ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿಸಲು ಕೇಂದ್ರದ ಅನುಮೋದನೆ
ಚಿತ್ರದುರ್ಗ, ಫೆಬ್ರವರಿ 16: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರದ ಹೈಪವರ್ ಕಮಿಟಿಯಲ್ಲಿ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಸಿರಿಗೆರೆ ತರಳುಬಾಳು ಬೃಹನ್ಮಠದ ವತಿಯಿಂದ ಬುಧವಾರ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಆಯೋಜಿಸಿದ ತರಳುಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಯೋಜನೆಯ ನೆರವಿನಿಂದ ರಾಜ್ಯಕ್ಕೆ ಸುಮಾರು ರೂ.12,500 ಕೋಟಿಯ ನೆರವು ಸಿಗಲಿದೆ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯು ಏಕೈಕ ರಾಷ್ಟ್ರೀಯ ಯೋಜನೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯಕರ್ನಾಟಕದ ನೀರಾವರಿ ಯೋಜನೆಗೆ ತುಂಬಾ ಸಹಕಾರಿಯಾಗಿದ್ದು, ಇದರಿಂದ ಅಂತರ್ಜಲ ಹೆಚ್ಚಳದ ಜೊತೆಗೆ ನೀರನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕೆರೆಗಳ ತುಂಬಿಸುವ ಯೋಜನೆಗೆ ಕ್ರಮ:
2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭದ್ರಾ ಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈಗ ಇದರ ಜೊತೆ ಕೆರೆಗಳ ತುಂಬಿಸುವ ಯೋಜನೆಗೆ ಕ್ರಮ ಕೈಗೊಂಡಿದ್ದೇವೆ. ಹಿಂದಿನ ಸರ್ಕಾರ ಕೆರೆಗಳಿಗೆ ನೀರು ಭರ್ತಿ ಮಾಡುವ ವಿದ್ಯುತ್ ಶುಲ್ಕವನ್ನು ರೈತರೇ ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಸಿರಿಗೆರೆ ಗುರುಗಳು ಹೇಳಿ ಈ ಹಣವನ್ನು ಸರ್ಕಾರದಿಂದಲೇ ಭರಿಸಬೇಕು ಎಂದು ಹೇಳಿದ ತಕ್ಷಣವೇ ಆ ಆದೇಶವನ್ನು ಬದಲಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಅಡ್ಡಿ ಆತಂಕವಿಲ್ಲ:
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಎದುರಾಗಿದ್ದ ಅನೇಕ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಲಾಗಿದೆ. ಅಜ್ಜಂಪುರ ಟನಲ್‍ನಿಂದ ವಿವಿಸಾಗರಕ್ಕೆ ನೀರು ಹರಿಸಲಾಗಿದ್ದು, ವಿವಿಸಾಗರ ನಿರ್ಮಾಣ ಮಾಡಿದಾಗಿನಿಂದ ಎರಡು-ಮೂರು ಬಾರಿ ತುಂಬಿದೆ. ಭೂಮಿ ತಾಯಿಗೆ ಹಸಿರು ಸೀರೆ ಉಡಿಸುವ ಕೆಲಸವನ್ನು ಮಾಡಿದ್ದೇವೆ. ಪ್ರಧಾನಿ ಮೋದಿ ಈಗಾಗಲೇ ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ನಾವು ಜನಪರವಾಗಿದ್ದು, ದುಡಿಯುವ ವರ್ಗವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ದುಡಿಮೆಯೇ ದೊಡ್ಡಪ್ಪ, ಕಾಯಕ ಸಮಾಜ ದೇಶ, ನಾಡು ನಿರ್ಮಾಣ ಮಾಡಿದಾಗ ಅಭಿವೃದ್ಧಿ ಸಾಧ್ಯ. ನವ ಕರ್ನಾಟಕದಿಂದ ನವಭಾರತ ನಿರ್ಮಾಣ ನಮ್ಮ ಘೋಷಣೆಯಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸನ್ಮಾನ:
ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಶ್ರೀಮಠದಿಂದ ಸನ್ಮಾನಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು. ವೀರಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸಿರಿಗೆರೆ ತರಳುಬಾಳು ಬೃಹನ್ಮಠದಿಂದ ಸನ್ಮಾನ ಮಾಡಲಾಯಿತು. ತಲಾ ರೂ.50 ಸಾವಿರ ರೂಪಾಯಿಗಳಂತೆ ಒಟ್ಟು 9 ಮಂದಿಗೆ ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ವೀರ ಮರಣ ಹೊಂದಿದ ಸೈನಿಕರ ಪತ್ನಿಯರು ಕುಂದುಕೊರತೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳಿಗೆ ನೀಡಿದರು. ಈ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.
ನಮ್ಮದು ರೈತರ ಕಣ್ಣೀರು ಒರೆಸುವ ಉದ್ದೇಶ ಎಂದ ಬಿಸಿ ಪಾಟೀಲ್:
ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ತರ ಸಮಸ್ಯೆಯನ್ನು ಆಲಿಸಿ, ರೈತರ ಕಣ್ಣೀರು ಒರೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಈ ಹಿಂದೆ ರೈತರಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಳಿ ಅರಣ್ಯ ಖಾತೆ ಬದಲಾಗಿ ಕೃಷಿ ಇಲಾಖೆಯೊಂದಿಗೆ ರೈತರ ಸೇವೆ ಮಾಡುವ ಅವಕಾಶ ಪಡೆದಿದ್ದೇನೆ ಎಂದರು.
ರೈತರ ಮಕ್ಕಳು ಬಿ.ಎಸ್.ಸಿ ಕೃಷಿ ಪದವಿ ವ್ಯಾಸಂಗಕ್ಕಾಗಿ ಶೇ.40 ರಿಂದ ಶೇ.50ಕ್ಕೆ ಸೀಟು ಹೆಚ್ಚಳ ಮಾಡಲಾಗಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಸ್ಥಾಪನೆ ಮಾಡಿ ರೈತರ ಮಕ್ಕಳಿಗೆ ನೆರವು ನೀಡಲಾಗುತ್ತಿದೆ ಎಂದರು.
ಪ್ರಕೃತಿ ಸಂರಕ್ಷಣೆಗೆ ವಿಶ್ವವಿದ್ಯಾಲಯ ಆರಂಭ:
ಕರ್ನಾಟಕ ರಾಜ್ಯದಲ್ಲಿ ಹೇರಳವಾದ ಸಂಪನ್ಮೂಲವಿದ್ದು, ಅದು ಸಂಪೂರ್ಣವಾಗಿ ಸದುಪಯೋಗವಾಗಬೇಕು. ಇಲ್ಲಿ ವಿಶೇಷವಾಗಿ ಪ್ರಕೃತಿಯನ್ನು ಸಂರಕ್ಷಣೆ ಮಾಡುವಂತ ವಿಶ್ವವಿದ್ಯಾಲಯಗಳನ್ನು ತೆರೆಯಬೇಕು ಎಂದು ಜಲ ಸಂರಕ್ಷಣವಾದಿ ಮತ್ತು ಪರಿಸರವಾದಿ ರಾಜೇಂದ್ರ ಸಿಂಗ್ ಹೇಳಿದರು. ಕರ್ನಾಟಕ ಒಂದು ಸುಂದರವಾದ ರಾಜ್ಯವಾಗಿದೆ. ನೀರಿನ ಸಂರಕ್ಷಣೆ ಮತ್ತು ಉಪಯೋಗದ ಕುರಿತು ಮಾಹಿತಿ ಒಳಗೊಂಡ ಪರಿಣಿತರನ್ನು ತಯಾರು ಮಾಡುವ ಕೆಲಸವನ್ನು ಆರಂಭಿಸಬೇಕಿದೆ. ಇದೊಂದು ಅದ್ಭುತ ಕೆಲಸವಾಗಿದ್ದು, ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೆ ಇದು ಮಾದರಿ ಆಗಬೇಕು. ಈ ಹಿಂದೆ ಚನ್ನಗಿರಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ಕೆರೆಯಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು, ಅದು ಅತ್ಯುತ್ತಮವಾದ ಕೆಲಸವಾಗಿದೆ. ರಾಜ್ಯ ಸರ್ಕಾರವೇ ಜಲ ವಿಶ್ವವಿದ್ಯಾಲಯವನ್ನು ಆರಂಭ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.
ತರಳುಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಗಣ್ಯರ ಸಮಾಗಮ:
ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ನೇತೃತ್ವದ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ, ನೀರಾವರಿ ನಿಗಮ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಸಪ್ಪ ಗುಂಗೆ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications