ಸರ್ಕಾರದ ವಿರುದ್ಧ ಟೀಕೆ, ಶಿಕ್ಷಕ ಅಮಾನತು; ಬಿಜೆಪಿ ಟ್ವೀಟ್ ಬಾಣ!
ಚಿತ್ರದುರ್ಗ, ಮೇ 22; ಸರ್ಕಾರವನ್ನು ಫೇಸ್‌ಬುಕ್ ಪೋಸ್ಟ್ ಮೂಲಕ ನಿಂದನೆ ಮಾಡಿದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಪ್ರತಿಪಕ್ಷ ಬಿಜೆಪಿ ಈ ಕುರಿತು ಟ್ವೀಟ್ ಮಾಡಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲವೇ? ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹೊಸದುರ್ಗ, ಚಿತ್ರದುರ್ಗ ಜಿಲ್ಲೆ ಇವರ ಪತ್ರ ಮುಖೇನ ಎಲ್. ಜಯಪ್ಪ ಶಿಸ್ತುಪ್ರಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸದುರ್ಗ ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿ ಸ.ಕಿ.ಪ್ರಾ. ಶಾಲೆ ಶಿಕ್ಷಕ ಶಾಂತಮೂರ್ತಿ ಎಂ.ಜಿ. ಯನ್ನು ಮಾನ್ಯ ಉಪನಿರ್ದೇಶಕರು ಸಾ.ಶಿ.ಇ ಚಿತ್ರದುರ್ಗ ಇವರು ಕಳಿಸಿರುವ ವಾಟ್ಸಪ್ ಸಂದೇಶದ ಉಲ್ಲೇಖ ಅಮಾನತು ಮಾಡಲಾಗಿದೆ ಎಂದು ಆದೇಶ ಹೇಳಿದೆ.
ಸರ್ಕಾರದ ವಿರುದ್ಧ ಟೀಕೆ; ಶಿಕ್ಷಕ ಶಾಂತಮೂರ್ತಿ ಎಂ.ಜಿ. ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸರ್ಕಾರಗಳ ಕುರಿತಂತೆ ಈ ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಅಂದರೆ ಎಸ್. ಎಂ. ಕೃಷ್ಣರ ಅವಧಿಯಲ್ಲಿ 3,590 ಕೋಟಿ, ಧರ್ಮಸಿಂಗ್ ರೂ. 15,635, ಕೋಟಿ ಹೆಚ್‌ಡಿಕೆ 3,545, ರೂ. ಕೋಟಿ, ಬಿಎಸ್‌ವೈ 25,653,ರೂ. ಕೋಟಿ ಸ.ಗೌಡ -9,464, ರೂ.ಕೋಟಿ ಜ. ಶೆಟ್ಟರ್ 13,464, ರೂ., ಸಿದ್ಧರಾಮಯ್ಯ -2,42,000 ಕೋಟಿ ಎಸ್.ಎಂ.ಕೆ ಇಂದ ಶೆಟ್ಟರ್ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ಸಿದ್ದು ಮಾಡಿದ ಸಾಲ ರೂ. 2,42,000 ಕೋಟಿ ಬಿಟ್ಟಿ ಭಾಗ್ಯ ಕೊಡದೆ ಇನ್ನೇನು? ಎಂದು ಪೋಸ್ಟ್ ಹಾಕಿದ್ದರು.

ಮುಖ್ಯಮಂತ್ರಿಗಳು ರಾಜ್ಯಕ್ಕಾಗಿ ಮಾಡಿದ ಸಾಲಗಳ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಂದೇಶವನ್ನು ಪ್ರಕಟಿಸಿದ್ದು ಈ ರೀತಿಯಾಗಿ ಸರ್ಕಾರದ, ಮುಖ್ಯಮಂತ್ರಿಗಳ ವಿರುದ್ಧ ಅವಹೇಳನೆ ಮಾಡಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿತ್ತು. ಉಪನಿರ್ದೇಕರು ಸಾ.ಶಿ.ಇ ಚಿತ್ರದುರ್ಗ ರವರ ನಿರ್ದೇಶನದಂತೆ ಸದರಿ ಶಿಕ್ಷಕರ ಮೇಲೆ ಶಿಸ್ತುಕ್ರಮ ತೆಗೆಯಲು ಸೂಚಿಸಲಾಗಿತ್ತು.
ಆದ್ದರಿಂದ ಈ ಆದೇಶ ಹೊರಡಿಸಲಾಗಿದೆ. ಶಾಂತಮೂರ್ತಿ ಎಂ.ಜಿ. ನೀವು ಮಾನ್ಯ ಶ್ರೀ ಸಿದ್ಧರಾಮಯ್ಯ ಇವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸರ್ಕಾರದ ತೀರ್ಮಾನಗಳ ಕುರಿತಂತೆ ಅವಹೇಳನೆ ಮಾಡಿರುವ ವಿಷಯವನ್ನು ವಾಟ್ಸಪ್ ಗ್ರೂಪ್ ಮೂಲಕ ಮೆಸೇಜ್ ಅನ್ನು ಹರಿದಾಡಲು ಬಿಟ್ಟು ನಡತೆ ನಿಯಮ ಉಲ್ಲಂಘಿಸಿ ಶಿಕ್ಷಕರ ವೃತ್ತಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿರುವ ಪ್ರಯುಕ್ತ ಕರ್ನಾಟಕ ನಾಗರೀಕ ಸೇವಾ ನಡೆತ ನಿಯಮ-1966 ಹಾಗೂ 2021ರ 3 (i) (ii) (iii) ರನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದೀರಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಲ್. ಜಯಪ್ಪ ಅವರು ಪ್ರದತ್ತಕವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸಿವಿಲ್ ಸೇವಾ ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ ನಿಯಂತ್ರಣ) ನಿಯಮ 1957ರ ನಿಯಮ 1 ರನ್ವಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಾಂತಮೂರ್ತಿ ಎಂ.ಜಿ. ಅಮಾನತ್ತಿನಲ್ಲಿರಿಸಿ ಆದೇಶಿಸಿದ್ದಾರೆ.
ಅಮಾನತ್ತುಗೊಂಡ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ. ಅಮಾನತ್ತಿನ ಅವಧಿಗೆ ಕೆ.ಸಿಎಸ್.ಆರ್-98ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಬಿಜೆಪಿ ಟ್ವೀಟ್; ಶಿಕ್ಷಕನ ಅಮಾನತು ಆದೇಶ ಟ್ವೀಟ್ ಮಾಡಿ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ, 'ಪ್ರಜಾಪ್ರಭುತ್ವವನ್ನಾಗಲಿ, ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನಾಗಲಿ ಗೌರವಿಸುವ ಪಕ್ಷ ಕಾಂಗ್ರೆಸ್ ಅಲ್ಲ' ಎಂದು ಹೇಳಿದೆ.
'ರಾಜ್ಯದಲ್ಲಿ ತುಘಲಕ್ ಕಾಂಗ್ರೆಸ್ ಸರ್ಕಾರ ಬಂದೊಡನೆ ಸರ್ಕಾರದ ಢೋಂಗಿ ನೀತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದರು ಎಂಬ ಕಾರಣಕ್ಕಾಗಿ ಶಿಕ್ಷಕರೊಬ್ಬರನ್ನು ವೃತ್ತಿಯಿಂದ ಅಮಾನತುಗೊಳಿಸಿರುವಂತಹ ಅಮಾನವೀಯ ಘಟನೆ ನಡೆದಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲವೇ?' ಎಂದು ಸರ್ಕಾರವನ್ನು ಪ್ರಶ್ನಿಸಿದೆ.
'ಪ್ರಜೆಗಳ ಧ್ವನಿಯನ್ನು ಹತ್ತಿಕ್ಕುವ ಕಾಂಗ್ರೆಸ್‌ನ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಅದೇ ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಪ್ರಜೆಗಳ ಒಟ್ಟಿಗೆ ಅವರ ಧ್ವನಿಯಾಗಿ ಹೋರಾಟ ನಡೆಸಲಿದ್ದೇವೆ' ಎಂದು ತಿಳಿಸಿದೆ.












Click it and Unblock the Notifications