ಚಿತ್ರದುರ್ಗ : ಸೊಸೆಯನ್ನು ಕೊಂದುಹಾಕಿದ ನಿವೃತ್ತ ಶಿಕ್ಷಕ
ಚಿತ್ರದುರ್ಗ, ಮಾ.4 : ಮಗನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಮಾವನೇ ಸೊಸೆಯನ್ನು ಕೊಲೆ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 15 ದಿನಗಳ ಹಿಂದೆ ಬೆಂಗಳೂರಿನಿಂದ ಸೊಸೆ ಮಾವನ ಮನೆಗೆ ಬಂದಿದ್ದಳು.
ಸೊಸೆಯನ್ನು ಕೊಲೆಮಾಡಿದ ವ್ಯಕ್ತಿಯನ್ನು ಕೃಷ್ಣಮೂರ್ತಿ (62) ಎಂದು ಗುರುತಿಸಲಾಗಿದೆ. ನಿವೃತ್ತ ಶಿಕ್ಷಕರಾಗಿರುವ ಕೃಷ್ಣಮೂರ್ತಿ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ನಿವಾಸಿಯಾಗಿದ್ದಾರೆ. ಕೃಷ್ಣಮೂರ್ತಿ ಅವರ ಪುತ್ರ ರಾಜೇಶ್‌ನನ್ನು ಕೊಲೆಯಾದ ದಿವ್ಯಾ ( 26) ವಿವಾಹವಾಗಿದ್ದರು.

ರಾಜೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 15 ದಿನಗಳ ಹಿಂದೆ ಮನೆಗೆ ಬಂದಿದ್ದರು. ರಾಜೇಶ್ ಮತ್ತು ದಿವ್ಯಾ ಮನೆಗೆ ಬಂದ ದಿನದಿಂದ ಕೃಷ್ಣಮೂರ್ತಿ ದಿವ್ಯಾಳ ಜೊತೆ ಜಗಳವಾಡುತ್ತಿದ್ದರು. ನೀನು ಮಗನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪ್ರತಿದಿನ ಜಗಳವಾಡುತ್ತಿದ್ದರು.
ಮಂಗಳವಾರ ರಾತ್ರಿ ಊಟವಾದ ಬಳಿಕವೂ ಮಾವ ಮತ್ತು ಸೊಸೆಯ ನಡುವೆ ಜಗಳ ನಡೆದಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಪುನಃ ಸೊಸೆಯೊಂದಿಗೆ ಜಗಳ ಆರಂಭಿಸಿದ ಕೃಷ್ಣಮೂರ್ತಿ, ಮಚ್ಚಿನಿಂದ ದಿವ್ಯಾಳ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಕೊಲೆ ಮಾಡಿದ್ದಾರೆ. [ಚಿತ್ರದುರ್ಗ : ಹಣ ದೋಚುತ್ತಿದ್ದ ನಕಲಿ ಸ್ವಾಮೀಜಿ ಸೆರೆ]
ಬುಧವಾರ ಬೆಳಗ್ಗೆ ಕೊಲೆಯ ಬಗ್ಗೆ ಮಾಹಿತಿ ತಿಳಿದ ಹೊಳಲ್ಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕೃಷ್ಣಮೂರ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications