ಹಿರಿಯೂರು: ಕುರಿಮರಿ ಉಡುಗೊರೆ ಸ್ವೀಕರಿಸದ ಸಿಎಂ ಸಿದ್ದರಾಮಯ್ಯ
ಹಿರಿಯೂರು, ಅಕ್ಟೋಬರ್, 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡಲು ಕುರಿಮರಿಯನ್ನು ತಂದಿದ್ದು, ಆದರೆ ಮುಖ್ಯಮಂತ್ರಿಗಳು ಕುರಿಮರಿಯನ್ನು ಸ್ವೀಕರಿಸಿದ ಕಾರಣ ವ್ಯಕ್ತಿಯೊಬ್ಬ ಕುರಿಮರಿಯನ್ನು ವಾಪಸ್ ಕೊಂಡೊಯ್ದ ಪ್ರಸಂಗ ಹಿರಿಯೂರಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ತಾಲೂಕು ಕಚೇರಿ ಬಳಿ ಇರುವ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿವೇಶನದಲ್ಲಿ ನೂತನ ಕನಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸುಮಾರು ಸಂಜೆ 5 ಗಂಟೆಯ ಸಮಯದಲ್ಲಿ ಆಗಮಿಸಿದ್ದರು. ಈ ವೇಳೆ ಕುರುಬ ಸಂಘದ ವತಿಯಿಂದ ಸಿದ್ದರಾಮಯ್ಯ ಅವರಿಗೆ ಕರಿ ಕಂಬಳಿ ಹಾಗೂ ಕುರಿಮರಿ ನೀಡಲು ಸಿದ್ಧತೆ ಮಾಡಿಕೊಂಡಿದ್ದರು.

ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿದ ಬಳಿಕ ಸಂಘದ ಸದಸ್ಯರು ಮೈಕ್‌ನಲ್ಲಿ ಹಿರಿಯೂರು ತಾಲೂಕು ಕುರುಬರ ವತಿಯಿಂದ ಮುಖ್ಯಮಂತ್ರಿಗಳಿಗೆ ಕರಿ ಕಂಬಳಿ ಹೊದಿಸಿ, ಕುರಿಮರಿ ನೀಡಿ ಗೌರವಿಸಬೇಕು ಎಂದು ಮೈಕ್ ಹಿಡಿದು ಅನೌನ್ಸ್ ಮಾಡಲಾಯಿತು. ಅದರಂತೆ ಕುರುಬ ಸಂಘದಿಂದ ಸಿಎಂ ಅವರಿಗೆ ಕಂಬಳಿಯನ್ನು ಹೊದಿಸಿ ಕುರಿಮರಿ ಉಡುಗೊರೆ ನೀಡಲು ಮುಂದಾದರು.
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರಿಮರಿಯನ್ನು ಸ್ವೀಕರಿಸಿದೆ ಹಾಗೆ ತೆರಳಿದರು. ನಂತರ ಕುರಿಮರಿ ಹೊತ್ತು ತಂದಿದ್ದ ವ್ಯಕ್ತಿ ಕುರಿಮರಿಯನ್ನು ಹೆಗಲಮೇಲೆ ಹೊತ್ತು ವಾಪಸ್ ಕೊಂಡೊಯ್ದ ಘಟನೆ ನಡೆಯಿತು.
ಕಾವಾಡಿಗರಹಟ್ಟಿಗೆ ಸಿಎಂ ಭೇಟಿ
ಕವಾಡಿಗರಹಟ್ಟಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ಕವಾಡಿಗರಹಟ್ಟಿಯಲ್ಲಿ ಆಗಸ್ಟ್ 1ರಂದು ಕಲುಷಿತ ನೀರು ಸೇವಿಸಿ 200ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದರು. ಇಲ್ಲಿ ಎಲ್ಲರೂ ಬಡತನದಲ್ಲಿ ಇದ್ದವರು. ಈ ವಿಷಯ ತಿಳಿದು ಎಲ್ಲರಿಗೂ ಫೋನ್ ಮಾಡಿದ್ದೆ ಎಂದರು.
ಶುದ್ದ ಕುಡಿಯುವ ನೀರು ನೀಡುವುದು ಸರ್ಕಾರದ ಜವಬ್ದಾರಿ. ಕೂಡಲೇ ಡಿಸಿ ಶಾಸಕರು, ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದ್ದಾರೆ. 6 ಮಂದಿ ಕಲುಷಿತ ನೀರು ಕುಡಿದು ಮೃತಪಟ್ಟಿದ್ದಾರೆ. ಶುದ್ದ ನೀರು ನೀಡಲು ಆಗಿಲ್ಲ ಎಂಬುದು ಊಹಿಸಲು ಆಗಲ್ಲ. ಸರ್ಕಾರದಿಂದ ಪರಿಹಾರ ಘೋಷಣೆಗೆ ಸೂಚನೆ ನೀಡಿದ್ದೆ. ನಗರಸಭೆಯಿಂದ ಕೂಡಾ ಪರಿಹಾರ ನೀಡಿದ್ದೇವೆ. ಡಿಸಿ ಜೊತೆಗೆ ಸಭೆ ನಡೆಸಿ ಕೂಡಲೇ ಕುಡಿಯುವ ನೀರು ಸಮಸ್ಯೆ ಆಗದಂತೆ ಸೂಚನೆ ನೀಡಿದ್ದೇನೆ. ಇನ್ನುಮುಂದೆ ಕಲುಷಿತ ನೀರು ಕೊಟ್ಟರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆಗುತ್ತದೆ ಎಂದರು.
ಕಲುಷಿತ ನೀರು ಸೇವನೆ ಮಾಡಿ 6 ಜನ ಮೃತಪಟ್ಟಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಯಸುವೆ. ಅಲ್ಲದೆ ಮೃತರ 3 ಹೆಕ್ಟೇರ್ ಜಮೀನು ಹಾಗೂ ಅಭಿವೃದ್ಧಿಗಾಗಿ 4 ಕೋಟಿ ಹಣ ನೀಡಿದ್ದೇವೆ. ಉದ್ಯೋಗವನ್ನೂ ನೀಡುತ್ತೇವೆ. ಹಾಗೂ ಮನೆಯನ್ನೂ ಕೂಡ ನಾವೇ ಕಟ್ಟಿಸುತ್ತೇವೆ. ಒಟ್ಟಿನಲ್ಲಿ ಮೃತರ ಕುಟುಂಬದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ ಎಂದರು.
ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದೆ. 122 ವರ್ಷಗಳ ಬಳಿಕ ಇಂತಹ ಬರಗಾಲ ಬಂದಿದೆ. 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. ಇನ್ನೊಂದು ಸುತ್ತಿನ ಸಭೆಯನ್ನೂ ಕೂಡ ಮಾಡುತ್ತಿದ್ದೇವೆ. ರಾಜ್ಯದಲ್ಲಿ 30 ಕೋಟಿ ನಷ್ಟ ಆಗಿದೆ. ಎನ್‌ಡಿಆರ್‌ಎಫ್ ನಾರ್ಮ್ಸ್ ಪ್ರಕಾರ ಪರಿಹಾರಕ್ಕೆ ಕೇಂದ್ರಕ್ಕೆ ಪತ್ರ ಬರೆದಿದ್ದಿದ್ದು, ಕೇಂದ್ರದಿಂದ ರಾಜ್ಯಕ್ಕೆ ತಜ್ಞರ ತಂಡ ಆಗಮಿಸಿದೆ ಎಂದರು.
ಅನೇಕ ರಾಜ್ಯಗಳಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದು, ದೇಶದಲ್ಲೇ ಬರಗಾಲ ಆವರಿಸಿದೆ. ಆದ್ದರಿಂದ ರಾಜ್ಯದಲ್ಲಿ ಜನ ಗುಳೆ ಹೋಗದಂತೆ ಸಭೆ ನಡೆಸಿ ಸೂಚನೆ ನೀಡಿದ್ದೇವೆ. ಅನ್ನ ಭಾಗ್ಯ ಅಕ್ಕಿ ನೀಡಿದ್ದೇವೆ, ಗೃಹ ಜ್ಯೋತಿ ನೀಡಿದ್ದೇವೆ. 1 ಕೋಟಿ 10 ಲಕ್ಷ ಜನರಿಗೆ 2 ಸಾವಿರ ಹಣ ಹಾಕಿದ್ದೇವೆ. ಇನ್ನೂ ಕೆಲವರಿಗೆ ಬ್ಯಾಂಕ್ ಸಮಸ್ಯೆಯಿಂದ ಹಣ ಬಂದಿಲ್ಲ. ಹಾಗೆಯೇ ಶಕ್ತಿ ಯೋಜನೆ ಮೂಲಕ ಬಸ್ ಪ್ರಯಾಣವನ್ನು ಉಚಿತವಾಗಿ ನೀಡಿದ್ದೇವೆ. ಈ ಯೋಜನೆಯಿಂದ ರಾಜ್ಯದಲ್ಲಿ 50-60 ಲಕ್ಷ ಮಹಿಳೆಯರು ಒಂದು ದಿನಕ್ಕೆ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದರು.












Click it and Unblock the Notifications