿಚಾರ ಅಂದರೆ ಕೇಂದ್ರ ಸರ್ಕಾರ ಅಂತಾರೆ. ಕಾಂಗ್ರೆಸ್ 5 ಕೆಜಿ ಅಕ್ಕಿ ಕೊಡ್ತೀನಿ ಎಂದು ಹೇಳಿದ್ದರು. ಈಗ ಕೇಂದ್ರ ಸರ್ಕಾರ ಕೊಡ್ತಿಲ್ಲಾ ಎನ್ನುತ್ತಿದ್ದಾರೆ. ಕಾಲಕಾಲಕ್ಕೆ ಬಿಡುಗಡೆ ಮಾಡಬೇಕಾದ ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದ ಕರ್ನಾಟಕಕ್ಕೆ ಆರ್ಥಿಕವಾಗಿ ತುಂಬಾ ಅನುಕೂಲ ಮಾಡಲಾಗಿದೆ. ಆದರೆ ಕಾಂಗ್ರೆಸ್ ನಾಯಕರು ತಮ್ಮ ದೌರ್ಬಲ್ಯ ಮುಚ್ಚಿಟ್ಟು, ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್‌ನವರು ಇಲ್ಲಿ ಏನು ಮಾಡಬೇಕೋ ಅದನ್ನು ಮಾಡಬೇಕು. ನಾವು ಕರ್ನಾಟಕಕ್ಕೆ ಕೊಡಬೇಕಾದ್ದನ್ನು ಕೊಟ್ಟೇ ಕೊಡುತ್ತೇವೆ. ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನ್ಯಾಯ ಮಾಡಲ್ಲ. ರಾಜ್ಯದಲ್ಲಿ ಕೆಲಸ ಮಾಡದೇ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡುವ ಕಾಂಗ್ರೆಸ್ ಸರ್ಕಾರದ ಕಾರ್ಯ ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ವಾಗ್ದಾಳಿ ನಡೆಸಿದರು.

ಇನ್ನು ಸಿದ್ದರಾಮಯ್ಯ ಈ ರೀತಿ ಆಡಳಿತ ಮಾಡಿದರೆ ರಾಜ್ಯದ ಜನ ಸಹಿಸಲ್ಲ. ಬರುವ ದಿನಗಳಲ್ಲಿ ರಾಜ್ಯದ ಜನ ಸೂಕ್ತ ಪಾಠ ಕಲಿಸುತ್ತಾರೆ. ಸರ್ಕಾರಕ್ಕೆ ಜನರ ಕಷ್ಟಕ್ಕೆ ಸ್ಪಂದಿಸುವ ಮಾನವೀಯ ಹೃದಯ ಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಉಚಿತಗಳನ್ನು ಕೊಡೋದಕ್ಕೆ ಹಣವಿದೆ. ರೈತರ ಕಷ್ಟಕ್ಕೆ ಹಣ ಕೊಡಿ ಅಂದರೆ ಕೇಂದ್ರ ಸರ್ಕಾರವನ್ನು ತೋರಸ್ತೀರಾ? ಎಂದು ಪ್ರಶ್ನಿಸಿದರು. ಅಲ್ಲದೇ ರೈತರ ಕಷ್ಟದಲ್ಲಿ ನಿಮ್ಮ ಮುಖವಾಡ ತೆಗೆದಿಟ್ಟು ಸಹಾಯಕ್ಕೆ ಬನ್ನಿ ಎಂದು ಹೇಳಿದರು.












Click it and Unblock the Notifications