Pocso case: ಚಿತ್ರದುರ್ಗ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ, ಶ್ಯೂರಿಟಿಗೆ ಸಹಿ ಹಾಕಿದ್ದು ಯಾರು ಗೊತ್ತಾ?
ಚಿತ್ರದುರ್ಗ, ನವೆಂಬರ್, 10: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪ ಎದುರಿಸುತ್ತಿರುವ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ್ದಾರೆ.
ಮೊದಲ ಪ್ರಕರಣದಲ್ಲಿ ಜಾಮೀನು ಪಡೆದಿದ್ದು, ಎರಡನೇ ಪ್ರಕರಣ ಬಾಕಿ ಇದ್ದ ಹಿನ್ನೆಲೆಯಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿಕೆ ಮಾಡಿದೆ. ನವೆಂಬರ್ 15ಕ್ಕೆ ಮುಂದೂಡಿಕೆ ಮಾಡಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ವೇಳೆ ಸರ್ಕಾರಿ ವಕೀಲ ಹೆಚ್.ಆರ್. ಜಗದೀಶ್ ಅವರು ಆಕ್ಷೇಪಣೆ ಸಲ್ಲಿಸಿದ್ದು, ಈಗಾಗಲೇ 2ನೇ ಪ್ರಕರಣದಲ್ಲಿ ಬಾಡಿ ವಾರೆಂಟ್ ಇರುವುದರಿಂದ ಮತ್ತು ಸಾಕ್ಷ್ಯ ನಾಶ ಸಾಧ್ಯತೆ ಹಿನ್ನೆಲೆ ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ ಸಲ್ಲಿಸಿದರು.

ಮುರುಘಾ ಶ್ರೀಗಳ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ. ಅದರಲ್ಲಿ ಒಂದು ಪ್ರಕರಣಕ್ಕೆ ಈಗಾಗಲೇ ಜಾಮೀನು ಸಿಕ್ಕಿದೆ. ಈ ಜಾಮೀನು ಪ್ರತಿಯನ್ನು ಇಂದು ಮುರುಘಾ ಶರಣರ ಪರ ವಕೀಲರಾದ ಸಂದೀಪ್ ಪಾಟೀಲ್ ಇಂದು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಮೂಲಕ ಇಂದು ಬಿಡುಗಡೆಯಾಗುವ ಸಾಧ್ಯತೆ ಇತ್ತು ಎಂದೇ ಭಾವಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.
ಶ್ರೀಗಳ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಶ್ಯೂರಿಟಿ ಹಾಕಿರುವ ಪ್ರತಿಗಳನ್ನು ಪರಿಶೀಲನೆ ಮಾಡುವ ಉದ್ದೇಶದಿಂದ ಮತ್ತು ಮೂರು ದಿನಗಳ ದೀಪಾವಳಿ ಹಬ್ಬದ ರಜೆಯ ಪ್ರಯುಕ್ತ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಇನ್ನು ಶ್ರೀಗಳ ಜಾಮೀನಿಗೆ, ಶಾಸಕ ವೀರೇಂದ್ರ ಅವರ ಸಹೋದರ ಕೆ.ಸಿ.ನಾಗಾರಾಜ್ ಹಾಗೂ ಮಧುಸೂದನ್ ಎಂಬುವವರು ಶ್ಯೂರಿಟಿ ನೀಡಿದ್ದಾರೆ. ಜೊತೆಗೆ ಎರಡು ಲಕ್ಷ ಬಾಂಡ್ ಹಾಗೂ ಜಮೀನಿನ ಸಲ್ಲಿಕೆ ಮಾಡಿದ್ದಾರೆ. ನವೆಂಬರ್ 15ಕ್ಕೆ ಅರ್ಜಿ ವಿಚಾರಣೆಯಾದ ಬಳಿಕ ಬಿಡುಗಡೆ ಸಾಧ್ಯತೆಯಿದೆ ಎನ್ನಲಾಗಿದೆ.
7 ಷರತ್ತುಗಳನ್ನು ವಿಧಿಸಿ ಜಾಮೀನು
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶ್ರೀಗಳಿಗೆ ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ 7 ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು.
ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸುವಂತಿಲ್ಲ
ಚಿತ್ರದುರ್ಗ ಮುರುಘಾ ಶ್ರೀಗೆ ಜಾಮೀನು ಸಿಕ್ಕಿದೆ, ಆದರೆ ಬಿಡುಗಡೆ ಇಲ್ಲ. ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್, ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂದು ಹೇಳುವ ಮೂಲಕ ಷರತ್ತುಗಳನ್ನು ವಿಧಿಸಿದೆ. ಮೊದಲು ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಜಾಮೀನು ಲಭ್ಯವಾಗಿದ್ದು, ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಅವರು ಜೈಲಿನಲ್ಲೇ ಇರಲಿದ್ದಾರೆ.
ಹೈ ಕೋರ್ಟ್ ವಿಧಿಸಿದ ಷರತ್ತುಗಳು
ಮತ್ತೊಂದು ಪ್ರಕರಣದಲ್ಲಿ ಅರ್ಜಿ ವಿಚಾರಣೆ ಬಾಕಿದ್ದು, ಚಿತ್ರದುರ್ಗಕ್ಕೆ ಪ್ರವೇಶಿಸುವಂತಿಲ್ಲ, ಪಾಸ್‌ಪೋರ್ಸ್ ಕೋರ್ಟ್ ವಶಕ್ಕೆ ನೀಡಬೇಕು. ಇಂತಹ ಕೃತ್ಯಗಳನ್ನು ಪುನಾರವರ್ತನೆ ಮಾಡುವಂತಿಲ್ಲ. ಪಾಸ್‌ಪೋರ್ಟ್ ಕೋರ್ಟ್ ವಶಕ್ಕೆ ನೀಡಬೇಕು. ಇಬ್ಬರ ಶ್ಯೂರಿಟಿ ಒದಗಿಸಲೇಬೇಕು ಎಂದು ಷರತ್ತುಗಳನ್ನು ವಿಧಿಸಿದೆ. ಹಾಗೆಯೇ ಜಾಮೀನು ಸಿಕ್ಕರೂ ಸದ್ಯ ಬಿಡುಗಡೆಯಿಲ್ಲ ಅಂತಲೂ ಹೇಳಿದೆ.
ಪ್ರಕರಣದ ಹಿನ್ನೆಲೆ
ಚಿತ್ರದುರ್ಗದ ಮುರುಘಾ ಮಠಕ್ಕೆ ಸಂಬಂಧಿಸಿದ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಮುರುಘಾ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಬಳಿ ಅಳಲು ತೋಡಿಕೊಂಡಿದ್ದಾರು.
ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದ್ದು, ಫೋಕ್ಸೋ ಪ್ರಕರಣದಡಿ ಮುರುಘಾ ಶ್ರೀಗಳನ್ನು 2022ರ ಸೆಪ್ಟೆಂಬರ್ 1ರಂದು ಪೊಲೀಸರು ಬಂಧಿಸಿದ್ದರು.












Click it and Unblock the Notifications