ನಾಳೆ ಧರ್ಮಪುರಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಿಎಂ

ಚಿತ್ರದುರ್ಗ, ಜೂ. 3: ನೊಳಂಬ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಕೆರೆ. ಈ ಕೆರೆ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಆದರೆ ಒಂದು ಹನಿಯೂ ನೀರಿಲ್ಲ. ನೀರಿಗಾಗಿ ಆ ಭಾಗದ ಜನರು ಪರಿತಪಿಸುವ ಕಾಲ ಉಂಟಾಗಿತ್ತು. ಹಲವು ದಶಕಗಳಿಂದ ಹೋರಾಟ, ಸತ್ಯಾಗ್ರಹ, ಬಂದ್, ಚಳವಳಿ ಮಾಡುತ್ತಾ ಬಂದರೂ ಈ ಕೆರೆಗೆ ನೀರು ಬರುವ ಸೂಚನೆ ಕಾಣಲಿಲ್ಲ.

ಆದರೆ, 2018ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕೆ ಪೂರ್ಣಿಮಾ ತನಗೆ ಮತ ನೀಡಿದರೆ 2023ರ ಒಳಗೆ ನೀರು ಹರಿಸುವಂತೆ ಮಾಡುತ್ತೇನೆ ಎಂದು ಹೇಳಿದ್ದರು. ಈಗ ನುಡಿದಂತೆ ನಡೆದಿದ್ದಾರೆ. ಆ ಭಾಗದ ಜನತೆಯಲ್ಲಿ ಹರ್ಷ ತಂದಿದೆ. ಹಾಗಾದರೆ ಆ ಐತಿಹಾಸಿಕ ಕೆರೆ ಯಾವುದು, ನೂರಾರು ವರ್ಷಗಳ ಹೋರಾಟ ಮಾಡಿದ ಜನತೆ ಯಾರು, ಎಲ್ಲಿ ಅಂತೀರಾ ಈ ಸ್ಟೋರಿ ಓದಿ.

 ಹೊಸಳ್ಳಿ ಚೆಕ್ ಡ್ಯಾಂ ಬಳಿ ಕಾಮಗಾರಿಗೆ ಶಂಕುಸ್ಥಾಪನೆ

ಹೊಸಳ್ಳಿ ಚೆಕ್ ಡ್ಯಾಂ ಬಳಿ ಕಾಮಗಾರಿಗೆ ಶಂಕುಸ್ಥಾಪನೆ

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹಾಗೂ ಹೋಬಳಿಯ 7 ಕೆರೆಗಳಿಗೆ ನೀರು ತುಂಬಿಸುವ 90 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಾಳೆ ಶನಿವಾರ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಾಣಿವಿಲಾಸ ಜಲಾಶಯದಿಂದ ನೀರು ವೇದಾವತಿ ನದಿಗೆ ಹರಿಸಿ, ಹೊಸಳ್ಳಿ ಬ್ಯಾರೇಜ್ ನಿಂದ ನೇರವಾಗಿ ಪೈಪ್ ಲೈನ್ ಮೂಲಕ ಧರ್ಮಪುರ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಮಾರ್ಗ ಮಧ್ಯೆ ಬರುವ ಮುಂಗಸವಳ್ಳಿ, ಸೂಗೂರು, ಅಬ್ಬಿನಹೊಳೆ, ಈಶ್ವರಗೆರೆ, ಗೂಳ್ಯ ಹಾಗೂ ಶ್ರವಣೆಗೆ ಕೆರೆಗಳಿಗೂ ಸಹ ನೀರು ತುಂಬಿಸಲಾಗುತ್ತಿದೆ.

 ನೊಳಂಬರ ಕಾಲದಲ್ಲಿ ಕೆರೆ ನಿರ್ಮಾಣ

ನೊಳಂಬರ ಕಾಲದಲ್ಲಿ ಕೆರೆ ನಿರ್ಮಾಣ

ಹಿರಿಯೂರು ತಾಲ್ಲೂಕಿನ ಧರ್ಮಪುರ ಕೆರೆ ಜಿಲ್ಲೆಯಲ್ಲಿ ಎರಡನೇ ದೊಡ್ಡ ಐತಿಹಾಸಿಕ ಕೆರೆಯಾಗಿದೆ. ಈ ಕೆರೆಯನ್ನು ನೊಳಂಬ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಸುಮಾರು 700 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಕೆರೆ 360 ದಶಲಕ್ಷ ಕ್ಯೂಬಿಕ್ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಜೊತೆಗೆ 1600 ಮೀಟರ್ ಉದ್ದ 900 ಹೆಕ್ಟೇರ್ ನೀರಾವರಿ ಪ್ರದೇಶಕ್ಕೆ ನೀರು ಹಾಯಿಸುವ ಸಾಮರ್ಥ್ಯ ಹೊಂದಿದೆ. 1982 ರಲ್ಲಿ ಅಂದರೆ 40 ವರ್ಷಗಳ ಹಿಂದೆ ಒಮ್ಮೆ ಮಾತ್ರ ಕೆರೆ ಸಂಪೂರ್ಣವಾಗಿ ತುಂಬಿತ್ತು. ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಪೂರ್ಣ ಮಟ್ಟದಲ್ಲಿ ಕೆರೆಗೆ ನೀರು ಹರಿದು ಬಂದಿಲ್ಲ.

ಧರ್ಮಪುರ ಕೆರೆಗೆ ಫೀಡರ್ ಚಾನಲ್ ಕಲ್ಪಿಸಬೇಕೆಂಬ ಹೋರಾಟ ನಿನ್ನೆ ಮೊನ್ನೆಯದಲ್ಲ. ಇದಕ್ಕೆ ಶತಮಾನದ ಇತಿಹಾಸವಿದೆ. 1919ರಲ್ಲಿ ಈ ಭಾಗದ ಜನರು ಸಲ್ಲಿಸಿದ ಮನವಿಯೊಂದು ಅಂದೇ ಸರ್ಕಾರದ ಮಟ್ಟದಲ್ಲಿ ಗಮನಸೆಳೆದಿತ್ತು. ಧರ್ಮಪುರದ ಪಟೇಲ್ ಕರೇಗೌಡರು 20 ಅಕ್ಟೋಬರ್ 1919ರಂದು ವೇದಾವತಿ ನದಿಯಿಂದ ಧರ್ಮಪುರ ಕೆರೆಗೆ ಫೀಡರ್ ಚಾನಲ್ ಕಲ್ಪಿಸಬೇಕೆಂದು ಮನವಿ ಸಲ್ಲಿದ್ದರು. ಅಂದಿನ ಮೈಸೂರು ಸಂಸ್ಥಾನದ ಮುಖ್ಯ ಎಂಜನಿಯರ್ ಎಸ್.ಚಾಂಡಿ ಕಂದಾಯದ ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದರು. ನಂತರ 1967 ರಲ್ಲಿ ಬಿ.ಎಲ್.ಗೌಡ ವಿಧಾನಸಭೆಯಲ್ಲಿ ಪ್ರಶೋತ್ತರ ವೇಳೆಯಲ್ಲಿ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ವೀರೇಂದ್ರ ಪಾಟೀಲ್ ಅವರಿಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಸಚಿವರು ಧರ್ಮಪುರ ಕೆರೆಗೆ ಫೀಡರ್ ಚಾಲನ್ ಯೋಜನೆ ಸಿದ್ಧವಾಗಿದೆ. ಅಂದಾಜು ಪಟ್ಟಿ 112 ಲಕ್ಷ, 6 ಸಾವಿರ ಎಕರೆ ನೀರುಣಿಸಲಿದೆ ಎಂದಿದ್ದರು.

 ತಂದೆಯ ಕನಸು ನನಸು ಮಾಡುವ ಛಲ

ತಂದೆಯ ಕನಸು ನನಸು ಮಾಡುವ ಛಲ

1919 ರಿಂದ ಧರ್ಮಪುರ ಕೆರೆಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗಿನ ಪಟೇಲ್ ಕರೇಗೌಡ ಎಂಬುವವರು ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಗಿನ ಬ್ರಿಟಿಷ್ ಸರ್ಕಾರ ಸ್ಪಂದಿಸಿತ್ತು. ಮುಂದುವರಿದ ಹೋರಾಟದಲ್ಲಿ 1960-70 ದಶಕದಲ್ಲಿ ವಿಧಾನಸಭಾ ಕಲಾಪದಲ್ಲಿ ಚರ್ಚೆ ಕೂಡ ನಡೆಯಿತು. ಅಂದಿನ ಸರ್ಕಾರ ನೀರು ಹರಿಸಲು ಅನುಮೋದನೆ ನೀಡಿತು. ಆದರೆ ಸುವರ್ಣಮುಖಿ ನದಿ ಪಾತ್ರದ ರೈತರ ದಿಲ್ಲಿಯ ಜಲಮಂಡಳಿಗೆ ದೂರು ಸಲ್ಲಿಸಿದಾಗ ಯೋಜನೆ ನೆನೆಗುದಿಗೆ ಬಿದ್ದಿದ ಯೋಜನೆಯನ್ನು, ಕಾರ್ಯರೂಪಕ್ಕೆ ತರಲು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಬರಬೇಕಾಯಿತು ನೋಡಿ.

ಈ ಹಿಂದೆ ಹಿರಿಯೂರು ಕ್ಷೇತ್ರವನ್ನು ಗಮನಿಸಿದಾಗ ಘಟಾನುಘಟಿ ನಾಯಕರ ಆಡಳಿತ ನಡೆಸಿ ಹೋಗಿದ್ದರು. ಆದರೆ ಇವರು ಯಾರಿಗೂ ಸಹ ನೀರು ಹರಿಸುವ ಇಚ್ಚಾಶಕ್ತಿ ಇರಲಿಲ್ಲ. ಈ ಹಿಂದೆ ದಿವಂಗತ ಮಸಿಯಪ್ಪನವರು, ಬಿಎಲ್. ಗೌಡ್ರು, ಡಿ. ಮಂಜುನಾಥ್, ಕೆ.ಹೆಚ್. ರಂಗನಾಥ್, ಆರ್. ರಾಮಯ್ಯ, ಡಿ. ಸುಧಾಕರ್ ಇಂತಹ ನಾಯಕರು ಕೆರೆಗೆ ನೀರು ಹರಿಸುವ ಬಗ್ಗೆ ಗಮನ ಹರಿಸಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ 2013 ರಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರ ತಂದೆ ಎ. ಕೃಷ್ಣಪ್ಪ ಅವರು ಕೂದಲೆಳೆ ಅಂತರದಲ್ಲಿ ಸೋಲು ಅನುಭವಿಸಿದ್ದರು. ಧರ್ಮಪುರ ಕೆರೆಗೆ ನೀರು ಹರಿಸುವುದು ಮಾಜಿ ಸಚಿವ ಎ. ಕೃಷ್ಣಪ್ಪ ಅವರ ಕನಸಾಗಿತ್ತು. ಚುನಾವಣೆಯಲ್ಲಿ ಅವರ ಸೋಲು ಈ ಕಾರಣಕ್ಕಾಗಿ ಕೃಷ್ಣಪ್ಪನ ಅವರ ಕನಸು ನನಸಾಗಿ ಉಳಿಯುವಂತೇ ಮಾಡಿತು. ಮಗಳು ಪೂರ್ಣಿಮಾ ತನ್ನ ತಂದೆಯ ಕನಸನ್ನು ನನಸು ಮಾಡುವ ಛಲವನ್ನು ಹೊತ್ತು, ತಂದೆಯ ಕನಸಿನ ಜೊತೆಗೆ, ಆ ಭಾಗದ ಜನರ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದಾರೆ.

 ಗಂಗಾಮಾತೆ ಎಂದು ಹೊಗಳಿದ ಜನರು

ಗಂಗಾಮಾತೆ ಎಂದು ಹೊಗಳಿದ ಜನರು

ನೂರಾರು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದ್ದು ಧರ್ಮಪುರ ಹೋಬಳಿಯ ಜನತೆಯ ಮೊಗದಲ್ಲಿ ಹರ್ಷ ತುಂಬಿದೆ. ಇಲ್ಲಿಯವರೆಗೂ ಆಡಳಿತ ನಡೆಸಿದ ನಾಯಕರ ಮಾತುಗಳು ಬೊಗಳೆ ಮಾತುಗಳಾಗಿದ್ದವು. ಆ ನಾಯಕರುಗಳ ಮಾತು ಮಾತಾಗಿಯೇ ಉಳಿದಿದ್ದವು. ಒಂದು ಮಾತು ಸಹ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಧರ್ಮಪುರ ಹೋಬಳಿಯ ಜನತೆ. ಆದರೆ ಚುನಾವಣೆ ಪೂರ್ವದಲ್ಲಿ ಮಾತು ಕೊಟ್ಟು, ಇಲ್ಲಿನ ಜನರ ಬೇಡಿಕೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಪಕ್ಷಾತೀತವಾಗಿ ಜನತೆ ಅಭಿನಂದನೆ ಸಲ್ಲಿಸಿ "ತಾಲ್ಲೂಕಿನ ಪೂರ್ಣಿಮಾ ಗಂಗಾಮಾತೆ" ಎಂದು ಹಾಡಿ ಹೊಗಳುತ್ತಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

      Harini Logan ಭಾರತ ಮೂಲದ ಹುಡುಗಿ ಇತಿಹಾಸ ಸೃಷ್ಟಿಸಿದರು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+