ಚಿತ್ರದುರ್ಗ ಲೋಕಸಭೆ ಚುನಾವಣೆ ಫಲಿತಾಂಶ 2024: ಯಾರ ಪಾಲಿಗೆ ಕೋಟೆನಾಡಿನ ಗೆಲುವು..?

ಚಿತ್ರದುರ್ಗ, ಮೇ 28: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕೇವಲ ಒಂದು ವಾರ ಮಾತ್ರ ಬಾಕಿ ಇದ್ದು, ಇದೀಗ ಮತದಾರರ ಚಿತ್ತ ಜೂನ್ ನಾಲ್ಕರತ್ತ ಸಾಗಿದೆ. ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಕೋಟೆನಾಡು ಚಿತ್ರದುರ್ಗ ಯಾರ ಕೈ ಸೇರಲಿದೆ ಎನ್ನುವ ಕೂತುಹಲ ಕೆರಳಿಸಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದ್ದು ಕಾಂಗ್ರೆಸ್ ಮತ್ತು ಎನ್.ಡಿ.ಎ ಮೈತ್ರಿ ಅಭ್ಯರ್ಥಿಗಳ ನಡುವಿನ ಗೆಲುವಿನ ಲೆಕ್ಕಾಚಾರ ಜೋರಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಪುರುಷ- 919064, ಮಹಿಳೆ-922769, ಇತರೆ-104 ಸೇರಿದಂತೆ ಒಟ್ಟು 18,41,937 ಮತದಾರರಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ 72.74% ಶೇಕಡಾವಾರು ಮತದಾನ ನಡೆದಿದೆ.

Chitradurga Lok Sabha Election 2024 Results Who Will Win B N Chandrappa Or Govind Karjol

ಕಾಂಗ್ರೆಸ್ ಮತ್ತು ಮೈತ್ರಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರ ಅಭ್ಯರ್ಥಿಗಳು ದಲಿತ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ಕೈ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಅವರು 2014ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ 2019 ರಲ್ಲಿ ಸೋಲು ಕಂಡಿದ್ದು ಇದೀಗ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಎನ್‌ಡಿಎ ಅಭ್ಯರ್ಥಿಯಾಗಿ ಹಿರಿಯ ಅನುಭವಿ ರಾಜ್ಯ ಮಾಜಿ ಸಚಿವ ಗೋವಿಂದ ಕಾರಜೋಳ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಕೈ ಪಡೆಗೆ ಪ್ರತಿಷ್ಠೆಯ ಕಣವಾದ ಚಿತ್ರದುರ್ಗ

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದೆ. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಕಂಡಿದ್ದ ಬಿ.ಎಂ ಚಂದ್ರಪ್ಪ ಅವರು 2019ರಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ವಿರುದ್ಧ ಸೋಲು ಕಂಡಿದ್ದರು. ಇದೀಗ ಮೂರನೇ ಬಾರಿಗೆ ಅಖಾಡಕ್ಕೆ ಇಳಿದಿದ್ದು ಚಂದ್ರಪ್ಪ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಯಾಕೆಂದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿವೆ. ಪಕ್ಕದ ತುಮಕೂರು ಜಿಲ್ಲೆಯ ಶಿರಾ ಹಾಗೂ ಪಾವಗಡ ಕ್ಷೇತ್ರಗಳನ್ನು ಚಿತ್ರದುರ್ಗ ಲೋಕ ವ್ಯಾಪ್ತಿಗೆ ಒಳಪಡುತ್ತವೆ.

ಹಿರಿಯೂರು ಡಿ. ಸುಧಾಕರ್ (ಕಾಂಗ್ರೆಸ್), ಚಳ್ಳಕೆರೆ ಟಿ. ರಘುಮೂರ್ತಿ (ಕಾಂಗ್ರೆಸ್), ಹೊಸದುರ್ಗ ಬಿಜಿ. ಗೋವಿಂದಪ್ಪ (ಕಾಂಗ್ರೆಸ್), ಮೊಳಕಾಲ್ಮೂರು ಎನ್.ವೈ ಗೋಪಾಲಕೃಷ್ಣ (ಕಾಂಗ್ರೆಸ್), ಚಿತ್ರದುರ್ಗ ಕೆಸಿ ವೀರೇಂದ್ರ ಪಪ್ಪಿ (ಕಾಂಗ್ರೆಸ್), ಶಿರಾ ಟಿಬಿ ಜಯಚಂದ್ರ (ಕಾಂಗ್ರೆಸ್) ಹಾಗೂ ಪಾವಗಡ ವಿ. ವೆಂಕಟೇಶ್ (ಕಾಂಗ್ರೆಸ್) ಶಾಸಕರಾಗಿದ್ದಾರೆ. ಉಳಿದ ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.

Chitradurga Lok Sabha Election 2024 Results Who Will Win B N Chandrappa Or Govind Karjol

ಕ್ಷೇತ್ರದಲ್ಲಿ ಏಳು ಶಾಸಕರನ್ನು ಹೊಂದಿರುವ ಕೈ ಪಡೆ ಗೆಲುವಿನ ಉತ್ಸಾಹದಲ್ಲಿದೆ. ಜೊತೆಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ನಮಗೆ ಶ್ರೀರಕ್ಷೆಯಾಗಲಿದೆ. ಕೈ ಅಭ್ಯರ್ಥಿ ಸರಳತೆ ಹೊಂದಿರುವ ವ್ಯಕ್ತಿ, ಹಿಂದೊಮ್ಮೆ ಸೋತಿದ್ದರು. ಈ ಬಾರಿ ಮತದಾರರ ಆಶೀರ್ವಾದ ಕೈ ಅಭ್ಯರ್ಥಿ ಮೇಲೆ ಇದೆ. ಹೀಗಾಗಿ ಗೆಲುವು ನಮ್ಮದಾಗಲಿದೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಲೆಕ್ಕಾಚಾರವಾಗಿದೆ.

ಕೋಟೆನಾಡಿನಲ್ಲಿ ಬಿಜೆಪಿ ಲೆಕ್ಕಾಚಾರವೇನು..?

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ಅನುಭವಿ ಹಾಗೂ ಸರಳ ಸಜ್ಜನಿಕೆಯ ರಾಜಕಾರಣಿ. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಜೆಪಿ ಕಾರ್ಯಕರ್ತರಲ್ಲಿರುವುದು. ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡಲಾಗುತ್ತಿದೆ. ಉಳಿದಂತೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈ ಬಲ ಪಡಿಸಬೇಕು, ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ. ಕೇಂದ್ರ ಸರ್ಕಾರದ ಸಾಧನೆಗಳು. ಜಿಲ್ಲೆಯಲ್ಲಿ ಪ್ರಮುಖವಾಗಿ ಬಿಜೆಪಿ ಗೆದ್ದರೆ ಕಾಡುಗೊಲ್ಲರು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು, ಇನ್ನೀತರ ಅಂಶಗಳು ಬಿಜೆಪಿ ವರದಾನವಾಗಲಿದೆ.

ಜೊತೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಮತ್ತೊಂದು ಅಂಶ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ದಲಿತರು, ಕಾಡುಗೊಲ್ಲರು ಅತಿ ಹೆಚ್ಚು ಮತಗಳನ್ನು ಹೊಂದಿವೆ. ದಲಿತರು, ಕಾಡುಗೊಲ್ಲರು ಹಾಗೂ ಜೆಡಿಎಸ್ ಮತಗಳು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪಾಲಾದರೆ ಗೆಲುವು ಸುಲಭವಾಗಲಿದೆ.

Chitradurga Lok Sabha Election 2024 Results Who Will Win B N Chandrappa Or Govind Karjol

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಿನ್ನೋಟ

*ಭಾರತ ದೇಶದ ಸ್ವಾತಂತ್ರ್ಯವಾದ ನಂತರ 1952 ರಲ್ಲಿ ದೇಶದಲ್ಲಿ ಜರುಗಿದ ಮೊದಲ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್. ನಿಜಲಿಂಗಪ್ಪ ಅವರು, ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ (ಕೆಎಂಪಿಪಿ) ಅಭ್ಯರ್ಥಿ ಜಿ. ಮರುಳಪ್ಪ ಅವರನ್ನು 79152 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಹೆಚ್.ಎಸ್. ವೆಂಕಟಾಚಲಯ್ಯ ಅವರು 44211 ಮತಗಳನ್ನು ಗಳಿಸಿದ್ದರು.

*1957 ರಲ್ಲಿ ನಡೆದ ಎರಡನೆ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಪ್ರಜಾ ಸೋಶಿಯಲಿಸ್ಟ್ ಪಕ್ಷ (ಪಿಎಸ್‍ಪಿ) ದಿಂದ ಸ್ಪರ್ಧಿಸಿದ್ದ ಜೆ.ಎಂ. ಮೊಹಮದ್ ಇಮಾಮ್ ಅವರು, ಕಾಂಗ್ರೆಸ್ ಪಕ್ಷದ ಎಸ್. ರಂಗರಾವ್ ಅವರಿಗಿಂತ 11,159 ಹೆಚ್ಚು ಮತಗಳನ್ನು ಪಡೆದು ವಿಜಯಿಯಾದರು.

* 1962 ರಲ್ಲಿ ನಡೆದ ಚುನಾವಣೆಯಲ್ಲಿ ಎಸ್. ವೀರಬಸಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪ್ರಜಾ ಸೋಶಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾದ ಜಿ. ಬಸಪ್ಪ ಅವರನ್ನು 44849 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಎಸ್. ವೀರಬಸಪ್ಪ ಅವರು 172673 ಮತಗಳನ್ನು ಗಳಿಸಿದರೆ, ಜಿ. ಬಸಪ್ಪ ಅವರು 127824 ಮತಗಳನ್ನು ಪಡೆದರು. ಉಳಿದಂತೆ ಪಕ್ಷೇತರ ಅಭ್ಯರ್ಥಿ ಸಿ. ರಂಗಯ್ಯ ಅವರು ಕೇವಲ 16515 ಮತಗಳನ್ನು ಗಳಿಸಿದ್ದರು.

*1967ರ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಪುನಃ ಸ್ಪರ್ಧಿಸಿದ ಜೆ.ಎಂ. ಮಹ್ಮದ್ ಇಮಾಮ್ ಅವರು ಕಾಂಗ್ರೆಸ್‌ನ ಎಸ್. ವೀರಬಸಪ್ಪ ಅವರಿಗಿಂತ 31932 ಹೆಚ್ಚು ಮತಗಳನ್ನು ಗಳಿಸಿ ಆಯ್ಕೆಯಾದರು, ಈ ಚುನಾವಣೆಯಲ್ಲಿ ಸಿ. ರಂಗಯ್ಯ ಹಾಗೂ ಪಿ.ಹೆಚ್. ಜಯದೇವಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

*1971ರ ಚುನಾವಣೆಯಲ್ಲಿ ಎನ್.ಪಿ.ಜೆ. ಪಕ್ಷದಿಂದ ಸ್ಪರ್ಧಿಸಿದ ಕೊಂಡಜ್ಜಿ ಬಸಪ್ಪ ಅವರು ಸ್ವತಂತ್ರ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆ.ಎಂ. ಮಹ್ಮದ್ ಇಮಾಮ್ ಅವರನ್ನು 1,69,702 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯಶಾಲಿಯಾದರು. ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ರಂಗಯ್ಯ ಅವರು ಮೂರನೆ ಸ್ಥಾನ ಪಡೆದರು.

* 1977 ರ ಲೋಕಸಭಾ ಚುನಾವಣೆಯಲ್ಲಿ ಕೆ. ಮಲ್ಲಣ್ಣ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಹೆಚ್.ಸಿ. ಬೋರಯ್ಯ ಅವರಿಗಿಂತ 86654 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು, ಪಕ್ಷೇತರ ಅಭ್ಯರ್ಥಿ ಚಂದ್ರಶೇಖರಯ್ಯ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟರು.

*1980ರ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ. ಮಲ್ಲಣ್ಣ ಅವರು ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್. ಗೌಡ ಅವರನ್ನು 109361 ಮತಗಳಿಂದ ಸೋಲಿಸಿ ಎರಡನೇ ಬಾರಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್(ಯು) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್.ಸಿ. ಬೋರಯ್ಯ ಮೂರನೆ ಸ್ಥಾನ ಹಾಗೂ ಜನತಾ (ಎಸ್)ನ ಸಿ.ಆರ್. ಬಸಪ್ಪ ನಾಲ್ಕನೆ ಸ್ಥಾನ ಗಳಿಸಿದರು.

* 1984 ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಹೆಚ್. ರಂಗನಾಥ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್. ಗೌಡ ಅವರನ್ನು 56811 ಮತಗಳಿಂದ ಪರಾಭವಗೊಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದರು.

*1989 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಮೂಡಲಗಿರಿಯಪ್ಪ ಅವರು ತಮ್ಮ ಪ್ರತಿಸ್ಪರ್ಧಿಯಾದ ಜನತಾದಳ ಪಕ್ಷದ ಅಭ್ಯರ್ಥಿ ಸಣ್ಣ ಚಿಕ್ಕಪ್ಪ ಅವರನ್ನು 142193 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯದ ನಗೆ ಬೀರಿದರು. ಈ ಚುನಾವಣೆಯಲ್ಲಿ ಒಟ್ಟು 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

*1991ರ ಚುನಾವಣೆಯಲ್ಲಿ ಮತ್ತೆ ಸಿ.ಪಿ. ಮೂಡಲಗಿರಿಯಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಎಲ್.ಜಿ. ಹಾವನೂರು ಅವರನ್ನು 82512 ಮತಗಳ ಅಂತರದಿಂದ ಸೋಲಿಸಿ ಎರಡನೆ ಬಾರಿಗೆ ಆಯ್ಕೆಯಾದರು. ಈ ಚುನಾವಣೆಯಲ್ಲಿ ಒಟ್ಟು 07 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

* ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿದ್ದ 1996 ರ ಚುನಾವಣೆಯಲ್ಲಿ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಿ. ಕೋದಂಡರಾಮಯ್ಯ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಸಿ.ಪಿ. ಮೂಡಲಗಿರಿಯಪ್ಪ ಅವರನ್ನು 19382 ಮತಗಳ ಅಂತರದಿಂದ ವಿಜಯಿಯಾದರು. ಈ ಚುನಾವಣೆಯಲ್ಲಿ ಬರೋಬ್ಬರಿ 17 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು.

*1998ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಮೂಡಲಗಿರಿಯಪ್ಪ ಅವರು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಪಿ. ಕೋದಂಡರಾಮಯ್ಯ ಅವರನ್ನು 58321 ಮತಗಳಿಂದ ಪರಾಭವಗೊಳಿಸಿ ಮೂರನೆ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.

*1999ರ ಚುನಾವಣೆಯಲ್ಲಿ ನಡೆದ ತುರುಸಿನ ಸ್ಪರ್ಧೆಯಲ್ಲಿ ಕನ್ನಡ ಚಲನ ಚಿತ್ರರಂಗದ ನಟ ಶಶಿಕುಮಾರ್ ಅವರು ಜನತಾದಳ (ಯು) ಪಕ್ಷದಿಂದ ಸ್ಪರ್ಧಿಸಿ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಸಿ.ಪಿ. ಮೂಡಲಗಿರಿಯಪ್ಪ ಅವರನ್ನು ಕೇವಲ 11178 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.

*2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರು ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಪಿ. ಕೋದಂಡರಾಮಯ್ಯ ಅವರಿಗಿಂತ 37460 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಒಟ್ಟು 06 ಅಭ್ಯರ್ಥಿಗಳು ಕಣದಲ್ಲಿದ್ದರು.

*2009ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿಯಾಗಿ ಸ್ಪರ್ಧಿಸಿದ ಜನಾರ್ಧನಸ್ವಾಮಿ ಅವರು, ಕಾಂಗ್ರೆಸ್‌ನ ಬಿ. ತಿಪ್ಪೇಸ್ವಾಮಿ ಅವರಿಗಿಂತ 135656 ಮತಗಳ ಅಂತರದಿಂದ ಜಯಶಾಲಿಯಾದರು. ಈ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

*2014 ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಂ. ಚಂದ್ರಪ್ಪ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಜನಾರ್ಧನಸ್ವಾಮಿ ಅವರನ್ನು 101291 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ನೋಟಾ ಗೆ ಒಟ್ಟು 8895 ಮತಗಳು ಚಲಾವಣೆಯಾಗಿದ್ದವು.

*2019 ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಎ. ನಾರಾಯಣಸ್ವಾಮಿ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಎನ್. ಚಂದ್ರಪ್ಪ ಅವರಿಗಿಂತ 80,178 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ನೋಟಾಗೆ ಒಟ್ಟು 4,368 ಮತಗಳು ಚಲಾವಣೆಯಾಗಿದ್ದವು. ಚುನಾವಣೆಯಲ್ಲಿ ಶೇ. 70.64 ರಷ್ಟು ಮತದಾನವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+